ಸಿನಿಮಾ, ಧಾರಾವಾಹಿಯಲ್ಲಿ ಸಣ್ಣಪುಟ್ಟ ಪಾತ್ರ ಮಾಡುತ್ತಿದ್ದವಳು ಹನಿಟ್ರ್ಯಾಪ್​ನಲ್ಲಿ​ ಸಿಕ್ಕಿಬಿದ್ದಳು!

ಹಾಸನ: ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದ ಯುವತಿಯೊಬ್ಬಳು ಹನಿಟ್ರ್ಯಾಪ್ ಪ್ರಕರಣದಲ್ಲಿ ಪೊಲೀಸರ ಅತಿಥಿಯಾಗಿರುವ ಘಟನೆ ನಡೆದಿದೆ.

ಅರ್ಪಿತಾ ಬಂಧಿತ ಆರೋಪಿ. ಇವಳೊಂದಿಗೆ ಪವನ, ಕಿರಣ, ದೊರೆ ಹಾಗೂ ಮಹೇಶ್​ ಎಂಬ ಇನ್ನಿತರ ಆರೋಪಿಗಳನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಘಟನೆ ಬೆಳಕಿಗೆ ಬಂದಿದ್ದು ಹೇಗೆ?
ಕಳೆದ ಒಂದು ತಿಂಗಳ ಹಿಂದೆ ಯುವಕನೊಬ್ಬ ಬೈಕ್​ನಲ್ಲಿ ತೆರಳುವಾಗ ಯುವತಿಯೊಬ್ಬಳು ಡ್ರಾಪ್​ ಕೇಳುವ ನೆಪದಲ್ಲಿ ಆತನನ್ನು ನಿಲ್ಲಿಸಿ, ತನ್ನ ಸಹಚರರಿಂದ ಆತನ ಮೇಲೆ ಹಲ್ಲೆ ಮಾಡಿ, ಅಪಹರಿಸಿಕೊಂಡು ಕಾರಿನಲ್ಲಿ ನಗರದಾದ್ಯಂತ ಸುತ್ತಾಡಿ ಆತನ ಬಳಿಯಿದ್ದ ನಗದು, ಎಟಿಎಂ ಕಾರ್ಡ್​ ಹಾಗೂ ಮೊಬೈಲ್​ ಕದ್ದು ಪರಾರಿಯಾಗಿದ್ದರು. ಈ ಸಂಭಂದ ಹಾಸನ ಜಿಲ್ಲೆಯ ಗಂಡಸಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ನಡೆಸಿದಾಗ ಪ್ರಕರಣ ಬಯಲಿಗೆ ಬಂದಿರುವುದಾಗಿ ಪೊಲೀಸ್​ ವರಿಷ್ಠಾಧಿಕಾರಿ ಪ್ರಕಾಶ್​ ಗೌಡ ತಿಳಿಸಿದ್ದಾರೆ.

ಹನಿಟ್ರ್ಯಾಪ್​ ಹೇಗೆ?
ಪವನ, ಕಿರಣ, ದೊರೆ ಹಾಗೂ ಮಹೇಶ್​​ ಎಂಬ ಆರೋಪಿಗಳು ಅರ್ಪಿತಾಳನ್ನು ಬಳಸಿಕೊಂಡು ನಕಲಿ ಫೇಸ್​ಬುಕ್​ ಖಾತೆಯನ್ನು ತೆರೆದು ಕೆಲವು ವ್ಯಕ್ತಿಗಳನ್ನು ಗುರುತಿಸಿ, ಅವರ ಮಾಹಿತಿಯನ್ನು ಸಂಗ್ರಹಿಸಿಕೊಳ್ಳುತ್ತಿದ್ದರು. ಫೇಸ್​ಬುಕ್​ ಮೂಲಕ ಸಂಪರ್ಕಿಸಿ ಅವರನ್ನು ನಂಬಿಸಿ ಗುಪ್ತ ಸ್ಥಳಕ್ಕೆ ಕರೆಸಿಕೊಂಡು ಹಲ್ಲೆ ಮಾಡಿ ನಗದು, ಚಿನ್ನ ಹಾಗೂ ಇನ್ನಿತರ ವಸ್ತುಗಳನ್ನು ಕಸಿದುಕೊಳ್ಳುತ್ತಿದ್ದರು. ಆರೋಪಿಗಳ ವಿರುದ್ಧ ಬೇರೆ ಬೇರೆ ಠಾಣೆಯಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ.

ಬಂಧಿತರಿಂದ ಎರಡು ಕಾರು, ಒಂದು ಬೈಕ್, ಚಿನ್ನಭಾರಣ ಹಾಗೂ ಇಪ್ಪತ್ತು ಸಾವಿರ ನಗದನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟು ಹತ್ತುಮಂದಿ ಯುವಕರಿಗೆ ವಂಚನೆ ಮಾಡಲಾಗಿದೆ. (ದಿಗ್ವಿಜಯ ನ್ಯೂಸ್​)