ಹೊನ್ನಾಳಿ: ಪಟ್ಟಣದ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಸುನಿಲ್‌ಕುಮಾರ್ ನೇತೃತ್ವದಲ್ಲಿ ಪೊಲೀಸರು ಭಾನುವಾರ ಸ್ವಚ್ಛತಾ ಕಾರ್ಯ ನಡೆಯಿತು.
ಕಡತಗಳ ವಿಲೇ, ಕೊಲೆ ಹಾಗೂ ಕೊಲೆ ಯತ್ನಕ್ಕೆ ಬಳಸಿದ್ದ ವಸ್ತುಗಳನ್ನು ರಕ್ಷಿಸುವುದಕ್ಕೆ ವಿಶೇಷ ಗಮನ ನೀಡಿದರು. 2013ರಿಂದ 2024ರ ವರೆಗಿನ ಎಲ್ಲ ಕಡತಗಳನ್ನು ಸುರಕ್ಷಿತವಾಗಿಡಲು ಹಾಗೂ ಇತ್ತೀಚೆಗೆ ಡೆಂೆ ಜ್ವರ ಹೆಚ್ಚಾಗುತ್ತಿರುವ ದೃಷ್ಟಿಯಿಂದಲೂ ಇಡೀ ಠಾಣೆಯನ್ನೇ ಸ್ವಚ್ಛಗೊಳಿಸಲಾಗುತ್ತಿದೆ ಎಂದು ಪೊಲೀಸ್ ಇನ್ಸ್‌ಪೆಕ್ಟರ್ ಸುನಿಲ್‌ಕುಮಾರ್ ತಿಳಿಸಿದರು.
ಪೊಲೀಸ್ ಸಿಬ್ಬಂದಿ ಕೇವಲ ಠಾಣೆಯನ್ನು ಸ್ವಚ್ಛಗೊಳಿಸುವುದು ಮುಖ್ಯವಲ್ಲ, ಮನೆಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಮನೆಗಳಲ್ಲಿ ಹಿರಿಯರು ಹಾಗೂ ಮಕ್ಕಳಿರುವ ಕಾರಣ ಮನೆಗಳಿಗೆ ಸೊಳ್ಳೆ ಹತೋಟಿ ಮಾಡಲು ಸುತ್ತಲು ನೀರು ನಿಲ್ಲದಂತೆ ನಿಗಾ ವಹಿಸಬೇಕು. ಇದು ನಮ್ಮ ಜವಬ್ದಾರಿ ಕೂಡ ಎಂದು ಸಿಬ್ಬಂದಿಗೆ ಸಲಹೆ ಹೇಳಿದರು.
ಠಾಣೆಯಲ್ಲೇ ಒಂದು ದೊಡ್ಡ ಸಭಾಂಗಣವನ್ನು ಸ್ವಚ್ಛ ಮಾಡಿದ್ದೇವೆ. ಇನ್ನು ಈ ದೊಡ್ಡ ಕೋಣೆಯನ್ನು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲು ಬಳಸಿಕೊಳ್ಳುತ್ತೇವೆ. ಪ್ರತಿ ತಿಂಗಳಲ್ಲಿ ಮೂರು ಬಾರಿ ಪೋಕ್ಸೋ, ಡ್ರಗ್ಸ್ ಮತ್ತಿತರ ಅಕ್ರಮ ಚಟುವಟಿಕೆಗಳ ಕುರಿತು ಸಂಪನ್ಮೂಲ ವ್ಯಕ್ತಿಗಳಿಂದ ಕಾರ್ಯಾಗಾರ ಏರ್ಪಡಿಸಿ, ಜಾಗೃತಿ ಮೂಡಿಸಲಾಗುತ್ತದೆ ಎಂದರು.
ಪೊಲೀಸ್ ಇನ್ಸ್‌ಪೆಕ್ಟರ್‌ಗೆ ಸನ್ಮಾನ: ಜುಲೈ 13ರಂದು ಹೊನ್ನಾಳಿ ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ 884 ಪ್ರಕರಣಗಳು ರಾಜಿಯಾಗಿರುವುದರಿಂದ ಸೋಮವಾರ ಸಂಜೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಸನ್ಮಾನ ಹಾಗೂ ಪ್ರಶಂಸೆಯ ಪತ್ರವನ್ನು ಪೊಲೀಸ್ ಇನ್ಸ್‌ಪೆಕ್ಟರ್ ಸುನಿಲ್‌ಕುಮಾರ್ ಅವರಿಗೆ ನೀಡಲಿದ್ದಾರೆ ಎಂದು ತಿಳಿದು ಬಂದಿದೆ, ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಪ್ರಕರಣಗಳು ರಾಜೀಯಾಗುವುದಕ್ಕೆ ಹೊನ್ನಾಳಿ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ದೇವದಾಸ್ ಅವರ ಶ್ರಮವು ಹೆಚ್ಚಿದೆ ಎಂದು ಪಿಐ ಸುನಿಲ್‌ಕುಮಾರ್ ತಿಳಿಸಿದರು.
ಸ್ವಚ್ಛತಾ ಕಾರ್ಯದಲ್ಲಿ ಪಿಎಸ್‌ಐ ನಿರ್ಮಲಾ, ಎಎಸ್‌ಐ ಹರೀಶ್, ಸಿಬ್ಬಂದಿ ಜಗದೀಶ್, ಮಲ್ಲೇಶ್, ಗಣೇಶ್, ರಾಘವೇಂದ್ರ, ಬಸವರಾಜ್, ಸುನಿಲ್, ಸುರೇಶ್, ಹನುಮಂತ, ಕಿರಣ್, ರವಿ ಇತರರಿದ್ದರು.