ಹನಿಟ್ರ್ಯಾಪ್… ಹುಷಾರು

<< ಹನ್ನೆರಡು ತಿಂಗಳ ಅವಧಿಯಲ್ಲಿ 390 ಪ್ರಕರಣ ಬಹಿರಂಗ>>

| ಅವಿನಾಶ ಮೂಡಂಬಿಕಾನ

ಬೆಂಗಳೂರು: ಕೊಲೆ, ಸುಲಿಗೆ, ಕಳ್ಳತನ, ದರೋಡೆ ಪ್ರಕರಣಗಳು ಒಂದೆಡೆ ಯಾದರೆ, ಕರ್ನಾಟಕದಲ್ಲೀಗ ಹನಿಟ್ರ್ಯಾಪ್ ಎಂಬ ಮೋಹದ ಬಲೆಗೆ ಅನೇಕರು ಹಣ-ಮಾನ ಕಳೆದುಕೊಳ್ಳುತ್ತಿದ್ದಾರೆ. ಪ್ರೀತಿ, ಪ್ರೇಮದ ನಾಟಕವಾಡಿ ಪ್ರಣಯದಾಟಕ್ಕೆ ಕರೆದು, ಬ್ಲಾ್ಯಕ್​ವೆುೕಲ್ ಮಾಡಿ ಸುಲಿಗೆ ಮಾಡುವ ದಂಧೆ ರಾಜ್ಯಾದ್ಯಂತ ವ್ಯಾಪಿಸಿದ್ದು, ಕಳೆದ 12 ತಿಂಗಳಲ್ಲಿ 390 ಪ್ರಕರಣಗಳು ಬಹಿರಂಗವಾಗಿವೆ. ನಿತ್ಯಜೀವನದಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆ ಅನಿವಾರ್ಯವಾಗುತ್ತಿರುವಂತೆಯೇ, ಫೇಸ್ ಟು ಫೇಸ್ ಮಾತನಾಡುವವರಿಗಿಂತ ಫೇಸ್​ಬುಕ್​ನಲ್ಲಿ ಹರಟುವವರೇ ಜಾಸ್ತಿಯಾಗಿದ್ದಾರೆ! ಒಂದೆಡೆ ದುಡ್ಡು ಹೊಡೆಯುವ ಸೈಬರ್ ಕಳ್ಳರ ಕಾಟ ಹೆಚ್ಚಾಗುತ್ತಿದ್ದರೆ, ಮತ್ತೊಂದೆಡೆ ಆನ್​ಲೈನ್ ವೇಶ್ಯಾವಾಟಿಕೆಯ ಮುಂದುವರಿದ ರೂಪವಾಗಿ ಹನಿಟ್ರ್ಯಾಪ್ ಎಂಬ ಬ್ಲ್ಯಾಕ್​ವೆುೕಲ್ ದಂಧೆ ವ್ಯಾಪಿಸುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಪರಿಚಯ ಮಾಡಿಕೊಂಡು ಸಲುಗೆಯಿಂದ ವರ್ತಿಸಿ ವಂಚಿಸುವ ಪ್ರಕರಣಗಳು ಹೆಚ್ಚುತ್ತಿವೆ. ರಾಜ್ಯದಲ್ಲಿ 2017ರ ಏಪ್ರಿಲ್​ನಿಂದ 2018 ಏ.ವರೆಗೆ 390ಕ್ಕೂ ಅಧಿಕ ಹನಿಟ್ರ್ಯಾಪ್ ಪ್ರಕರಣಗಳು ಪೊಲೀಸ್ ಠಾಣೆ ಮೆಟ್ಟಿಲೇರಿವೆ. ಠಾಣೆಗೆ ಬರದೆ ಬೆಳಕಿಗೆ ಬಾರದ ಪ್ರಕರಣ ಅವೆಷ್ಟಿವೆಯೋ ಲೆಕ್ಕಕ್ಕೆ ಸಿಗುವುದಿಲ್ಲ ಎಂದು ಪೊಲೀಸರೇ ಹೇಳುತ್ತಾರೆ.

ಭಯವೇ ಬಂಡವಾಳ: ಹನಿಟ್ರ್ಯಾಪ್​ಗೊಳಗಾದವರಲ್ಲಿ ಬಹುತೇಕರು ಮಾನಕ್ಕೆ ಅಂಜಿ ಠಾಣೆ ಮೆಟ್ಟಿಲೇರುವುದಿಲ್ಲ. ಪೊಲೀಸರ ಬಳಿ ಹೋದರೆ ಸಾರ್ವಜನಿಕವಾಗಿ ಮುಜುಗರಕ್ಕೀಡಾಗಬೇಕೆಂಬ ಆತಂಕದಲ್ಲಿ ಮೋಸ ಹೋದವರು ಸುಮ್ಮನಾಗುವುದರಿಂದ ದಂಧೆಕೋರರ ಹಾವಳಿ ಹೆಚ್ಚಾಗುತ್ತಿವೆ.

ಆನ್​ಲೈನ್ ವೇಶ್ಯಾವಾಟಿಕೆ

ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಬಿಹಾರ, ಬಾಂಗ್ಲಾದೇಶ, ನೇಪಾಳ, ಮಧ್ಯಪ್ರದೇಶ ಸೇರಿ ಹೊರ ರಾಜ್ಯ ಹಾಗೂ ಹೊರ ದೇಶಗಳಿಂದ ಯುವತಿಯರನ್ನು ಕರೆಸಿಕೊಂಡು ವೇಶ್ಯಾವಾಟಿಕೆ ನಡೆಸಲಾಗುತ್ತಿದೆ. ಆನ್​ಲೈನ್ ವೆಬ್​ಸೈಟ್ ಮೂಲಕ ಗಿರಾಕಿಗಳನ್ನು ಸಂರ್ಪಸಿ ದಂಧೆ ನಡೆಸುತ್ತಾರೆ.

ಆನ್​ಲೈನ್ ಹನಿಟ್ರ್ಯಾಪ್ ಬಗ್ಗೆ ಜನರು ಎಚ್ಚರ ದಿಂದ ಇರಬೇಕು. ಈಚೆಗೆ ಇಂತಹ ಪ್ರಕರಣ ಹೆಚ್ಚುತ್ತಿವೆ. ವಂಚನೆಗೊಳ ಗಾದವರು ಠಾಣೆ ಮೆಟ್ಟಿಲೇರಲು ಹಿಂದೇಟು ಹಾಕುತ್ತಾರೆ.

| ಅಜಯ್ ಹಿಲೋರಿ, ಡಿಸಿಪಿ-ಪೂರ್ವ ವಿಭಾಗ

 

ಹನಿಟ್ರ್ಯಾಪ್ ದಂಧೆ ಹೇಗೆ?

ಉದ್ಯಮಿಗಳು, ಶ್ರೀಮಂತ ಕುಟುಂಬದ ಮಕ್ಕಳು, ಪ್ರತಿಷ್ಠಿತ ಹುದ್ದೆಯಲ್ಲಿರುವ ಅಧಿಕಾರಿಗಳೇ ವಂಚಕರ ಟಾರ್ಗೆಟ್. ಶ್ರೀಮಂತ ಹಿನ್ನೆಲೆಯವರನ್ನು ಗುರುತಿಸಿ ಫೋನ್, ಫೇಸ್​ಬುಕ್, ವಾಟ್ಸ್​ಆಪ್, ಟ್ವಿಟರ್, ಇನ್ಸ್​ಟಾಗ್ರಾಂಗಳಲ್ಲಿ ಯುವತಿಯರು ಫ್ರೆಂಡ್ ರಿಕ್ವೆಸ್ಟ್ ಕಳುಹಿಸುತ್ತಾರೆ. ಫ್ರೆಂಡ್ ಆದ ಬಳಿಕ ಚಾಟಿಂಗ್ ಮಾಡುತ್ತ ಹತ್ತಿರವಾಗುತ್ತಾರೆ. ಬಳಿಕ ಮೊಬೈಲ್ ನಂಬರ್ ವಿನಿಮಯ ಮಾಡಿಕೊಂಡು ಅನುನಯದ ಮಾತುಗಳ ಮೂಲಕ ಬಲೆಗೆ ಬೀಳಿಸಿಕೊಳ್ಳುತ್ತಾರೆ. ಭೇಟಿ ಮಾಡುವ ನೆಪದಲ್ಲಿ ಮನೆಗೆ ಕರೆಸಿಕೊಂಡು ಸಲುಗೆಯಿಂದ ವರ್ತಿಸುತ್ತಾರೆ, ಏಕಾಂತದ ದೃಶ್ಯಗಳನ್ನು ವಿಡಿಯೋ ಅಥವಾ ಫೋಟೋ ತೆಗೆದುಕೊಳ್ಳುತ್ತಾರೆ. ಬಳಿಕ ಅವುಗಳನ್ನು ಅಂತರ್ಜಾಲದಲ್ಲಿ ಹರಿಬಿಟ್ಟು ಮಾನ ಕಳೆಯುವುದಾಗಿ ಬ್ಲ್ಯಾಕ್​ವೆುೕಲ್ ಮಾಡಿ ಹಣ ಸುಲಿಗೆ ಮಾಡುತ್ತಾರೆ.

ಎಲ್ಲೆಲ್ಲಿದೆ ದಂಧೆ?

ರಾಜ್ಯದಲ್ಲಿ ಆನ್​ಲೈನ್ ಹನಿಟ್ರ್ಯಾಪ್ ದಂಧೆ ಬೆಂಗಳೂರಿನಲ್ಲಿ ಹೆಚ್ಚಾಗಿ ನಡೆಯುತ್ತಿದೆ. ಉಳಿದಂತೆ ಮೈಸೂರು, ಮಂಗಳೂರು, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ದಾವಣಗೆರೆ, ಚಿತ್ರದುರ್ಗ ಹಾಗೂ ಬಳ್ಳಾರಿ ಜಿಲ್ಲೆಗಳಿಗೂ ಈ ಜಾಲ ವಿಸ್ತರಿಸಿದೆ ಎಂದು ಪೊಲೀಸರು ಹೇಳುತ್ತಾರೆ.

ರೂಂಗೆ ನುಗ್ಗಿ ಹೆದರಿಸ್ತಾರೆ!

ಸಾಮಾಜಿಕ ಜಾಲತಾಣದಲ್ಲಿ ಪರಿಚಿತನಾದ ವ್ಯಕ್ತಿಯನ್ನು ಮನೆಗೆ ಕರೆಸಿಕೊಂಡು ಅರೆನಗ್ನಗೊಳಿಸಿದ ಬಳಿಕ ಮೊದಲೇ ರೂಪಿಸಿದ ಯೋಜನೆಯಂತೆ ಹೊರಗೆ ಕಾಯುತ್ತಿರುವ ಮೂರ್ನಾಲ್ಕು ಸ್ನೇಹಿತರು ಕೊಠಡಿಗೆ ನುಗ್ಗುತ್ತಾರೆ. ಪೊಲೀಸರು, ಪತ್ರಕರ್ತರು ಅಥವಾ ಯಾವುದೋ ಒಂದು ಸಂಘಟನೆ ಸದಸ್ಯರೆಂದು ಹೇಳಿಕೊಳ್ಳುತ್ತಾರೆ. ತಾವೇ ಮೊಬೈಲ್​ನಲ್ಲಿ ವಿಡಿಯೋ ಮಾಡಿ ಥಳಿಸಿದ ಬಳಿಕ ಹಣ ಕೊಡದಿದ್ದರೆ ಠಾಣೆಗೆ ಕರೆದೊಯ್ಯುವುದಾಗಿ, ಸುದ್ದಿ ಪ್ರಕಟಿಸುವುದಾಗಿ ಹೆದರಿಸಿ ಹಣ ಸುಲಿಗೆ ಮಾಡುತ್ತಾರೆ.

ಫೋಟೋ ನೋಡಿ ಹೋದೀರಿ!

ಆನ್​ಲೈನ್​ನಲ್ಲಿ ಡೇಟಿಂಗ್ ವೆಬ್​ಸೈಟ್ ತೆರೆದು ಸುಂದರವಾದ ಯುವತಿಯರ ಫೋಟೋಗಳನ್ನು ಅಪ್​ಲೋಡ್ ಮಾಡುತ್ತಾರೆ. ಈ ನಂಬರ್​ಗೆ ಸಂರ್ಪಸಿದರೆ ಡೇಟಿಂಗ್​ಗೆ ಬರುವುದಾಗಿ ಹೇಳಿರುತ್ತಾರೆ. ಗ್ರಾಹಕರು ಮಿಸ್ಡ್ ಕಾಲ್ ಕೊಟ್ಟರೆ ಅಥವಾ ಆ ನಂಬರ್​ಗೆ ಕರೆ ಮಾಡಿದರೆ ಇಂಥ ಸ್ಥಳಕ್ಕೆ ಬಂದರೆ ಸಿಗುವುದಾಗಿ ಹೇಳುತ್ತಾರೆ. ಇದನ್ನು ನಂಬಿ ಅಲ್ಲಿಗೆ ಹೋದರೆ ಯಾವುದೋ ಒಂದು ಮನೆಯೊಳಗೆ ಕರೆಸಿಕೊಂಡು ಮೊದಲೇ ಅಲ್ಲಿರುವ ಯುವಕರ ಗುಂಪು ಸುತ್ತುವರಿದು ಜೇಬಲ್ಲಿರುವುದನ್ನೆಲ್ಲ ಸುಲಿಗೆ ಮಾಡಿ ಹೊರದಬ್ಬುತ್ತದೆ. ಮೋಸಕ್ಕೆ ಒಳಗಾದ ವ್ಯಕ್ತಿ ದೂರು ಕೊಡಲು ಠಾಣೆಗೆ ಹೋಗುವುದು ತೀರಾ ಕಡಿಮೆ. ಒಂದು ವೇಳೆ ದೂರು ಕೊಟ್ಟರೂ ಪೊಲೀಸರ ಕೈಗೆ ಸಿಗಬಾರದು ಎಂಬ ಕಾರಣಕ್ಕೆ ಖದೀಮರು ಬೇರೆಬೇರೆ ಹೆಸರಲ್ಲಿ ನಕಲಿ ದಾಖಲಾತಿ ಸಲ್ಲಿಸಿ ಸಿಮ್ಾರ್ಡ್ ಖರೀದಿಸುತ್ತಾರೆ ಎನ್ನುತ್ತಾರೆ ಪೊಲೀಸ್ ಅಧಿಕಾರಿಗಳು.

ಇತ್ತೀಚಿನ ಟ್ರ್ಯಾಪ್​​ಗಳು..

ಪರಿಚಿತನಿಗೇ ಸ್ಕೆಚ್!

ಇತ್ತೀಚೆಗೆ ಅರ್ಪಿತಾ ಮಾನ್ವಿತಾ ಎಂಬ ಯುವತಿ ಫೇಸ್​ಬುಕ್​ನಲ್ಲಿ ಚೆಂದದ ಫೋಟೋಗಳನ್ನು ಅಪ್​ಲೋಡ್ ಮಾಡಿದ್ದಳು. ಫೋಟೋ ನೋಡಿ ಯುವಕರು ಲೈಕ್ ಮಾಡುತ್ತಿದ್ದಂತೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸುತ್ತಿದ್ದಳು. ನಂತರ ಚಾಟಿಂಗ್ ಮೂಲಕ ಸ್ನೇಹ ಸಂಪಾದಿಸಿ, ವಾಟ್ಸ್​ಆಪ್ ನಂಬರ್ ಪಡೆದುಕೊಳ್ಳುತ್ತಿದ್ದಳು. ಕೊನೆಗೆ ಮನೆಗೆ ಕರೆಸಿಕೊಂಡು ಪ್ರಿಯಕರ ಪವನ್ ಕುಮಾರ್ ಮತ್ತು ಆತನ ಸ್ನೇಹಿತ ಸಿದ್ದಾರ್ಥ್ ಜತೆ ಸೇರಿ ಟ್ಯ್ರಾಪ್ ಮಾಡುತ್ತಿದ್ದಳು. ಜು.29ರಂದು ಪರಿಚಿತ ದಯಾನಂದ್ ಎಂಬಾತನನ್ನು ಮನೆಗೆ ಕರೆಸಿದ್ದಳು. ಆಗ ಪವನ್ ಕುಮಾರ್ ಖಾಸಗಿ ವಾಹಿನಿ ವರದಿಗಾರನೆಂದು, ಸಿದ್ಧಾರ್ಥ್ ಪೊಲೀಸ್ ಎಂದು ಮನೆಗೆ ನುಗ್ಗಿ ದಯಾನಂದ್​ನಿಂದ ಚಿನ್ನದ ಸರ, ಉಂಗುರ ಕಸಿದುಕೊಂಡು, ಆತನ ಎಟಿಎಂ ಕಾರ್ಡ್​ನಿಂದ 55 ಸಾವಿರ ರೂ. ಹಣ ಡ್ರಾ ಮಾಡಿದ್ದರು. ಇನ್ನೂ 1 ಲಕ್ಷ ರೂ. ನೀಡುವಂತೆ ಬೆದರಿಕೆ ಹಾಕಿದ್ದರು. ದಯಾನಂದ ನೀಡಿದ ದೂರಿನ ಮೇರೆಗೆ ಸೋಲದೇವನಹಳ್ಳಿ ಪೊಲೀಸರು ಮೂವರನ್ನೂ ಬಂಧಿಸಿದ್ದಾರೆ. ಈ ತಂಡ ಇನ್ನೂ ಹಲವರಿಗೆ ಬ್ಲಾ್ಯಕ್​ವೆುೕಲ್ ಮಾಡಿರುವ ಬಗ್ಗೆ ಮಾಹಿತಿ ಸಿಕ್ಕಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ವೈದ್ಯನಿಗೆ ಬ್ಲ್ಯಾಕ್​ವೆುೕಲ್

2017ರಲ್ಲಿ ಬೆಂಗಳೂರಿನ ಪ್ರತಿಷ್ಠಿತ ವೈದ್ಯನಿಗೆ ವೆಬ್​ಸೈಟ್​ನಲ್ಲಿ 32 ವರ್ಷದ ವಿವಾಹಿತ ಮಹಿಳೆ ಕವಿತಾ ಎಂಬಾಕೆಯ ಮೊಬೈಲ್ ನಂಬರ್ ಸಿಕ್ಕಿತ್ತು. ಆಕೆಗೆ ಕರೆ ಮಾಡಿದಾಗ ಮಲ್ಲೇಶ್ವರದಲ್ಲಿ ತಾನು ವಾಸ ಮಾಡುತ್ತಿದ್ದ ಅಪಾರ್ಟ್​ವೆುಂಟ್ ವಿಳಾಸ ನೀಡಿ, ಅಲ್ಲಿಗೆ ಬರುವಂತೆ ಸೂಚಿಸಿದ್ದಳು. 50 ವರ್ಷದ ವೈದ್ಯ ಮನೆಗೆ ಹೋಗಿ ಸರಸ-ಸಲ್ಲಾಪದಲ್ಲಿದ್ದಾಗ, ನಾಲ್ವರು ಯುವಕರು ಮನೆಗೆ ನುಗ್ಗಿ ವಿಡಿಯೋವನ್ನು ತೋರಿಸಿ, 5 ಲಕ್ಷ ರೂ.ಗೆ ಬೇಡಿಕೆಯಿಟ್ಟಿದ್ದರು. ವೈದ್ಯ 1 ಲಕ್ಷ ನೀಡಿದರೂ ವಾರದ ಬಳಿಕ ಪುನಃ 2 ಲಕ್ಷ ರೂ. ಕೇಳಿದ್ದರು. ಕೊನೆಗೆ ವೈದ್ಯ ಹೈಗ್ರೌಂಡ್ಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು.

3 ಸಾವಿರಕ್ಕೆ ಕರೆದು 3 ಲಕ್ಷಕ್ಕೆ ಬೇಡಿಕೆ

2018 ಫೆ.4ರಂದು ಮಂಡ್ಯದ ಉದ್ಯಮಿ ಆನ್​ಲೈನ್​ನಲ್ಲಿ ವೈಯಕ್ತಿಕ ವ್ಯವಹಾರಕ್ಕೆ ಸಂಬಂಧಿಸಿದ ವೆಬ್​ಸೈಟ್ ಪರಿಶೀಲಿಸುತ್ತಿದ್ದಾಗ ಯುವತಿಯೊಬ್ಬಳ ನಂಬರ್ ಸಿಕ್ಕಿತ್ತು. ತಾನು ಒಂಟಿಯಾಗಿದ್ದು, ಹಣದ ಸಮಸ್ಯೆಯಿದೆ ಎಂದು ಈಕೆ ವೆಬ್​ಸೈಟ್​ನಲ್ಲಿ ಬರೆದುಕೊಂಡಿದ್ದಳು. ಉದ್ಯಮಿ ಈಕೆಗೆ ಮಿಸ್ಡ್​ಕಾಲ್ ನೀಡಿದ ಕೆಲವೇ ನಿಮಿಷಗಳಲ್ಲಿ ಈಕೆ ಮರುಕರೆ ಮಾಡಿ ಕೋಣನಕುಂಟೆಯ ಶೋಭಾ ಎಂದು ಪರಿಚಯಿಸಿಕೊಂಡಿದ್ದಳು. ‘ನನಗೆ ಹಣದ ಅವಶ್ಯಕತೆಯಿದೆ. 3 ಸಾವಿರ ರೂ. ನೀಡಿದರೆ ನನ್ನೊಂದಿಗೆ ಕಾಲ ಕಳೆಯಬಹುದು’ ಎಂದು ಹೇಳಿದ್ದಳು. ಮನೆಗೆ ಹೋಗಿ ಆಕೆಯೊಂದಿಗಿದ್ದ ದೃಶ್ಯವನ್ನು ಶೋಭಾ ಸ್ನೇಹಿತ ಆಟೋ ಚಾಲಕ ರಘುವೀರ್ ಮೊಬೈಲ್​ನಲ್ಲಿ ಸೆರೆಹಿಡಿದು 3 ಲಕ್ಷ ರೂ.ಗೆ ಬೇಡಿಕೆಯಿಟ್ಟಿದ್ದ. ಉದ್ಯಮಿ ತನ್ನ ಬಳಿಯಿದ್ದ 35 ಸಾವಿರ ರೂ. ನೀಡಿ ಅಲ್ಲಿಂದ ತಪ್ಪಿಸಿಕೊಂಡು ಸುಬ್ರಮಣ್ಯಪುರ ಠಾಣೆಗೆ ದೂರು ನೀಡಿದ್ದ.