ಸಿನಿಮಾ

ಮನೆ ಮತದಾನಕ್ಕೆ ಹಿರಿಯ ನಾಗರಿಕರು, ಅಂಗವಿಕಲರಿಂದ ಮೆಚ್ಚುಗೆ

ಚಿತ್ರದುರ್ಗ: ನಗರ ಸೇರಿ ಜಿಲ್ಲಾದ್ಯಂತ 80 ವರ್ಷ ಮೇಲ್ಪಟ್ಟ 925 ಹಿರಿಯ ಹಾಗೂ 347 ಅಂಗವಿಕಲರು ತಮ್ಮ ಮನೆಗಳ ಮುಂಭಾಗ, ಮನೆಯೊಳಗೆ ಬುಧವಾರ ಮತ ಚಲಾಯಿಸಿದರು. ಮತಗಟ್ಟೆ ಅಧಿಕಾರಿಗಳು ಅರ್ಹರ ಪೈಕಿ ಹಲವರ ಮನೆ-ಮನೆಗೆ ತೆರಳಿ ಗುಪ್ತ ಮತದಾನಕ್ಕೆ ಅನುವು ಮಾಡಿಕೊಟ್ಟರು.

80 ವರ್ಷ ಮೇಲ್ಪಟ್ಟ ಹಿರಿಯ ರು, ಅಂಗವಿಕಲರು ಕ್ರಮವಾಗಿ ಚಿತ್ರದುರ್ಗ ಕ್ಷೇತ್ರದಲ್ಲಿ 195, 50, ಚಳ್ಳಕೆರೆ-75, 46, ಮೊಳಕಾಲ್ಮುರು-122, 89, ಹಿರಿಯೂರು-255, 67, ಹೊಸದುರ್ಗ-111, 65, ಹೊಳಲ್ಕೆರೆ-167, 30 ಮಂದಿ ತಮ್ಮ ಹಕ್ಕು ಚಲಾಯಿಸಿದ್ದಾರೆ. ಮೇ 5ರಂದು ಕೂಡ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಭೀಮಸಮುದ್ರ ಗ್ರಾಪಂ ವ್ಯಾಪ್ತಿಯ ಹಿರಿಯ ನಾಗರಿಕರ ಪೈಕಿ 11, ನಾಲ್ವರು ಅಂಗವಿಕಲರು ಸೇರಿ 15 ಮಂದಿ ಹಕ್ಕು ಚಲಾಯಿಸಿದರು ಎಂದು ಮತಗಟ್ಟೆ ಅಧಿಕಾರಿ ರಾಮು ತಿಳಿಸಿದರು.

ಈ ವೇಳೆ ಮತದಾನ ಮಾಡಿದ ಹಿರಿಯ ನಾಗರಿಕರೊಬ್ಬರು ಮಾತನಾಡಿ, ಚುನಾವಣೆಗಳಲ್ಲಿ ಮತಗಟ್ಟೆಗೆ ಹೋಗಿಬರಲು ತುಂಬಾ ಕಷ್ಟಕರವಾಗುತ್ತಿತ್ತು. ಈ ಬಾರಿ ನಮ್ಮಂತವರಿಗೆ ಮನೆಗಳಲ್ಲೇ ಮತದಾನಕ್ಕೆ ಅವಕಾಶ ನೀಡಿದ್ದು, ತುಂಬಾ ಅನುಕೂಲವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಹೊಳಲ್ಕೆರೆ ಕ್ಷೇತ್ರ ವ್ಯಾಪ್ತಿಯ ಆಡನೂರು ಗ್ರಾಮದಲ್ಲೂ ಮತದಾನ ನಡೆಯಿತು. ಚುನಾವಣಾಧಿಕಾರಿ ವಿವೇಕಾನಂದ, ಮೇಲುಸ್ತುವಾರಿ ಸೆಕ್ಟರ್ ಅಧಿಕಾರಿ ಎ.ವಾಸಿಂ, ಟಿ.ಎನ್.ತಿಪ್ಪೇಸ್ವಾಮಿ, ಮತದಾನ ಅಧಿಕಾರಿ ಆರ್.ಪ್ರಶಾಂತ ಸಾಗರ, ಜಿ.ತಿಪ್ಪೇಸ್ವಾಮಿ, ಮೈಕ್ರೋ ಅಬ್ಸರ್ವರ್ ಕೆ.ಶ್ರೀನಿವಾಸರಾವ್, ಹರೀಶ್, ಆನಂದ್ ಇತರರಿದ್ದರು.

ನೌಕರರಿಂದ ಹಕ್ಕು ಚಲಾವಣೆ
ಅಂಚೆ ಮತ ಪತ್ರದ ಸೌಲಭ್ಯ ಪಡೆದ ಜಿಲ್ಲೆಯ 6 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 266 ಅಗತ್ಯ ಸೇವೆಗಳ ನೌಕರರ ಪೈಕಿ ಈವರೆಗೂ 142 ಮಂದಿ ಮತ ಚಲಾಯಿಸಿದ್ದಾರೆ.

ಆಯಾ ತಹಶೀಲ್ದಾರ್ ಕಚೇರಿಯಲ್ಲಿ ಸ್ಥಾಪಿಸಿರುವ ಅಂಚೆ ಮತದಾನ ಕೇಂದ್ರದಲ್ಲಿ ಮೊಳಕಾಲ್ಮ್ಮುರು ಕ್ಷೇತ್ರ 21, ಚಳ್ಳಕೆರೆ 13, ಚಿತ್ರದುರ್ಗ 39, ಹಿರಿಯೂರು 14, ಹೊಸದುರ್ಗ 26, ಹೊಳಲ್ಕೆರೆ ಕ್ಷೇತ್ರದಲ್ಲಿ 29 ಮತ ಚಲಾವಣೆಯಾಗಿದೆ.

ಮಂಗಳವಾರ, ಬುಧವಾರ ಕ್ರಮವಾಗಿ 48, 94 ನೌಕರರು ಹಕ್ಕು ಚಲಾಯಿಸಿದ್ದಾರೆ. ಮೇ 4ರಂದು ಬೆಳಗ್ಗೆ 9ರಿಂದ ಸಂಜೆ 5ರವರೆಗೆ ಮತ ಚಲಾಯಿಸಲು ಅವಕಾಶವಿದ್ದು, ನೌಕರರಿಗೆ ರಜೆಯ ಸೌಲಭ್ಯ ಕೂಡ ನೀಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಜಿ.ಆರ್.ಜೆ. ದಿವ್ಯಾಪ್ರಭು ಮಾಹಿತಿ ನೀಡಿದ್ದಾರೆ.

Latest Posts

ಲೈಫ್‌ಸ್ಟೈಲ್