ಬುದ್ಧಿ ಹೇಳುವರಿಂದ ಬದುಕು ಭದ್ರ

ಹೊನ್ನಾಳಿ: ವಿದ್ಯಾರ್ಥಿಗಳಿಗೆ ಬೈದು ಬುದ್ದಿ ಹೇಳಿದವರು ಮಾತ್ರ ಭವಿಷ್ಯ ರೂಪಿಸಿಬಲ್ಲ ಶಕ್ತಿವಂತರು ಎಂದು ಶಿವಮೊಗ್ಗ ಶೆಟ್ಟಿಹಳ್ಳಿ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕ ಡಾ.ನಾಗೇಶ್ ಬಿದರಗೋಡು ಹೇಳಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿದ್ಯಾರ್ಥಿ ದೆಸೆಯಲ್ಲೇ ಶಿಸ್ತು, ಸಂಯಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರೂಢಿಸಿಕೊಳ್ಳಬೇಕು. ಬಹಳಷ್ಟು ವಿದ್ಯಾರ್ಥಿಗಳು ಕಲಿಯುವ ಸಮಯದಲ್ಲಿ ಅಸಡ್ಡೆ ತೋರಿಸಿ ತಮ್ಮ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.

ಎದೆಯೊಳಗೆ ಹದವಿದ್ದರೆ ವಿದ್ಯೆಯ ಬೀಜ ಬಿತ್ತಬಹುದೆಂದು ಹಿರಿಯರು ಹೇಳುತ್ತಿದ್ದರು. ಇಂದಿಗೂ ಏನೂ ಕಲಿಯದವರಿಗೆ ಎದೆ ಸೀಳಿದರೆ ಮೂರಕ್ಷರವಿಲ್ಲ ಎಂದು ಹಳ್ಳಿಗಳಲ್ಲಿ ಮೂದಲಿಸುವುದನ್ನು ನಾವು ಕಾಣುತ್ತಿದ್ದೇವೆ. ಅಂಥ ಸ್ಥಿತಿಯನ್ನು ವಿದ್ಯಾರ್ಥಿಗಳು ತಂದುಕೊಳ್ಳಬಾರದು ಎಂದರು.

ಕಾಲೇಜು ಪ್ರಾಂಶುಪಾಲ ಶಿವಬಸಪ್ಪ ಎಚ್.ಎತ್ತಿನಹಳ್ಳಿ ಅಧ್ಯಕ್ಷತೆ ವಹಿಸಿದ್ದರು. ದೈಹಿಕ ಶಿಕ್ಷಣ ನಿರ್ದೇಶಕ ಪಿ.ಎಸ್.ಹರೀಶ್, ರೆಡ್‌ಕ್ರಾಸ್ ಯುವ ಘಟಕದ ಸಂಚಾಲಕ ಎಂ.ಆರ್.ಲೋಕೇಶ್, ಉಪನ್ಯಾಸಕರಾದ ಬಿ.ಸಿ.ಪಾಟೀಲ್, ಪಾರ್ಥಸಾರಥಿ ಇತರರು ಉಪಸ್ಥಿತರಿದ್ದರು.