More

    ಹೊನ್ನಾಳಿ ಡಿಪೋ ಮ್ಯಾನೇಜರ್‌ಗೆ ನೋಟಿಸ್| ಶಾಸಕ ರೇಣುಕಾಚಾರ್ಯ ಬಸ್ ಚಾಲನೆ ಮಾಡಿದ ಪ್ರಕರಣ

    ಶಿವಮೊಗ್ಗ: ಹೊಸ ಮಾರ್ಗದಲ್ಲಿ ಬಸ್ ಸಂಚಾರ ಆರಂಭದ ವೇಳೆ ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಕೆಎಸ್‌ಆರ್‌ಟಿಸಿ ಬಸ್ ಚಾಲನೆ ಮಾಡಿದ ಪ್ರಕರಣ ವಿವಾದದ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಹೊನ್ನಾಳಿ ಡಿಪೋ ಮ್ಯಾನೇಜರ್‌ಗೆ ಶಿವಮೊಗ್ಗ ವಿಭಾಗೀಯ ನಿಯಂತ್ರಣಾಧಿಕಾರಿ ಟಿ.ಆರ್. ನವೀನ್‌ಕುಮಾರ್ ವಿವರಣೆ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ.

    ಶನಿವಾರ ಹೊನ್ನಾಳಿ ಗ್ರಾಮಾಂತರ ಮಾರ್ಗದ ಬಸ್‌ಸಂಚಾರ ಉದ್ಘಾಟನೆ ಕಾರ್ಯಕ್ರಮದಲ್ಲಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರು ಚಾಲಕನ ಸಮವಸ್ತ್ರ ಧರಿಸಿ ಸುಮಾರು 60 ಕಿಮೀ ಬಸ್ ಓಡಿಸಿದ್ದರು ಎನ್ನಲಾಗಿದೆ. ಈ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗಿರುವುದನ್ನು ಗಮನಿಸಿ ವಿವರಣೆ ನೀಡುವಂತೆ ಕೆಎಸ್‌ಆರ್‌ಟಿಸಿ ಶಿವಮೊಗ್ಗ ವಿಭಾಗೀಯ ನಿಯಂತ್ರಣಾಧಿಕಾರಿ ಸ್ವಪ್ರೇರಣೆಯಿಂದ ಹೊನ್ನಾಳಿ ಘಟಕ ವ್ಯವಸ್ಥಾಪಕ ಮಹೇಶ್ವರಪ್ಪ ಅವರಿಗೆ ನೋಟಿಸ್ ನೀಡಿದ್ದಾರೆ.

    ರೇಣುಕಾಚಾರ್ಯ ಏನುಮಾಡಿದ್ರು: ಚಾಲಕರ ಸಮವಸ್ತ್ರ ಧರಿಸಿ ಕೆಎಸ್​ಆರ್​ಟಿಸಿ ಬಸ್​ ಚಲಾಯಿಸಿದ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ

    ಗೊಲ್ಲರಹಳ್ಳಿ, ಬೆನಕಹಳ್ಳಿ, ಉಜ್ಜನಿಪುರ, ಉಜ್ಜನಿಪುರ ತಾಂಡ, ಹುಡ್ಕಾಪುರ, ಬೀರಗೊಂಡನಹಳ್ಳಿ, ರಾಂಪುರ, ಸಾಸ್ವೇಹಳ್ಳಿ ಗ್ರಾಮಗಳಿಗೆ ತೆರಳಿ ನಂತರ ಇದೇ ಗ್ರಾಮಗಳ ಮೂಲಕ ಹೊನ್ನಾಳಿ ತಲುಪಿದ್ದ ಶಾಸಕರು ಸಂಜೆ ಹೊನ್ನಾಳಿ ಖಾಸಗಿ ಬಸ್ ನಿಲ್ದಾಣದಿಂದ ರಾಮೇಶ್ವರ, ನ್ಯಾಮತಿ ಮೂಲಕ ಶಿವಮೊಗ್ಗ ತಲುಪಿದ್ದರು. ಶಾಸಕ ರೇಣುಕಾಚಾರ್ಯ ಅವರು ತಮ್ಮ ಫೇಸ್‌ಬುಕ್ ಖಾತೆಯಲ್ಲೂ ಬಸ್ ಓಡಿಸಿದ್ದ ಬಗ್ಗೆ ಶನಿವಾರ ಫೋಟೊ ಹಾಕಿದ್ದರು.

    ಶಾಸಕರಿಗೆ ಬಸ್ ಓಡಿಸಲು ಅನುಮತಿ ನೀಡಿದ್ದರ ಬಗ್ಗೆ ವಿವರಣೆ ಕೇಳಿ ಹೊನ್ನಾಳಿ ಡಿಪೋ ಮ್ಯಾನೇಜರ್‌ಗೆ ನೋಟಿಸ್ ನೀಡಲಾಗಿದೆ. ವಿವರಣೆ ನೀಡಿದ ಬಳಿಕ ಮುಂದಿನ ಕ್ರಮದ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು
    ಟಿ.ಆರ್. ನವೀನ್‌ಕುಮಾರ್, ಶಿವಮೊಗ್ಗ ಕೆಎಸ್‌ಆರ್‌ಟಿಸಿ ಡಿಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts