ರಕ್ಷಣೆ ನೀಡುವಂತೆ ಗೃಹಸಚಿವರಿಗೆ ಶಾಸಕ ಎಂ.ಪಿ.ಕುಮಾರಸ್ವಾಮಿ ಮನವಿ

ಮೂಡಿಗೆರೆ: ನನಗೆ ಪ್ರಾಣ ಬೆದರಿಕೆ ಇರುವುದರಿಂದ ಸೂಕ್ತ ರಕ್ಷಣೆ ನೀಡಬೇಕು ಹಾಗೂ ಹಿಂದೆ ಹಲ್ಲೆಗೆ ಯತ್ನಿಸಿದ್ದ ದೇವವೃಂದ ರವಿ ಮತ್ತು ತಂಡದ ವಿರುದ್ಧ ದೌರ್ಜನ್ಯ ಕಾಯ್ದೆಯಡಿ ದೂರು ದಾಖಲಿಸಬೇಕು ಎಂದು ಶಾಸಕ ಎಂ.ಪಿ.ಕುಮಾರಸ್ವಾಮಿ ಗೃಹ ಸಚಿವರಿಗೆ ದೂರು ಸಲ್ಲಿಸಿದ್ದಾರೆ.

2004ರಲ್ಲಿ ಶಾಸಕನಾಗಿದ್ದಾಗ ಆಸ್ಪತ್ರೆಯಲ್ಲಿ ವೈದ್ಯರಿಲ್ಲ ಎಂದು ನೆಪಮಾಡಿ ರಾತ್ರಿ ವೇಳೆ ದೇವವೃಂದ ರವಿ ಮತ್ತು ತಂಡ ಮನೆಗೆ ನುಗ್ಗಿ ನನ್ನ ಮೇಲೆ ಹಲ್ಲೆ ನಡೆಸಿದ್ದರು. ಈ ಕುರಿತು ಮೂಡಿಗೆರೆ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ನಂತರ ಕ್ಷೇತ್ರದ ಹಲವು ಹಿರಿಯರ ಮಾರ್ಗದರ್ಶನದಂತೆ ಅವರ ಮೇಲಿನ ಪ್ರಕರಣ ವಾಪಸ್ ಪಡೆದಿದ್ದೆ.

ಆದರೆ ಈಗ ಮತ್ತೆ ದೇವವೃಂದ ರವಿ ಮತ್ತು ಲಕ್ಷ್ಮಣಕುಮಾರ್ ನಮ್ಮ ತಾಯಿ ಜಮೀನಿನ ವಿಚಾರದಲ್ಲಿ ಅನವಶ್ಯಕವಾಗಿ ತಗಾದೆ ತೆಗೆದಿದ್ದಾರೆ. ಕೋರ್ಟ್ ತೀರ್ಪು ನನ್ನ ತಾಯಿ ಪರವಾಗಿ ಬಂದಿದ್ದರೂ ನ್ಯಾಯಾಲಯದ ತೀರ್ಪು ಉಲ್ಲಂಘಿಸಿ ಫೆ.18ರಂದು ಬಾಳೂರು ಠಾಣೆಯಲ್ಲಿ ಪ್ರತಿಭಟನೆ ನಡೆಸಿದ್ದಾರೆ ಎಂದು ದೂರಿದರು.

ನಾನು ಪರಿಶಿಷ್ಟ ಜಾತಿಗೆ ಸೇರಿದವನೆಂಬ ಕಾರಣಕ್ಕೆ ನನ್ನನ್ನು ಅವಹೇಳನಕಾರಿಯಾಗಿ ನಿಂದಿಸಿ ಭಾಷಣ ಮಾಡಿದ್ದಾರೆ. ನನ್ನ ಮೇಲೆ ಮತ್ತೆ ಯಾವ ಸಮಯದಲ್ಲಾದರೂ ಹಲ್ಲೆ ಅಥವಾ ಜೀವ ಬೆದರಿಕೆಯೊಡ್ಡುವ ಸಂದರ್ಭ ಇರುವುದರಿಂದ ನನಗೆ ಮತ್ತು ನನ್ನ ವಾಸದ ಮನೆ ಹಾಗೂ ಕಲ್ಮನೆ ಗ್ರಾಮದಲ್ಲಿನ ತೋಟಕ್ಕೆ ಸೂಕ್ತ ರಕ್ಷಣೆ ಒದಗಿಸಿ ದೇವವೃಂದ ರವಿ ಮತ್ತು ಲಕ್ಷ್ಮಣಕುಮಾರ್ ಮೇಲೆ ದೌರ್ಜನ್ಯ ಕಾಯ್ದೆಯಡಿ ದೂರು ದಾಖಲಿಸಬೇಕೆಂದು ಒತ್ತಾಯಿಸಿದ್ದಾರೆ.