ಮೂಕಪ್ರಾಣಿ ಮೌನ ರೋದನ

ಕುಂದಾಪುರ: ಹಕ್ಲಾಡಿ ಪರಿಸರದಲ್ಲಿ ಕಳೆದ ಆರು ತಿಂಗಳಿಂದ ಕಾಣಿಸಿಕೊಳ್ಳುತ್ತಿರುವ ಹಸುವೊಂದರ ಗಂಗೆ ಗೊದಲಲ್ಲಿ ದೊಡ್ಡ ಗಾತ್ರದ ಗೆಡ್ಡೆ ಬೆಳೆಯುತ್ತಿದ್ದು, ವೃಣದ ನೋವಿನಿಂದ ಹಸುವಿನ ಕಣ್ಣಲ್ಲಿ ಸದಾ ನೀರು ಹರಿಯುತ್ತಿರುವುದು ಮನ ಕಲುಕುವಂತಿದೆ.

ಯಾರು ಸಾಕಿದ ಹಸುವೋ ಗೊತ್ತಿಲ್ಲ. ಹಕ್ಲಾಡಿ ಗ್ರಾಮ, ಹಕ್ಲಾಡಿ ಗುಡ್ಡೆ, ಯಳೂರು, ತೊಪ್ಲು, ಬಂಟ್ವಾಡಿ ಸಾಲಾಡಿ ಹೀಗೆ ಹಸು ಸದಾ ಸಂಚಾರಿ. ಎಲ್ಲಾದರೂ ಏನಾದರೂ ಸಿಕ್ಕರೆ ತಿಂದು ಮತ್ತೆ ಸಂಚಾರ ಆರಂಭಿಸುತ್ತದೆ.

ಕಳೆದ ಆರು ತಿಂಗಳಿಂದ ಹಕ್ಲಾಡಿ ಪರಿಸರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಕಟ್ಟಿನಮಕ್ಕಿಯಿಂದ ಹಕ್ಲಾಡಿ ಪರಿಸರದ ಯಾರೋ ಹಸು ವಿಕ್ರಯಿಸಿ ತಂದಿದ್ದು, ಹಸುವಿಗೆ ಕ್ಯಾನ್ಸರ್ ಬಂದಿದೆ ಎಂದು ತಂದವರು ಮತ್ತೆ ಕಟ್ಟಿನಮಕ್ಕಿ ಬಿಟ್ಟುಬಂದಿದ್ದರೂ, ತಂದವರ ಮನೆಗೆ ಹಸು ವಾಪಸ್ ಬಂದಿದೆ. ತಂದವರೂ ಹಟ್ಟಿಯಲ್ಲಿ ಹಸು ಕಟ್ಟಿ ಆರೈಕೆ ಮಾಡುತ್ತಿಲ್ಲ. ಹಸು ಕೊಟ್ಟವರೂ ಹಸುವಿನ ಜತನ ಮಾಡದೆ ಇರುವುದರಿಂದ ಹಸು ಬೀದಿಗೆ ಬಂದಿದೆ.

ಆರೈಕೆ ಮಾಡಿದರೆ, ಉಚಿತ ಚಿಕಿತ್ಸೆ: ಹಸುವಿನಲ್ಲಿ ಕಾಣಿಸಿಕೊಂಡ ಕಾಯಿಲೆ ಆರಂಭದಲ್ಲೇ ಗೊತ್ತಾಗಿದ್ದರೆ ಗುಣಪಡಿಸಲು ಸಾಧ್ಯವಿತ್ತು. ಮೈಯಲ್ಲೆಲ್ಲ ದಡಾರದ ತರ ಜಡ್ಡು ಗಟ್ಟುತ್ತಿದ್ದು, ಅದು ಉದುರಿ ಹೋಗಲು ಔಷಧ ಕೊಡಬಹುದಿತ್ತು. ಈಗ ಗಡ್ಡೆ ದೊಡ್ಡದಾಗಿದ್ದರಿಂದ ಶಸ್ತ್ರ ಚಿಕಿತ್ಸೆ ಅವಶ್ಯ ಎಂದು ಪಶುವೈದ್ಯ ರಾಘವೇಂದ್ರ ಶೆಟ್ಟಿ ತಿಳಿಸಿದ್ದಾರೆ. ಹಸು ಸಾಕಿದವರು ಮಾಹಿತಿ ನೀಡಿ, ಕಟ್ಟಿಹಾಕಿ ಆರೈಕೆ ಮಾಡಿದರೆ ಉಚಿತ ಚಿಕಿತ್ಸೆ ನೀಡಲು ಸಾಧ್ಯ ಎಂದು ಅವರು ತಿಳಿಸಿದ್ದಾರೆ.