ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಡಿಜಿಟಲೀಕರಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ. ಡಿಜಿಟಲ್ ಇಂಡಿಯಾದ ಭಾಗವಾಗಿ ಈಗಾಗಲೇ ಹಲವು ಯೋಜನೆಗಳನ್ನು ಜಾರಿಗೆ ತರಲಾಗಿದೆ. ಈಗ 2021ರಲ್ಲಿ ನಡೆಯಲಿರುವ ಜನಗಣತಿ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಡಿಜಿಟಲೀಕರಿಸಲು ಸರ್ಕಾರ ನಿರ್ಧರಿಸಿದ್ದು, ಮೊಬೈಲ್ ಆ್ಯಪ್ ಮೂಲಕ ಮಾಹಿತಿ ಸಂಗ್ರಹಿಸಲಿದೆ.
ಜನಗಣತಿ ಪ್ರಾಧಿಕಾರದ ಹೊಸ ಕಚೇರಿಯ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಅಮಿತ್ ಷಾ 2021ರ ಜನಗಣತಿಯನ್ನು ಪೇಪರ್ ರಹಿತ ಮಾಡಲಾಗುವುದು. ಹೊಸದಾಗಿ ಅಭಿವೃದ್ಧಿಪಡಿಸಲಾಗುವ ಆ್ಯಪ್ ಅನ್ನು ಜನಗಣತಿಯಲ್ಲಿ ಪಾಲ್ಗೊಳ್ಳುವ ಶಾಲಾ ಶಿಕ್ಷಕರ ಮೊಬೈಲ್ ಫೋನ್ಗಳನ್ನು ಇನ್ಸ್ಟಾಲ್ ಮಾಡಲಾಗುವುದು. ಅವರು ಮೊಬೈಲ್ ಆ್ಯಪ್ ಬಳಸಿ ಅಗತ್ಯ ಮಾಹಿತಿಗಳನ್ನು ಸಂಗ್ರಹಿಸುವರು. ಸಂಗ್ರಹವಾದ ದತ್ತಾಂಶವನ್ನು ಜನಗಣತಿಯ ನಂತರ ವಿಶಿಷ್ಟ ನಾಗರಿಕ ಗುರುತಿನ ಚೀಟಿ ವಿತರಿಸಲು ಬಳಸಲಾಗುವುದು ಎಂದು ತಿಳಿಸಿದರು.
1860 ರಲ್ಲಿ ಮೊದಲ ಜನಗಣತಿ ಮಾಡಲಾಗಿತ್ತು. ಆ ನಂತರ 10 ವರ್ಷಗಳಿಗೆ ಒಮ್ಮೆ ಜನಗಣತಿ ನಡೆಸಲಾಗುತ್ತಿದ್ದು 2021 ರಲ್ಲಿ 16ನೇ ಜನಗಣತಿಯನ್ನು ನಡೆಸಲಾಗುವುದು. ಜನಗಣತಿಯಲ್ಲಿ ಮನೆಯಲ್ಲಿರುವ ಸೌಲಭ್ಯಗಳು, ಕುಡಿಯುವ ನೀರಿನ ಮೂಲ, ವಿದ್ಯುತ್ ಲಭ್ಯತೆ, ಜಾತಿ, ಉದ್ಯೋಗ ಮತ್ತು ಕುಟುಂಬದವರು ಮಾತನಾಡುವ ಭಾಷೆ ಸೇರಿದಂತೆ ಒಟ್ಟು 60 ಪ್ರಶ್ನೆಗಳಿಗೆ ಉತ್ತರ ಪಡೆಯಲಾಗುವುದು.
ಜನಗಣತಿ 2 ಹಂತಗಳಲ್ಲಿ ನಡೆಯಲಿದ್ದು, ಶಾಲಾ ಶಿಕ್ಷಕರು ಪ್ರತಿಯೊಂದು ಮನೆಗೆ ಭೇಟಿ ನೀಡಿ ಅವರ ಮನೆಯಲ್ಲಿರುವ ಸೌಲಭ್ಯಗಳ ಮಾಹಿತಿ ಕಲೆಹಾಕಲಿದ್ದಾರೆ. ಆ ನಂತರ 2021ರ ಮೊದಲಾರ್ಧದಲ್ಲಿ ಪ್ರತಿಯೊಂದು ಮನೆಯಲ್ಲಿರುವ ಜನರ ಮಾಹಿತಿ ಸಂಗ್ರಹಿಸಲಿದ್ದಾರೆ. ಮೊಬೈಲ್ ಆ್ಯಪ್ ಮೂಲಕ ಮಾಹಿತಿ ಸಂಗ್ರಹಿಸುವುದರಿಂದ ಜನಗಣತಿ ವರದಿಯನ್ನು ಬೇಗ ಸಿದ್ಧಪಡಿಸಲು ಸಾಧ್ಯವಾಗುತ್ತದೆ. 2011ರಲ್ಲಿ ನಡೆದ ಜನಗಣತಿಯನ್ನು ಪೇಪರ್ನಲ್ಲಿ ನಡೆಸಲಾಗಿತ್ತು. ಈ ಹಿನ್ನೆಲೆಯಲ್ಲಿ ಮಾಹಿತಿಯನ್ನು ಕ್ರೋಢೀಕರಿಸಿ ಅಂತಿಮ ವರದಿ ಬಿಡುಗಡೆ ಮಾಡಲು 7 ವರ್ಷ ಬೇಕಾಗಿತ್ತು. ಡಿಜಟಲೀಕರಣದಿಂದ ಈ ಪ್ರಕ್ರಿಯೆ ತ್ವರಿತವಾಗಿ ಮುಗಿಯಲಿದೆ ಎಂದು ಭಾರತದ ರಿಜಿಸ್ಟ್ರಾರ್ ಜನರಲ್ ವಿವೇಕ್ ಜೋಶಿ ತಿಳಿಸಿದ್ದಾರೆ. (ಏಜೆನ್ಸೀಸ್)