ರೈತರಿಗೆ ಚಿಂತೆ ಹತ್ತಿಸಿದ ಚಿತ್ತ ಮಳೆ

ಹೊನ್ನಾಳಿ: ಗುರುವಾರ, ಶುಕ್ರವಾರ ನಾಲ್ಕೈದು ತಾಸು ಸುರಿದ ಚಿತ್ತ ಮಳೆಗೆ ಹಿರೇಕಲ್ಮಠ, ಸುಂಕದಕಟ್ಟೆ ರಸ್ತೆ ಸೇರಿ ತಾಲೂಕಿನ ನೂರಾರು ಹೆಕ್ಟೇರ್ ಭತ್ತದ ಗದ್ದೆಗಳು ಜಲಾವೃತವಾಗಿವೆ. ಸಂಪೂರ್ಣ ಬೆಳೆ ಹಾನಿಯ ಭೀತಿ ಎದುರಾಗಿದೆ.

ಈ ವ್ಯಾಪ್ತಿಯ ಜಮೀನುಗಳಿಗೆ ತೆರಳುವ ರಸ್ತೆಯಲ್ಲೂ ನೀರು ಹರಿಯುತ್ತಿದ್ದು, ಶನಿವಾರವೂ ನೀರಿನ ಹರಿವು ಇತ್ತು. ಈ ಮಾರ್ಗದ ಪ್ರಯಾಣಿಕರಿಗೆ ಸಮಸ್ಯೆ ಉಂಟಾಯಿತು.

ತಾಲೂಕಿನ ಕೆಲ ಗ್ರಾಮಗಳಲ್ಲಿ ಭತ್ತದ ಗದ್ದೆಗಳು ನೀರಿಲ್ಲದೇ ಒಣಗುತ್ತಿವೆ. ಇಲ್ಲಿ ಗದ್ದೆಗಳು ನೀರಿನಲ್ಲಿ ಮುಳುಗಿವೆ. ಅತಿವೃಷ್ಟಿ, ಅನಾವೃಷ್ಟಿ ಎರಡರಿಂದಲೂ ಹಾನಿ ಅನುಭವಿಸುವಂತಾಗಿದೆ ಎನ್ನುತ್ತಾರೆ ರೈತರು.

ಹೊನ್ನಾಳಿ ಪಟ್ಟಣದ ತ್ಯಾಜ್ಯ ಸರಾಗವಾಗಿ ಹರಿಯಲು ಸೂಕ್ತ ವ್ಯವಸ್ಥೆ ಮಾಡಿಲ್ಲ. ಕಾರಣ ಹೊಲಗಳಿಗೆ ನುಗ್ಗುತ್ತಿದೆ. ಈ ಬಗ್ಗೆ ತಹಸೀಲ್ದಾರ್, ಪಪಂ ಮುಖ್ಯಾಧಿಕಾರಿಗೆ ಮನವಿ ಮಾಡಿದರೂ ಕ್ರಮ ಜರುಗಿಸಿಲ್ಲ ಎಂದು ಕೃಷಿಕರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಒತ್ತಾಯ: ಕಂದಾಯ, ಕೃಷಿ ಇಲಾಖೆ ಅಧಿಕಾರಿಗಳು ತಕ್ಷಣ ಸಮೀಕ್ಷೆ ನಡೆಸಿ ಮಳೆಯಿಂದ ಹಾನಿಗೊಳಗಾಗಿರುವ ರೈತರಿಗೆ ಸಮರ್ಪಕ ಪರಿಹಾರ ನೀಡಬೇಕು ಎಂದು ರೈತರು ಒತ್ತಾಯಿಸಿದರು.