ದುರ್ಘಟನೆ ತಡೆಯಲು ಜೀವ ರಕ್ಷಕ ಪಡೆ ಸನ್ನದ್ಧ

ಹರೀಶ್ ಮೋಟುಕಾನ ಮಂಗಳೂರು
ಮಳೆಗಾಲದಲ್ಲಿ ಅಲೆಗಳ ಅಬ್ಬರ ಜೋರಾಗಿರುವುದರಿಂದ ಸಮುದ್ರಕ್ಕಿಳಿಯುವುದು ಅಪಾಯ. ಈ ನಿಟ್ಟಿನಲ್ಲಿ ದುರ್ಘಟನೆ ತಡೆಯಲು ಜೀವ ರಕ್ಷಕ ಪಡೆ ಸನ್ನದ್ಧವಾಗಿದೆ.
ಹೊರ ಜಿಲ್ಲೆಗಳಿಂದ ಬಂದ ಪ್ರವಾಸಿಗರು ಸಮುದ್ರ ಕಂಡಾಗ ಪುಳಕಗೊಂಡು ನೀರಿಗೆ ಇಳಿಯುತ್ತಾರೆ. ಇಳಿಜಾರಾದ ಕಾರಣ ಬೃಹತ್ ಅಲೆಗಳಿಗೆ ಸಿಲುಕಿ ಕೊಚ್ಚಿ ಹೋಗುವ ಸಂಭವ ಹೆಚ್ಚು. ಸೋಮೇಶ್ವರ, ಪಣಂಬೂರು ಬೀಚ್‌ಗಳಲ್ಲಿ ನೂರಾರು ಮಂದಿ ಪ್ರಾಣ ಕಳೆದುಕೊಂಡ ಉದಾಹರಣೆ ಇದೆ. ಜೀವರಕ್ಷಕ ಪಡೆ ನೇಮಕವಾದ ಬಳಿಕ ಈ ದುರ್ಘಟನೆ ಕಡಿಮೆಯಾಗಿದೆ.

ಗೃಹರಕ್ಷಕದಳ, ಕರಾವಳಿ ಕಾವಲು ಪೊಲೀಸ್ ಪಡೆ ಸಿಬ್ಬಂದಿ, ಪ್ರವಾಸೋದ್ಯಮ ಇಲಾಖೆಯ ಟೂರಿಸ್ಟ್ ಮಿತ್ರ ಹಾಗೂ ಸ್ಥಳೀಯರ ಸಂಘ ಸಂಸ್ಥೆಗಳ ಯುವಕರು ಪ್ರವಾಸಿಗರಿಗೆ ಎಚ್ಚರಿಕೆ ನೀಡಿ ಪ್ರಾಣ ರಕ್ಷಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇದಕ್ಕೆ ಬೇಕಾದ ಎಲ್ಲ ಸಿದ್ಧತೆ ಮಾಡಿಕೊಂಡಿದ್ದು, ಸಿಬ್ಬಂದಿಗೆ ಸೂಕ್ತ ಪರಿಕರಗಳನ್ನು ಆಯಾ ಇಲಾಖೆ ಹಾಗೂ ಜಿಲ್ಲಾಡಳಿತ ಒದಗಿಸಿದೆ. ಪ್ರವಾಸಿಗರು ಕಣ್ತಪ್ಪಿಸಿ ನೀರಿಗಿಳಿದು ಅಪಾಯದಲ್ಲಿ ಸಿಲುಕಿದರೆ ತಕ್ಷಣ ಸ್ಥಳೀಯ ಜೀವರಕ್ಷಕ ಪಡೆಯ ಸಿಬ್ಬಂದಿ ಸಮುದ್ರಕ್ಕೆ ಧುಮುಕಿ ಅವರನ್ನು ರಕ್ಷಿಸುತ್ತಾರೆ. ಇತರ ಸಿಬ್ಬಂದಿ ಅವರಿಗೆ ಸಹಕಾರ ನೀಡುತ್ತಾರೆ.

ಯಾವ ಬೀಚ್ ಅಪಾಯಕಾರಿ: ಉಳ್ಳಾಲ, ಸೋಮೇಶ್ವರ, ಪಣಂಬೂರು, ತಣ್ಣೀರುಬಾವಿ, ಸುರತ್ಕಲ್, ಸಸಿಹಿತ್ಲು, ಪಡುಬಿದ್ರಿ ಮೊದಲಾದ ಬೀಚ್‌ಗಳು ಅಪಾಯಕಾರಿಯಾಗಿವೆ. ಇಲ್ಲಿ ಗೃಹರಕ್ಷಕ ದಳದ ಮೂವರು, ಕರಾವಳಿ ಕಾವಲು ಪೊಲೀಸ್ ಪಡೆ, ಪ್ರವಾಸೋದ್ಯಮ ಇಲಾಖೆಯ ತಲಾ ಒಬ್ಬರು ಹಾಗೂ ಸ್ಥಳೀಯ ನುರಿತ ಈಜುಗಾರರು ದುರ್ಘಟನೆ ಎದುರಿಸಲು ಸನ್ನದ್ಧರಾಗಿದ್ದಾರೆ. ಮೂರು ತಿಂಗಳು ದಿನವಿಡೀ ಕಣ್ಗಾವಲು ಇಟ್ಟಿದ್ದಾರೆ.

ಎಚ್ಚರಿಕೆ ಫಲಕ: ಬೀಚ್‌ನಿಂದ ಸುಮಾರು 50 ಮೀಟರ್ ದೂರದಲ್ಲಿ ಎಚ್ಚರಿಕೆ ಫಲಕಗಳನ್ನು ಅಳವಡಿಸಲಾಗಿದೆ. ಪ್ರವಾಸಿಗರು ಮುಂದಕ್ಕೆ ಹೋಗದಂತೆ ಟೇಪ್ ಕಟ್ಟಲಾಗಿದೆ. ಧ್ವನಿವರ್ಧಕಗಳ ಮೂಲಕ ಎಚ್ಚರಿಕೆ ನೀಡಲಾಗುತ್ತಿದೆ. ಎಚ್ಚರಿಕೆ ಫಲಕ, ಗಾಳಿ ಮಳೆಗೆ ರಕ್ಷಣೆ ಪಡೆಯಲು ಟೆಂಟ್, ರೈನ್‌ಕೋಟ್, ಶೂ ಮೊದಲಾದುವುಗಳನ್ನು ಜಿಲ್ಲಾಡಳಿತ ಪೂರೈಸಿದೆ. ವಾರಾಂತ್ಯಗಳಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುವುದರಿಂದ ಸಿಬ್ಬಂದಿ ಎಚ್ಚರಿಕೆಯಿಂದ ಕರ್ತವ್ಯ ನಿರತರಾಗಿದ್ದಾರೆ. ಬೀಚ್‌ಗಳಲ್ಲಿ ಜೀವರಕ್ಷಕ ದಳದ ಸಿಬ್ಬಂದಿ ನೇಮಕವಾದ ಬಳಿಕ ದುರ್ಘಟನೆ ಗಣನೀಯ ಇಳಿಕೆಯಾಗಿದೆ. ಕಳೆದ ವರ್ಷ ಯಾವುದೇ ಪ್ರಕರಣ ದಾಖಲಾಗಿಲ್ಲ.

 ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ನಿರ್ದೇಶನದಂತೆ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಆದೇಶದಂತೆ 8 ಬೀಚ್‌ಗಳಲ್ಲಿ ತಲಾ ಮೂವರು ಗೃಹರಕ್ಷಕ ಸಿಬ್ಬಂದಿ ನೇಮಕ ಮಾಡಲಾಗಿದೆ. ಪ್ರತಿ ತಾಲೂಕು ಘಟಕಗಳಿಗೂ ಮರ ತುಂಡರಿಸುವ ಯಂತ್ರ ನೀಡಲಾಗಿದ್ದು, ಮೆಸ್ಕಾಂ, ಅರಣ್ಯ ಇಲಾಖೆ ಜತೆ ಸಮನ್ವಯ ಸಾಧಿಸಿಕೊಂಡು ಗಾಳಿ ಮಳೆಗೆ ರಸ್ತೆ, ಮನೆಗಳ ಮೇಲೆ ಮರ ಉರುಳಿ ಬಿದ್ದಾಗ ಅವುಗಳನ್ನು ತೆರವು ಮಾಡಲು ಸಹಕಾರ ನೀಡುತ್ತಾರೆ.
ಡಾ.ಮುರಲೀ ಮೋಹನ್ ಚೂಂತಾರು ಕಮಾಂಡೆಂಟ್ ಗೃಹರಕ್ಷಕದಳ ದ.ಕನ್ನಡ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಗಾಲ ಎದುರಿಸಲು ಇಲಾಖಾಧಿಕಾರಿಗಳಿಗೆ ಆದೇಶ ನೀಡಲಾಗಿದೆ. ಬೀಚ್‌ಗಳಲ್ಲಿ ಗೃಹರಕ್ಷಕ ದಳ ಸಿಬ್ಬಂದಿ, ಟೂರಿಸ್ಟ್ ಮಿತ್ರರು, ಪೊಲೀಸ್ ಇಲಾಖೆ, ಸ್ಥಳೀಯರ ಸಹಕಾರದಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ.
ಶಶಿಕಾಂತ್ ಸೆಂಥಿಲ್ ಜಿಲ್ಲಾಧಿಕಾರಿ ದ.ಕ

Leave a Reply

Your email address will not be published. Required fields are marked *