ಟ್ರೋಲಿಂಗ್​: ಸುಷ್ಮಾ ಸ್ವರಾಜ್​ ಬೆಂಬಲಕ್ಕೆ ನಿಂತ ರಾಜನಾಥ್​ ಸಿಂಗ್​

ನವದೆಹಲಿ: ಅಂತರ್ಧರ್ಮೀಯ ದಂಪತಿಗೆ ಪಾಸ್​ಪೋರ್ಟ್​ ಒದಗಿಸಲು ಸಹಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟೀಕೆಗೆ ಗುರಿಯಾಗಿರುವ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್​ ಅವರ ಬೆಂಬಲಕ್ಕೆ ಕೇಂದ್ರ ಗೃಹ ಸಚಿವ ರಾಜನಾಥ್​ ಸಿಂಗ್​ ಅವರು ಬಂದಿದ್ದಾರೆ.

ವಿವಾದದ ಕುರಿತು ಪತ್ರಕರ್ತರಿಗೆ ಪ್ರತಿಕ್ರಿಯೆ ನೀಡಿದ ರಾಜನಾಥ್​ ಸಿಂಗ್​ ಸಾಮಾಜಿಕ ಜಾಲತಾಣಗಳಲ್ಲಿ ಸುಷ್ಮಾ ಸ್ವರಾಜ್​ ಅವರನ್ನು ಟ್ರೋಲಿಂಗ್​ಗೆ ಗುರಿಯಾಗಿಸಿರುವುದು ತಪ್ಪು ಎಂದು ತಿಳಿಸಿದ್ದಾರೆ.

ವಿವಾದದ ಕುರಿತು ನಿನ್ನೆ ಟ್ವೀಟ್​ ಮಾಡಿರುವ ಸುಷ್ಮಾ ಸ್ವರಾಜ್ ಅವರು ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯವಿದೆ. ನನ್ನ ನಿರ್ಧಾರವನ್ನು ನೀವು ಟೀಕಿಸಬಹುದು, ಆದರೆ ಅಸಭ್ಯ ಭಾಷೆಯನ್ನು ಬಳಕೆ ಮಾಡಬೇಡಿ. ಸಭ್ಯ ಭಾಷೆಯಲ್ಲಿ ಮಾಡಿದ ಟೀಕೆ ಹೆಚ್ಚು ಪ್ರಭಾವಯುತವಾಗಿರುತ್ತದೆ ಎಂದು ತಿಳಿಸಿದ್ದರು.

ಇದಕ್ಕೂ ಮೊದಲು ಅವರು ಸುಷ್ಮಾ ಸ್ವರಾಜ್​ ಅವರು ನನ್ನನ್ನು ಟ್ರೋಲಿಂಗ್​ ಮಾಡುತ್ತಿರುವುದು ಸರಿಯೇ ಎಂದು ತಮ್ಮ ಟ್ವಿಟರ್​ ಖಾತೆಯಲ್ಲಿ ಪ್ರಶ್ನೆ ಕೇಳಿದ್ದರು. ಅದಕ್ಕೆ ಟ್ವಿಟರ್​ ಬಳಕೆದಾರರು ಪ್ರತಿಕ್ರಿಯೆ ನೀಡಿದ್ದು, ಶೇ. 43 ರಷ್ಟು ಜನರು ಸರಿ ಎಂದಿದ್ದರೆ, ಶೇ. 57 ರಷ್ಟು ಜನರು ತಪ್ಪು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಅಂತರ್ಧರ್ಮೀಯ ದಂಪತಿ ಅನಾಸ್ ಸಿದ್ದಿಕಿ-ತನ್ವಿ ಸೇಠ್​ ಪಾಸ್​ಪೋರ್ಟ್​ ಅಧಿಕಾರಿ ವಿಕಾಸ್​ ಮಿಶ್ರಾ ಎಂಬುವವರು ತಮಗೆ ಪಾಸ್​ ಪೋರ್ಟ್​ ನೀಡುತ್ತಿಲ್ಲ. ಪಾಸ್​ ಪೋರ್ಟ್​ ಒದಗಿಸಲು ಸಹಕರಿಸಿ ಎಂದು ಸುಷ್ಮಾ ಅವರಿಗೆ ಮನವಿ ಮಾಡಿದ್ದರು. ಈ ಸಂದರ್ಭದಲ್ಲಿ ಪಾಸ್​ಪೋರ್ಟ್​ ಅಧಿಕಾರಿ ತಮಗೆ ಕಿರುಕುಳ ನೀಡಿದ್ದಾರೆ. ಮಿಶ್ರಾ ಅವರು ಅನಾಸ್​ ಸಿದ್ದಿಕಿಯನ್ನು ಹಿಂದು ಧರ್ಮಕ್ಕೆ ಮತಾಂತರ ಹೊಂದುವಂತೆ ತಿಳಿಸಿದ್ದರು ಮತ್ತು ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗಿದ್ದಕ್ಕಾಗಿ ತನ್ವಿ ಸೇಠ್​ರನ್ನು ನಿಂದಿಸಿದ್ದರು ಎಂದು ಆರೋಪ ಮಾಡಲಾಗಿತ್ತು.

ಈ ಹಿನ್ನೆಲೆಯಲ್ಲಿ ವಿಕಾಸ್​ ಮಿಶ್ರಾ ಅವರನ್ನು ವರ್ಗಾವಣೆ ಮಾಡಲಾಗಿತ್ತು. ಈ ಬೆಳವಣಿಗೆಯ ನಂತರ ಸಾಮಾಜಿಕ ಜಾಲತಾಣ ಬಳಕೆದಾರರು ಸುಷ್ಮಾ ಸ್ವರಾಜ್​ ಅವರು ನಿರ್ಧಾರವನ್ನು ಟೀಕಿಸಲು ಪ್ರಾರಂಭಿಸಿದ್ದರು. ಆ ನಂತರ ಹಲವರು ಸುಷ್ಮಾ ವಿರುದ್ಧ ಅಸಭ್ಯ ಪದಗಳನ್ನು ಬಳಸಿ ಟೀಕೆ ಮಾಡಿದ್ದರು.

ಮಮತಾ ಬ್ಯಾನರ್ಜಿ ಖಂಡನೆ

ಸುಷ್ಮಾ ಸ್ವರಾಜ್​ ಅವರ ವಿರುದ್ಧ ಅಸಭ್ಯ ಪದಗಳ ಬಳಕೆ ಮಾಡಿರುವುದನ್ನು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಖಂಡಿಸಿದ್ದಾರೆ. ಈ ಕುರಿತು ಟ್ವೀಟ್​ ಮಾಡಿರುವ ಅವರು ಸುಷ್ಮಾ ವಿರುದ್ಧ ಬಳಕೆಯಾಗಿರುವ ಭಾಷೆಯನ್ನು ನಾನು ಖಂಡಿಸುತ್ತೇನೆ. ಅವರು ಹಿರಿಯ ರಾಜಕಾರಣಿ, ಅವರಿಗೆ ಗೌರವ ಕೊಡಬೇಕು. ನಾವು ಬೇರೆಯವರಿಗೆ ಗೌರವ ಕೊಡಬೇಕು, ಯಾರನ್ನೂ ನಿಂದಿಸಬಾರದು ಎಂದು ತಿಳಿಸಿದ್ದಾರೆ. (ಏಜೆನ್ಸೀಸ್​)