ಹಿರೇಕೆರೂರ: ತಾಲೂಕಿನ ಚಿಕ್ಕೇರೂರಿನಿಂದ ಅಗ್ರಹಾರ ಮುಚುಡಿ ಮೂಲಕ ಶಿರಾಳಕೊಪ್ಪಕ್ಕೆ ಸಾಗುವ ತಾಲೂಕು ವ್ಯಾಪ್ತಿಯ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ವಾಹನ ಸವಾರರು, ಸಾರ್ವಜನಿರಿಗೆ ತೀವ್ರ ತೊಂದರೆಯಾಗುತ್ತಿದೆ.
ತಾಲೂಕಿನ ಚಿಕ್ಕೇರೂರಿನಿಂದ ಶಿಕಾರಿಪುರ ತಾಲೂಕಿನ ಅಗ್ರಹಾರ ಮುಚುಡಿ ತಲುಪುವ ಜಿಪಂ ಇಲಾಖೆಗೆ ಸಂಬಂಧಿಸಿದ 2.5 ಕಿಮೀ ರಸ್ತೆ ಹಾಳಾಗಿ 2 ವರ್ಷಗಳೇ ಕಳೆದಿವೆ. ಈ ಬಗ್ಗೆ ಸಂಬಂಧಿಸಿದ ಇಲಾಖೆಗೆ ಮೌಖಿಕವಾಗಿ ತಿಳಿಸಿದ್ದರೂ ಯಾವೊಬ್ಬ ಅಧಿಕಾರಿಗಳೂ ರಸ್ತೆ ಸರಿಪಡಿಸುವ ಗೋಜಿಗೆ ಹೋಗಿಲ್ಲ.
ಈ ರಸ್ತೆ ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆ, ತಾಲೂಕುಗಳನ್ನು ಸಂರ್ಪಸುತ್ತದೆ. ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ರಸ್ತೆಯಲ್ಲಿ ದೊಡ್ಡ ದೊಡ್ಡ ಕಂದಕಗಳು ನಿರ್ವಣಗೊಂಡಿದ್ದು, ಬಹಳ ದುರ್ಗಮದಿಂದ ಕೂಡಿದೆ. ಅನೇಕ ಬಾರಿ ಇಲ್ಲಿ ಸಂಚರಿಸುವಾಗ ಲಘು ವಾಹನಗಳು ಕೆಟ್ಟು ನಿಂತ ಉದಾಹರಣೆಯೂ ಇದೆ. ಮಳೆಗಾಲದಲ್ಲಿ ಕಂದಕಗಳಲ್ಲಿ ನೀರು ತುಂಬಿರುವುದರಿಂದ ಬೈಕ್ ಸವಾರರಿಗೆ ಕಂದಕದ ಅಂದಾಜು ಸಿಗದೆ ಗುಂಡಿಯಲ್ಲಿ ಬಿದ್ದು, ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ತಾಲೂಕು ಗಡಿ ಇದಾಗಿರುವುದರಿಂದ ಅಥವಾ ಅನುದಾನ ಕೊರತೆ ಹೇಳಿ ಅಧಿಕಾರಿಗಳು ಗಮನಹರಿಸುತ್ತಿಲ್ಲ. ಇದರಿಂದ ಸವಾರರಿಗೆ, ವಾಹನಗಳಿಗೆ ತೊಂದರೆಯಾಗುತ್ತಿದೆ. ಇಲಾಖೆ ಮತ್ತು ಜನಪ್ರತಿನಿಧಿಗಳ ವಿರುದ್ಧ ಜನತೆ ಹಿಡಿ ಶಾಪ ಹಾಕುತ್ತಿದ್ದಾರೆ. ಇನ್ನಾದರೂ ಸಂಬಂಧಿಸಿದ ಜಿಪಂ ಇಲಾಖೆಯವರು ರಸ್ತೆ ಅಭಿವೃದ್ಧಿಪಡಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕಾಗಿದೆ.
ಹಿರೇಕೆರೂರ ತಾಲೂಕಿನ ಗಡಿಯಲ್ಲಿ 2 ಕಿ.ಮೀ. ರಸ್ತೆ ಹಾಳಾಗಿದೆ. ಈ ಬಗ್ಗೆ ಎರಡು ಬಾರಿ ಮೌಖಿಕವಾಗಿ ಜಿಪಂ ಅಧಿಕಾರಿಗಳಿಗೆ ತಿಳಿಸಲಾಗಿದೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಈಗ ಮಳೆಗಾಲ ಮುಗಿದಿದ್ದು, ಕೂಡಲೇ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ರಸ್ತೆ ಅಭಿವೃದ್ಧಿಪಡಿಸಬೇಕು. ಇಲ್ಲದಿದ್ದರೆ ಮಾರ್ಗ ಬಂದ್ ಮಾಡಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು.
| ಕರಿಬಸಯ್ಯ ಬಸರೀಹಳ್ಳಿಮಠ, ಕರವೇ ಪ್ರಧಾನ ಕಾರ್ಯದರ್ಶಿ
ರಸ್ತೆ ಹಾಳಾಗಿರುವ ಬಗ್ಗೆ ಗಮನಕ್ಕೆ ಬಂದಿದೆ. ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದೇನೆ. ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಟೆಂಡರ್ ಕರೆಯಲಾಗಿದೆ. ಇದಕ್ಕಾಗಿ 16.5 ಲಕ್ಷ ರೂ. ತೆಗೆದಿರಿಸಲಾಗಿದ್ದು, ಅಗ್ರಿಮೆಂಟ್ ಹಾಗೂ ಚುನಾವಣಾ ನೀತಿ ಸಂಹಿತೆ ಮುಗಿದ ನಂತರ ಕಾಮಗಾರಿ ಪ್ರಾರಂಭಿಸಲಾಗುವುದು.
| ನಂದೀಶ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಜಿಪಂ ಹಿರೇಕೆರೂರ