ಹೋಂ ಸ್ಟೇಯಿಂದ ಸಾರ್ವಜನಿಕರಿಗೆ ಕಿರಿಕಿರಿ

ಜೊಯಿಡಾ: ತಾಲೂಕಿನ ಪ್ರಧಾನಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗವೇಗಾಳಿಯಲ್ಲಿ ನಡೆಯುತ್ತಿರುವ ಹೋಂ ಸ್ಟೇಯಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಕುರಿತು ದೂರು ಬಂದ ಹಿನ್ನೆಲೆಯಲ್ಲಿ ಗ್ರಾ.ಪಂ. ಅಧ್ಯಕ್ಷೆ ಲಕ್ಷ್ಮೀ ಬಾರಕೇರ್ ವಿಶೇಷ ಸಭೆ ನಡೆಸಿ ಸಾರ್ವಜನಿಕರ ಅಹವಾಲು ಆಲಿಸಿದರು.

ಪ್ರಧಾನಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗವೇಗಾಳಿ ಗ್ರಾಮದ ಮಧ್ಯದಲ್ಲಿ ಹೋಂ ಸ್ಟೇ ಇದ್ದು, ಇಲ್ಲಿ ಮಧ್ಯರಾತ್ರಿಯಾದರೂ ಡಿ.ಜೆ. ಹಾಕಿ ಕುಣಿಯುವುದರಿಂದ ಸ್ಥಳೀಯರಿಗೆ ಕಿರಿಕಿರಿ ಉಂಟಾಗುತ್ತಿದೆ. ಮದ್ಯದ ಬಾಟಲಿಗಳನ್ನು ರೈತರ ಹೊಲ ಅಥವಾ ರಸ್ತೆ ಮೇಲೆಯೇ ಬಿಸಾಡಲಾಗುತ್ತಿದ್ದು, ಶಾಲೆಗೆ ತೆರಳುವ ಮಕ್ಕಳು ರಸ್ತೆಯಲ್ಲಿ ಭಯದಿಂದ ತೆರಳುವಂತಾಗಿದೆ ಎಂದು ದೂರಿದರು.

ಈ ಕುರಿತು ಹೋಂ ಸ್ಟೇ ಅವರನ್ನು ಕೇಳಿದರೆ ಸಾರ್ವಜನಿಕರ ಮೇಲೆಯೇ ರೇಗುತ್ತಾರೆ. ಪೊಲೀಸ್ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕುತ್ತಾರೆ ಎಂದು ದೂರಿದರು. ಈ ಕುರಿತು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಹೋಂ ಸ್ಟೇಗೆ ನೀಡಲಾದ ಅನುಮತಿಯನ್ನು ರದ್ದುಪಡಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದರು. ಪ್ರಧಾನಿ ಗ್ರಾ.ಪಂ. ಪಿಡಿಒ ಸಾರ್ವಜನಿಕರನ್ನು ಸಮಾಧಾನಪಡಿಸಿ, ಹೋಂ ಸ್ಟೇ ನಡೆಸಲು ಗ್ರಾಮ ಪಂಚಾಯಿತಿ ಅನುಮತಿ ನಿಡುವಾಗಲೇ ಸಾರ್ವಜನಿಕರಿಗೆ ಯಾವುದೇ ಕಿರಿಕಿರಿ ಆಗದಂತೆ ನಿಬಂಧನೆ ಹಾಕಿದೆ. ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಈ ವರ್ಷ ಈ ಹೋಂ ಸ್ಟೇ ಅನುಮತಿಯನ್ನು ನವೀಕರಣ ಮಾಡಿಲ್ಲ. ಈ ಕುರಿತು ಎರಡು ದಿನದೊಳಗೆ ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷರು ಮತ್ತು ಸದಸ್ಯರು ಮತ್ತೊಮ್ಮೆ ಸಭೆ ಸೇರಿ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದರು. ತಾಲೂಕಿನ ಪ್ರವಾಸೋದ್ಯಮದ ಹಿತದೃಷ್ಟಿಯಿಂದ ಹೋಂ ಸ್ಟೇಗಳು ಉತ್ತಮ ಕೆಲಸ ಮಾಡುತ್ತಿವೆ. ಒಂದೆರಡು ಹೋಂ ಸ್ಟೇ ಮಾಲೀಕರು ಈ ರೀತಿ ಸಾರ್ವಜನಿಕರೊಂದಿಗೆ ದುರ್ವರ್ತನೆ ಮಾಡುವುದರಿಂದ ಪ್ರವಾಸೋದ್ಯಮಕ್ಕೂ ಕೆಟ್ಟ ಹೆಸರು ಬರುವುದರ ಜೊತೆಗೆ ಇಲ್ಲಿನ ಉದ್ಯೋಗಕ್ಕೆ ಪೆಟ್ಟು ಬಿಳಲಿದೆ ಎಂದರು.

ಸದಸ್ಯರಾದ ಬಾಬಯ್ಯ ಜೊಸೆಫ್, ಕೃಷ್ಣಾ ದೇಸಾಯಿ, ಗ್ರಾಮದ ಕುಷ್ಠ ಕುಶಲಕರ, ಪ್ರಕಾಶ ಅಕ್ಕೊರ್ಡೆಕರ, ಪ್ರಭಾಕರ ಅಕ್ಕೊರ್ಡೆಕರ, ಪ್ರಶಾಂತ ಚೌಕಿಕರ, ಪ್ರಭು ಜರ್ವೆಕರ, ಉಮೇಶ ಕುಶಲಕರ, ಸಂಜಯ ಧುಮೆ, ಅಶೋಕ ನಾಯ್ಕ,ಆಕಾಶ ಜರ್ವೆಕರ, ಪ್ರಕಾಶ ಕುಶಲಕರ, ತುಳಸಿದಾಸ ಜರ್ವೆಕರ, ವಿನೋದ ಕಾಂಡೆಪಾರ್ಕರ, ಮಹೇಶ ಗಾವಡಾ, ಶ್ರೀಧರ ಕುಶಲಕರ, ಪ್ರಸನ್ನ ಧುಮೆ ಮೊದಲಾದವರು ಇದ್ದರು.