ಸಂಸದ ಜಿಗಜಿಣಗಿಗೆ ವಿಶ್ರಾಂತಿ ನೀಡಿ

ಚಡಚಣ: ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಅವರು 40 ವರ್ಷ ಅಧಿಕಾರದಲ್ಲಿದ್ದರೂ ಜನರ ಅಗತ್ಯ ಬೇಡಿಕೆ ಈಡೇರಿಸುವಲ್ಲಿ ಸಂಪೂರ್ಣ ವಿಲರಾಗಿದ್ದು, ಅವರಿಗೆ ಗೌರವದಿಂದ ರಾಜಕೀಯ ವಿಶ್ರಾಂತಿ ನೀಡಬೇಕು ಎಂದು ಗೃಹ ಸಚಿವ ಡಾ. ಎಂ.ಬಿ. ಪಾಟೀಲ ಹೇಳಿದರು.

ಪಟ್ಟಣದ ಕೆಇಬಿ ಕಚೇರಿ ಪಕ್ಕದ ಮೈದಾನದಲ್ಲಿ ವಿಜಯಪುರ ಲೋಕಸಭಾ ಮೈತ್ರಿ ಅಭ್ಯರ್ಥಿ ಡಾ. ಸುನೀತಾ ಚವಾಣ್ ಪರ ಪ್ರಚಾರಾರ್ಥವಾಗಿ ಶನಿವಾರ ಹಮ್ಮಿಕೊಂಡಿದ್ದ ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಮಾತನಾಡಿದರು.

ಜಿಗಜಿಣಗಿ ಕೇಂದ್ರ ಕುಡಿಯುವ ನೀರಿನ ಖಾತೆ ಸಚಿವರಾಗಿದ್ದರೂ ಸ್ವಗ್ರಾಮದಲ್ಲಿ ನೀರಿನ ಅಭಾವಕ್ಕೆ ಪರಿಹಾರ ಕಂಡುಕೊಂಡಿಲ್ಲ. ಭೂತನಾಳ ಕೆರೆ ಪಕ್ಕ ಕೊಟ್ಯಂತರ ರೂ. ಮೌಲ್ಯದ 150 ಎಕರೆ ಜಮೀನು ಹೊಂದಿರುವ ರಮೇಶ ಜಿಗಜಿಣಗಿ ಅವರಿಗೆ ಭೂತನಾಳ ಕೆರೆಗೆ ನೀರು ತುಂಬಿಸಲು ಸಾಧ್ಯವಾಗಲಿಲ್ಲ. ವಯಸ್ಸಿನಲ್ಲಿ ಹಿರಿಯರಾದ ಇಂಥವರಿಗೆ ಗೌರವದಿಂದ ರಾಜಕೀಯ ವಿಶ್ರಾಂತಿ ನೀಡುವ ಕಾಲ ಸನ್ನಿಹಿತವಾಗಿದ್ದು, ಮೈತ್ರಿ ಅಭ್ಯರ್ಥಿ ಸುನೀತಾ ಚವಾಣ್ ಅವರನ್ನು ಹೆಚ್ಚು ಮತಗಳ ಅಂತರದಿಂದ ಈ ಬಾರಿ ಸಂಸತ್ತಿಗೆ ಕಳುಹಿಸೋಣ ಎಂದರು.

ಆರೋಗ್ಯ ಸಚಿವ ಶಿವಾನಂದ ಪಾಟೀಲ ಮಾತನಾಡಿ, ಸಂಸದ ರಮೇಶ ಜಿಗಜಿಣಗಿ ತಮ್ಮ ಅಧಿಕಾರ ಅವಧಿಯಲ್ಲಿ ಲೋಕಸಭೆಯಲ್ಲಿ ಒಮ್ಮೆಯೂ ಧ್ವನಿ ಎತ್ತಲಿಲ್ಲ ಎಂದು ವ್ಯಂಗವಾಡಿದ ಅವರು ಮೈತ್ರಿ ಅಭ್ಯರ್ಥಿ ಡಾ. ಸುನೀತಾ ಚವಾಣ್ ಅವರ ಗೆಲುವಿಗೆ ಎರಡೂ ಪಕ್ಷದ ಕಾರ್ಯಕರ್ತರು ಒಗ್ಗಟ್ಟಾಗಿ ಶ್ರಮಿಸಬೇಕು ಎಂದು ಕರೆ ನೀಡಿದರು.

ವಿಪ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, ರಾಜ್ಯದಲ್ಲಿ ಮೈತ್ರಿ ಪಕ್ಷ 18 ರಿಂದ 19 ಸ್ಥಾನಗಳಲ್ಲಿ ಗೆಲ್ಲುವ ನಿರೀಕ್ಷೆ ಇದೆ. ಎಲ್ಲ ಪಕ್ಷಗಳು ಸೇರಿ 50 ವರ್ಷಗಳಲ್ಲಿ ಕೇಂದ್ರದಲ್ಲಿ ಮಾಡಿದ ಭ್ರಷ್ಟಾಚಾರವನ್ನು ಬಿಜೆಪಿಯವರು ಕೇವಲ 5 ವರ್ಷಗಳಲ್ಲಿ ಮಾಡಿ ಮುಗಿಸಿದ್ದಾರೆ ಇದು ಅವರ ಸಾಧನೆ ಎಂದು ಆರೋಪಿಸಿದರು.

ನಾಗಠಾಣ ಕ್ಷೇತ್ರದ ಮಾಜಿ ಶಾಸಕರಾದ ವಿಠ್ಠಲ ಕಟಕಧೋಂಡ, ಪ್ರೊ. ರಾಜು ಆಲಗೂರ, ಸಿಎಂ ರಾಜಕೀಯ ಕಾರ್ಯದರ್ಶಿ ಎನ್.ಎಚ್. ಕೋನರೆಡ್ಡಿ, ಜೆಡಿಎಸ್ ಮುಖಂಡ ಎಂ.ಆರ್. ಪಾಟೀಲ (ಬಳ್ಳೊಳ್ಳಿ) ಸೇರಿದಂತೆ ಮತ್ತಿತರರು ಮಾತನಾಡಿದರು. ಮೈತ್ರಿ ಅಭ್ಯರ್ಥಿ ಡಾ. ಸುನೀತಾ ಚವಾಣ್ ಮತಯಾಚನೆ ಮಾಡಿದರು.
ಶಾಸಕ ಡಾ. ದೇವಾನಂದ ಚವಾಣ್, ಮೈತ್ರಿ ಪಕ್ಷದ ಮುಖಂಡರಾದ ಬಿ.ಜಿ. ಪಾಟೀಲ (ಹಲಸಂಗಿ), ಮಲ್ಲಿಕಾರ್ಜುನ ಯಂಡಿಗೇರಿ, ರವಿಗೌಡ ಪಾಟೀಲ, ಶಿವಕಾಂತಾ ನಾಯ್ಕ, ಮಹಾದೇವಿ ಗೋಕಾಕ, ರೇಷ್ಮಾ ಪಡೇಕನೂರ, ಸದಾಶಿವ ಜಿತ್ತಿ, ಸಾಹೇಬಗೌಡ ಬಿರಾದಾರ, ಪಪಂ ಅಧ್ಯಕ್ಷ ಬಾಬುಗೌಡ ಪಾಟೀಲ, ಶಿವಶರಣ ಭೈರಗೊಂಡ, ಯುನುಸಅಲಿ ಮಕಾನದಾರ, ಸಿದ್ದಣ್ಣಸಾಹುಕಾರ ಬಿರಾದಾರ, ಕಾಂತುಗೌಡ ಪಾಟೀಲ ಇತರರು ವೇದಿಕೆಯಲ್ಲಿದ್ದರು.

ಮೋದಿ ಅವರು ರೈತರಿಗೆ ಹಾಗೂ ಬಡವರಿಗೆ ಕೇವಲ ಸುಳ್ಳು ಭರವಸೆಗಳನ್ನು ನೀಡಿ ಮೋಸಮಾಡುತ್ತಿದ್ದಾರೆ. ಸಚಿವರಾದ ಡಾ. ಎಂ.ಬಿ. ಪಾಟೀಲ ಹಾಗೂ ಶಿವಾನಂದ ಪಾಟೀಲ ಅವರು ಜಿಲ್ಲೆಯ ಜೋಡೆತ್ತುಗಳಾಗಿ ಸುನಿತಾ ಚವಾಣ್ ಎಂಬ ಬಂಡಿಯನ್ನು ದೆಹಲಿ ಸಂಸತ್ತಿನವರೆಗೆ ಯಶಸ್ವಿಯಾಗಿ ಎಳೆದುಕೊಂಡು ಹೋಗುತ್ತಾರೆ ಎಂಬ ಭರವಸೆ ನಮ್ಮೆಲ್ಲರಿಗಿದೆ.
ಬಂಡೆಪ್ಪ ಕಾಶೆಂಪುರ, ಸಹಕಾರ ಸಚಿವ

Leave a Reply

Your email address will not be published. Required fields are marked *