ಎಕೆ ಕಾಲನಿಯಲ್ಲಿ ಮದ್ಯ ಮಾರಾಟ ತಡೆಗೆ ಆಗ್ರಹ

ಹೊನ್ನಾಳಿ: ತಾಲೂಕಿನ ಬಹುತೇಕ ಗ್ರಾಮಗಳ ಎಕೆ ಕಾಲನಿಗಳಲ್ಲಿ ಅಕ್ರಮ ಮದ್ಯ ಮಾರಾಟ ತಡೆಯುವಂತೆ ಮಲ್ಲಿಗೇನಹಳ್ಳಿ ಗ್ರಾಮಸ್ಥ ರಾಜಪ್ಪ ಶಾಸಕರಿಗೆ ಮನವಿ ಸಲ್ಲಿಸಿದರು.

ತಾಲೂಕು ಕಚೇರಿ ಸಭಾಂಗಣದಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಪರಶಿಷ್ಟ ಜಾತಿ, ಪಂಗಡಗಳ ಕುಂದು-ಕೊರತೆ ಸಭೆಯಲ್ಲಿ ಮಾತನಾಡಿ, ಕೂಲಿ ಮಾಡಿದ ಹಣವನ್ನು ಜನರು ಕುಡಿತಕ್ಕೆ ಸುರಿಯುತ್ತಿದ್ದಾರೆ. ಇದರಿಂದ ಕುಟುಂಬಗಳು ಬೀದಿಗೆ ಬರುವ ಸ್ಥಿತಿ ಇದೆ ಎಂದರು.

ಇದಕ್ಕೆ ದನಿಗೂಡಿಸಿದ ದಲಿತ ಮುಖಂಡ ಉಮೇಶ್, ಗ್ರಾಮದ ದೇವಸ್ಥಾನ, ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡಲಾಗುತ್ತಿದೆ. ಇದನ್ನು ತಡೆಯಲು ಅಬಕಾರಿ ಅಧಿಕಾರಿಗಳಿಗೆ ಸೂಚಿಸುವಂತೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ರೇಣುಕಾಚಾರ್ಯ, ಈ ಬಗ್ಗೆ ಮಾಹಿತಿ ಪಡೆದು ಸ್ಥಳಾಂತರಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ಭಾಗ್ಯಜ್ಯೋತಿ, ಕುಟಿರ ಜ್ಯೋತಿ ಯೋಜನೆಗಳ ಫಲಾನುಭವಿಗಳಿಗೆ ಸರ್ಕಾರ ಉಚಿತ ವಿದ್ಯುತ್ ನೀಡುತ್ತದೆ. ಆದರೆ, ಬೆಸ್ಕಾಂ ಅಧಿಕಾರಿಗಳು ಬಿಲ್ ಕಟ್ಟುವಂತೆ ಪ್ರತಿದಿನ ಮನೆ ಬಾಗಿಲಿಗೆ ಬರುತ್ತಾರೆ ಎಂದು ಬೆನಕನಹಳ್ಳಿ ಹನುಮಂತಪ್ಪ ಆರೋಪಿಸಿದರು.

ಬೆಸ್ಕಾಂ ಅಧಿಕಾರಿ ಶ್ರೀನಿವಾಸ್ ಸಮಜಾಯಿಷಿ ನೀಡಿ, ಈ ಯೋಜನೆಯಡಿ 40 ಯುನಿಟ್‌ವರೆಗೆ ವಿನಾಯಿತಿ ಇದ್ದು, ಇದನ್ನು ಮೀರಿದರೆ ಹೆಚ್ಚುವರಿ ವಿದ್ಯುತ್ ಬಳಕೆಗೆ ಹಣ ಪಾವತಿಸಬೇಕು ಎಂದು ಹೇಳಿದರು.

ತಾಲೂಕಿನ ವಿವಿಧೆಡೆ ಸ್ಮಶಾನಕ್ಕೆ ಭೂಮಿ ಮಂಜೂರಾಗಿದ್ದರೂ ಹದ್ದುಬಸ್ತ್ ಮಾಡದ ಕಾರಣ ಹೊಲಗದ್ದೆಗಳಲ್ಲಿ ರಸ್ತೆ ಪಕ್ಕದಲ್ಲೇ ಶವಸಂಸಾರ ಮಾಡಬೇಕಾದ ದುಃಸ್ಥಿತಿ ಇದೆ ಎಂದು ತಿಮ್ಮೇನಹಳ್ಳಿ ಚಂದ್ರಪ್ಪ ತಿಳಿಸಿದರು. ತಹಸೀಲ್ದಾರ್ ತುಷಾರ್ ಬಿ. ಹೊಸೂರ್, ಎಲ್ಲಾ ಗ್ರಾಮಗಳ ಸ್ಮಶಾನದ ಜಾಗ ಹದ್ದುಬಸ್ತ್ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ತಹಸೀಲ್ದಾರ್ ತುಷಾರ್ ಬಿ. ಹೂಸೂರ್, ತಾಪಂ ಅಧಿಕಾರಿ ಕೆ.ಸಿ. ಮಲ್ಲಿಕಾರ್ಜುನ, ಜಿಪಂ ಸದಸ್ಯ ಸುರೇಂದ್ರನಾಯ್ಕ, ತಾಪಂ ಪ್ರಭಾರ ಅಧ್ಯಕ್ಷ ರವಿಕುಮಾರ್, ನ್ಯಾಮತಿ ಉಪತಹಸೀಲ್ದಾರ್ ನ್ಯಾಮತಿ ನಾಗರಾಜ್, ಸಮಾಜ ಕಲ್ಯಾಣ ಇಲಾಖಾಧಿಕಾರಿ ದೊಡ್ಡಬಸಪ್ಪ ಇತರರಿದ್ದರು.

ತಡವಾಗಿ ಬಂದ ಶಾಸಕ, ತಹಸೀಲ್ದಾರ್: ಬೆಳಗ್ಗೆ ನಿಗದಿಯಾಗಿದ್ದ ಸಭೆಗೆ ಶಾಸಕರು, ತಹಸೀಲ್ದಾರ್ ತಡವಾಗಿ ಬಂದರು. ಕೆಲ ದಲಿತ ಮುಖಂಡರು ಇದನ್ನು ಖಂಡಿಸಿ ಅವರ ವಿರುದ್ಧ ಘೋಷಣೆ ಕೂಗಿ ಸಭೆಯಿಂದ ಹೊರನಡೆದರು. ತಹಸೀಲ್ದಾರ್ ಮನವೊಲಿಸುವ ಪಯತ್ನ ವಿಫಲವಾಯಿತು.