ಪ್ರಾಮಾಣಿಕ ಚಾಲಕ

ಪ್ರಾಮಾಣಿಕರನ್ನು ಲೋಕವೇ ಮೆಚ್ಚುತ್ತದೆ ಎಂಬುದಕ್ಕೆ ಪುಷ್ಟಿನೀಡುವ ಘಟನೆಯೊಂದು ಥಾಯ್ಲೆಂಡ್​ನ ಬ್ಯಾಂಕಾಕ್​ನಿಂದ ವರದಿಯಾಗಿದೆ. ವೀರಫಾಲ್ ಕ್ಲಾಮ್​ರಿ ಎಂಬ ಚಾಲಕ ತನ್ನ ಟ್ಯಾಕ್ಸಿಯನ್ನು ಚೊಕ್ಕಗೊಳಿಸುತ್ತಿದ್ದಾಗ ಸೀಟಿನಡಿಯಲ್ಲಿ ಒಂದು ಪುಟ್ಟ ಬಟ್ಟೆಚೀಲ ಕಂಡಿತು. ಬಿಡಿಸಿ ನೋಡಲಾಗಿ ಅದರಲ್ಲಿ ಬರೋಬ್ಬರಿ 10,000 ಡಾಲರ್​ಗಳಿದ್ದವು. ‘ಅರೆ! ಇದಿಲ್ಲಿ ಹೇಗೆ ಬಂತು’ ಎಂದು ನಿಬ್ಬೆರಗಾದ ಆತ, ಲೈಟಾಗಿ ಫ್ಲ್ಯಾಷ್​ಬ್ಯಾಕ್​ಗೆ

ತೆರಳಿದಾಗ ಮುಂಜಾನೆಯಷ್ಟೇ ತಾನು ವಿದೇಶಿಯೊಬ್ಬರನ್ನು ಅಲ್ಲಿನ ಸುವರ್ಣಭೂಮಿ ವಿಮಾನ ನಿಲ್ದಾಣಕ್ಕೆ ಬಿಟ್ಟುಬಂದುದು ನೆನಪಾಗಿ, ಇದು ಅವರದೇ ದುಡ್ಡಿನಚೀಲ ಎಂಬುದು ಖಾತ್ರಿಯಾಯಿತು. ತಾನೋಡಿಸುವ ಟ್ಯಾಕ್ಸಿಯ ಮಾಲೀಕರಿಗೆ ವಿಷಯ ತಿಳಿಸಿದವನೇ ವಿಮಾನ ನಿಲ್ದಾಣಕ್ಕೆ ಧಾವಿಸಿದ. ಅಷ್ಟೊತ್ತಿಗಾಗಲೇ, ಹಣದ ಚೀಲ ಕಳೆದುಕೊಂಡಿದ್ದ ಜೆರ್ರಿ ಅಲನ್ ಹಾರ್ಟ್ ಎಂಬ ಆ ಪ್ರಯಾಣಿಕ, ವಿಮಾನ ಪ್ರಯಾಣ ರದ್ದುಗೊಳಿಸಿ ಪೊಲೀಸರಿಗೆ ವಿಷಯ ತಿಳಿಸಿದ್ದ. ಅದೇ ವೇಳೆಗೆ ವಿಮಾನ ನಿಲ್ದಾಣಕ್ಕೆ ಮರಳಿದ ಚಾಲಕ ವೀರಫಾಲ್, ಅಲ್ಲಿನ ಅಧಿಕಾರಿಗಳನ್ನು ಭೇಟಿಮಾಡಿ ನಡೆದ ವಿಷಯವನ್ನೆಲ್ಲ ತಿಳಿಸಿ, ವಾರಸುದಾರನಿಗೆ ಆ ದುಡ್ಡು ಮರಳಿ ಸೇರುವಂತೆ ನೋಡಿಕೊಂಡ. ತರುವಾಯದಲ್ಲಿ ಆ ಪಯಣಿಗ- ‘ರಜೆ ಸಿಕ್ಕಾಗಲೆಲ್ಲ ನಾನು ಥಾಯ್ಲೆಂಡ್​ಗೆ ಬರುವುದು ವಾಡಿಕೆ, ನಿವೃತ್ತಿಯ ನಂತರ ಇಲ್ಲೇ ನೆಲೆಗೊಳ್ಳುವ ಬಯಕೆಯೂ ಇದೆ. ಈ ಚಾಲಕನ ಪ್ರಾಮಾಣಿಕತೆಯನ್ನು ಕಂಡಾಗಿನಿಂದ, ಇಲ್ಲೇ ನೆಲೆಸಬೇಕೆಂಬ ಬಯಕೆ ಗಟ್ಟಿಯಾಗಿದೆ…’ ಎಂದು ಶ್ಲಾಘನೆಯ ಮಳೆಯನ್ನೇ ಸುರಿಸಿದನಂತೆ. ತನ್ನ ಪ್ರಾಮಾಣಿಕತೆಯಿಂದಾಗಿ ದೇಶಕ್ಕೂ ಹೆಸರು ತಂದ ಟ್ಯಾಕ್ಸಿ ಚಾಲಕನಿಗೆ ವಿಮಾನ ನಿಲ್ದಾಣ ಅಧಿಕಾರಿಗಳು ಸೂಕ್ತ ಬಹುಮಾನ ನೀಡಿ ಗೌರವಿಸಿದರಂತೆ.