ವಾರದಲ್ಲಿ ಮೂವರು ರೈತರ ಆತ್ಮಹತ್ಯೆ

ಹೊನ್ನಾಳಿ: ಹೊನ್ನಾಳಿ- ನ್ಯಾಮತಿ ಅವಳಿ ತಾಲೂಕುಗಳಲ್ಲಿ ಸಾಲಬಾಧೆ ತಾಳಲಾರದೇ ಒಂದೇ ವಾರದಲ್ಲಿ ಮೂವರು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ.

ನ.21ರಂದು ಹೊನ್ನಾಳಿಯ ಸಿದ್ದಪ್ಪನಕೇರಿ ರೈತ ಕಡ್ಡಿಪುಡಿ ಅಣ್ಣಪ್ಪ (43) ಜಮೀನಿ ನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಬ್ಯಾಂಕೊಂದರಲ್ಲಿ 9 ಲಕ್ಷ ರೂ., ಸಹಕಾರ ಸಂಘದಲ್ಲಿ 1 ಲಕ್ಷ ರೂ. ಸಾಲ ಮಾಡಿದ್ದರು.

ತಾಲೂಕಿನ ಕಮ್ಮಾರಗಟ್ಟೆ ತಾಂಡಾದ ರೈತ ಸಂತೋಷ್ ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಬ್ಯಾಂಕ್, ಖಾಸಗಿಯಾಗಿ ಅಂದಾಜು 3.50 ಲಕ್ಷ ರೂ. ಸಾಲ ಮಾಡಿದ್ದರು.

ನ್ಯಾಮತಿ ತಾಲೂಕಿನ ಹಳೇ ಜೋಗದ ರೈತ ಹಾಲೇಶಪ್ಪ (50) ಜಮಿನಿನಲ್ಲಿ ವಿಷ ಸೇವಿಸಿದ್ದರು. ಅವಳಿ ತಾಲೂಕಿನಲ್ಲಿ ಒಂದೇ ವಾರದಲ್ಲಿ ಮೂವರು ರೈತರು ಆತ್ಮಹತ್ಯೆ ಮಾಡಿಕೊಂಡಿರುವುದು ಆತಂಕ ಮೂಡಿಸಿದೆ.

ಶೀಘ್ರ ಸಾಲಮನ್ನಾಕ್ಕೆ ಒತ್ತಾಯ: ಸಾಲಬಾಧೆಯಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು, ಕೂಡಲೇ ಸರ್ಕಾರ ಸಾಲಮನ್ನಾ ಮಾಡಿ ಋಣಮುಕ್ತ ಪತ್ರ ನೀಡುವಂತೆ ತಾಲೂಕು ರೈತ ಸಂಘದ ಮುಖಂಡ ಕಡದಕಟ್ಟೆ ಜಗದೀಶ್ ಆಗ್ರಹಿಸಿದ್ದಾರೆ.