Monday, 19th November 2018  

Vijayavani

ರಾಜಧಾನಿಯಲ್ಲಿ ಹಸಿರು ಕ್ರಾಂತಿ-ಸಿಎಂ ಎಚ್​ಡಿಕೆ, ಡಿಸಿಎಂ ಪರಮೇಶ್ವರ್​ಗೆ ಡೆಡ್​​ಲೈನ್-ಕೂಡಲೇ ಸ್ಥಳಕ್ಕೆ ಬರುವಂತೆ ರೈತರ ಪಟ್ಟು        ಸೈಟ್ ಕೇಳ್ತಿಲ್ಲ, BMW ಕಾರೂ ಕೇಳ್ತಿಲ್ಲ-ನಾವು ಕೇಳ್ತಿರೋದು ಬೆಳೆದ ಬೆಲೆಗೆ ಬೆಲೆಯಷ್ಟೇ-ಸಚಿವ ಕಾಶಂಪೂರ್​​ಗೆ ಮನವಿ ಸಲ್ಲಿಕೆ        ರೈತರು, ಹೆಣ್ಮಕ್ಕಳ ವಿಚಾರದಲ್ಲಿ ಗೌರವ ಇದೆ-ನನ್ನ ಹೇಳಿಕೆಯಲ್ಲಿ ಯಾವುದೇ ದುರುದ್ದೇಶ ಇಲ್ಲ-ಸಿಎಂ ಹೇಳಿಕೆ ಬಿಡುಗಡೆ        ಸಿಎಂ ಕೂಡಲೇ ಕ್ಷಮೆ ಕೇಳಬೇಕು-ನಾಳಿನ ಕೋರ್​​​ ಕಮಿಟಿ ಸಭೆಯಲ್ಲಿ ಹೋರಾಟದ ನಿರ್ಧಾರ-ಸರ್ಕಾರದ ವಿರುದ್ಧ ಗುಡುಗಿದ ಬಿಜೆಪಿ        ₹3,300 ಕೋಟಿ, 132 ಕಿ.ಮೀ. ದೂರ-ಗುರಗಾಂವ್​​ನಲ್ಲಿ ಎಕ್ಸ್​​ಪ್ರೆಸ್​​ ಹೈವೇ ಲೋಕಾರ್ಪಣೆಗೊಳಿಸಿದ ಪ್ರಧಾನಿ        ರೈಲು ಬರುವ ವೇಳೆ ಹಳಿ ಮಧ್ಯೆ ಮಲಗಿದ ಭೂಪ-ಪ್ರಾಣದ ಹಂಗು ತೊರೆದು ಹುಚ್ಚು ಸಾಹಸ-ಹೈದ್ರಾಬಾದ್​ನಲ್ಲೊಂದು ಮಿರ‍್ಯಾಕಲ್       
Breaking News

ಗೃಹ ಸಾಲ ಹೊರೆ!

Saturday, 30.06.2018, 3:03 AM       No Comments

| ಅಭಿಲಾಷ್ ಪಿಲಿಕೂಡ್ಲು

ಬ್ಯಾಂಕ್​ಗಳಿಂದ ಲಕ್ಷಾಂತರ ರೂಪಾಯಿ ಗೃಹ ಸಾಲ ಪಡೆದೇ ಸಾಕಷ್ಟು ಜನ ನಗರ ಪ್ರದೇಶಗಳಲ್ಲಿ ನಿವೇಶನ, ಫ್ಲ್ಯಾಟ್ ಖರೀದಿಸುತ್ತಾರೆ. ಗೃಹ ಸಾಲ ತಕ್ಷಣ ಸಿಗಬಹುದು, ಆದರೆ ಬಡ್ಡಿಸಹಿತ ಪ್ರತಿ ತಿಂಗಳು ಸಾಲ ಮರುಪಾವತಿಯ ಲೆಕ್ಕಾಚಾರ ಹಾಕದೆ ಸಾಲ ತೆಗೆದುಕೊಂಡು ಕೈಸುಟ್ಟುಕೊಳ್ಳುವವರೇ ಹೆಚ್ಚಾಗಿದ್ದಾರೆ. ವರ್ಷಾಂತ್ಯಕ್ಕೆ ಗೃಹ ಸಾಲದ ಬಡ್ಡಿ ದರವೂ ಕೊಂಚ ಏರಿಕೆಯಾಗುವ ಸಾಧ್ಯತೆಯಿದೆ. ಹೀಗಾಗಿ, ಸಾಲ ತೆಗೆದುಕೊಳ್ಳುವ ಮುನ್ನ ಗಮನಿಸಬೇಕಾದ ಕೆಲ ಅಂಶಗಳು ಇಲ್ಲಿವೆ.

ಬಹುತೇಕರು ಸ್ಪಷ್ಟ ಲೆಕ್ಕಾಚಾರ ಹಾಕಿಕೊಳ್ಳದೆ ಲಕ್ಷಾಂತರ ರೂ. ಗೃಹ ಸಾಲವನ್ನು ಮೈಮೇಲೆ ಎಳೆದುಕೊಳ್ಳುತ್ತಾರೆ. ಮೊದಲ ಹೆಜ್ಜೆಯಲ್ಲೇ ಎಡವಿದರೆ ಅಂದಾಜು 20-25 ವರ್ಷ ಕಾಲ ಸಾಲದ ಶೂಲದ ಅಡಿಯಲ್ಲೇ ಬದುಕು ಸವೆಸಬೇಕಾದೀತು.

ಬ್ಯಾಂಕಿಂಗ್ ಕ್ಷೇತ್ರದ ತಜ್ಞರ ಪ್ರಕಾರ, ಸೆಪ್ಟೆಂಬರ್ ವೇಳೆಗೆ ಗೃಹ ಸಾಲ ಬಡ್ಡಿ ದರದಲ್ಲಿ 25ರಿಂದ 30 ಬಿಪಿಎಸ್(ಬೇಸಿಸ್ ಪಾಯಿಂಟ್ಸ್), ಎಂದರೆ ಅಂದಾಜು ಶೇ.0.30 ಬಡ್ಡಿ ಮೊತ್ತ ಹೆಚ್ಚಳವಾಗುವ ಸಾಧ್ಯತೆಯಿದೆ. ಪ್ರಸ್ತುತ ಬಹುತೇಕ ರಾಷ್ಟ್ರೀಕೃತ ಹಾಗೂ ಖಾಸಗಿ ವಲಯ ಬ್ಯಾಂಕ್​ಗಳಲ್ಲಿ ಶೇ.8.30ರಿಂದ ಶೇ.9.15ರವರೆಗಿನ ಬಡ್ಡಿ ದರದಲ್ಲಿ ಗೃಹ ಸಾಲ ದೊರೆಯುತ್ತಿದೆ. ವರ್ಷಾಂತ್ಯಕ್ಕೆ ಈ ದರ ಕನಿಷ್ಠ ಶೇ.8.70 ರಿಂದ ಶೇ.8.80ರವರೆಗೆ ಏರಿಕೆಯಾಗುವ ಸಾಧ್ಯತೆಯಿದೆ.

ಉದಾಹರಣೆಗೆ ಶೇ.8.5 ಬಡ್ಡಿ ದರದಲ್ಲಿ ಮರುಪಾವತಿ ಅವಧಿ 20 ವರ್ಷಗಳಿದ್ದರೆ, 1 ಲಕ್ಷ ರೂ.ಗೆ 855-874 ರೂ.ವರೆಗೆ ಪ್ರತಿ ತಿಂಗಳು ಸಾಲ ಮರುಪಾವತಿಸಬೇಕು. 10 ಬಿಪಿಎಸ್ ಏರಿಕೆಯಿಂದ ಪ್ರತಿ ತಿಂಗಳ ಕಂತು ಹೆಚ್ಚುವರಿಯಾಗಿ 317 ರೂ. ಏರಿಕೆಯಾಗಲಿದೆ. ಹೀಗಾಗಿ ಗೃಹ ಸಾಲಕ್ಕೆ ಬ್ಯಾಂಕ್​ಗೆ ಹೋಗುವ ಮೊದಲು ಪೂರ್ವಸಿದ್ಧತೆ ಅತಿ ಅಗತ್ಯ. ತೆಗೆದುಕೊಳ್ಳುವ ಸಾಲದ ಮೊತ್ತ, ಪ್ರಸ್ತುತ ಸಿಗುತ್ತಿರುವ ವೇತನ, ಪ್ರತಿ ತಿಂಗಳು ಪಾವತಿಸಬೇಕಾದ ಕಂತು, ಸಾಲದ ಅವಧಿ ಈ ಎಲ್ಲ ವಿಚಾರಗಳನ್ನು ಲೆಕ್ಕಾಚಾರ ಹಾಕಿಯೇ ಗೃಹ ಸಾಲ ಪಡೆದುಕೊಳ್ಳಬೇಕು.

ಮರುಪಾವತಿ ಅವಧಿ ಏರಿಸದಿರಿ: ಬಡ್ಡಿ ದರ ಏರಿಕೆಯಾಯಿತೆಂದು ಅಥವಾ ಸಾಲ ಮರುಪಾವತಿ ಹೊರೆಯಾಗಲಿದೆ ಎಂಬ ಭಯದಿಂದ ಮರುಪಾವತಿ ಅವಧಿ ವಿಸ್ತರಿಸಬೇಡಿ. ಗ್ರಾಹಕರಿಗೆ ಸಾಲ ಮರುಪಾವತಿ ಅವಧಿ ಏರಿಸುವಂತೆ ಸಾಲ ನೀಡುವ ಸಂಸ್ಥೆಗಳು ಸಲಹೆ ನೀಡುತ್ತವೆ. ಇದನ್ನು ಪಾಲಿಸದೆ ಹೊಸ ವಿಧಾನದಲ್ಲಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ. ಪ್ರತಿ ತಿಂಗಳು ಪಾವತಿಸುವ ಮೊತ್ತ ಹೆಚ್ಚಳ ಮಾಡಿ, ತಕ್ಷಣಕ್ಕೆ ಇದು ಹೊರೆಯಾಗಿ ಕಾಣಬಹುದು. ಆದರೆ ಮರುಪಾವತಿ ಅವಧಿ ವಿಸ್ತರಿಸುವುದರಿಂದ ಬಡ್ಡಿ ಹೊರೆಯೂ ಹೆಚ್ಚಲಿದೆ.

ಪ್ರತಿ ವರ್ಷ ವೇತನ ಹೆಚ್ಚಳವಾದಂತೆ ಪ್ರತಿ ತಿಂಗಳ ಕಂತು ಮೊತ್ತ ಸ್ವಲ್ಪ ಹೆಚ್ಚಿಸುವುದರ ಮೂಲಕವೂ ಬಡ್ಡಿ ಹೊರೆಯಿಂದ ಪಾರಾಗಬಹುದು. ಉದಾಹರಣೆಗೆ ಪ್ರತಿ ವರ್ಷದ ಇಎಂಐ ಒಟ್ಟು ಮೊತ್ತ ಶೇ.5 ಹೆಚ್ಚಿಸಿದರೆ ಸಾಲ ಮರುಪಾವತಿ ಅವಧಿ ಕ್ರಮೇಣವಾಗಿ 12 ವರ್ಷಕ್ಕೆ ಇಳಿಕೆಯಾಗಲಿದೆ. ಜತೆಗೆ ಸಿಗುವಂತಹ ಬೋನಸ್ ಅಥವಾ ಅವಧಿ ಮುಕ್ತಾಯವಾದ ವಿಮೆ, ನಿಶ್ಚಿತ ಠೇವಣಿ ಮೊತ್ತವನ್ನು ಸಾಲ ಮರುಪಾವತಿಗೆ ಬಳಸಿಕೊಳ್ಳಿ. ಇದರಿಂದ ಸಾಲದ ಅವಧಿ ಹಾಗೂ ಬಡ್ಡಿ ಹೊರೆ ಇಳಿಸಬಹುದಾಗಿದೆ. ಇಎಂಐ ಮೊತ್ತ ಕೈಗೆ ಸಿಗುವ ವೇತನದ ಶೇ.30-40ರೊಳಗೆ ಇರುವಂತೆ ನೋಡಿಕೊಳ್ಳಬೇಕಾಗಿರುವುದು ಅಗತ್ಯ.

ಉಳಿತಾಯಕ್ಕಿರಲಿ ಆದ್ಯತೆ

ಗೃಹ ಸಾಲ ನೀಡುವ ಬಹುತೇಕ ಸಂಸ್ಥೆಗಳು ಕಂತು ಪಾವತಿ ಪ್ರಾರಂಭಕ್ಕೆ 1 ವರ್ಷದವರೆಗೆ ಕಾಲಾವಕಾಶ ನೀಡುತ್ತವೆ. ಉಳಿತಾಯಕ್ಕೆ ಹೆಚ್ಚಿನ ಆದ್ಯತೆ ನೀಡಿ, ಮುಂದಿನ 1 ವರ್ಷಕ್ಕೆ ಅಗತ್ಯವಿರುವ ಕಂತು ಪಾವತಿ ಹಣ ಠೇವಣಿಯಲ್ಲಿ ಇಡಬಹುದು.

ಹೆಚ್ಚಿನ ಬಡ್ಡಿ ಸಾಲ ಮೊದಲು ಮುಗಿಸಿ

ನಗರ ಪ್ರದೇಶದಲ್ಲಿ ಕುಟುಂಬ ನಿರ್ವಹಣೆ ಮಾಡುವವರು ಕನಿಷ್ಠ 2-3 ಸಾಲ ಪಡೆದಿರುತ್ತಾರೆ. ಗೃಹ ಸಾಲದ ಜತೆಗೆ ವಾಹನ ಹಾಗೂ ಸ್ವಂತ ಖರ್ಚಿಗಾಗಿ ಹೆಚ್ಚಿನ ಬಡ್ಡಿ ದರ ನೀಡಿ ಸಾಲ ಪಡೆದುಕೊಂಡಿರುತ್ತಾರೆ. ಇಂತಹ ಸಂದರ್ಭದಲ್ಲಿ ಹೆಚ್ಚಿನ ಬಡ್ಡಿ ದರ ಇರುವ ಸಾಲ ಮರುಪಾವತಿಗೆ ಆದ್ಯತೆ ನೀಡಬೇಕು. ಇಲ್ಲದೆ ಹೋದಲ್ಲಿ ಬಡ್ಡಿ ಹೊರೆ ವರ್ಷದಿಂದ ವರ್ಷಕ್ಕೆ ಏರಿಕೆಯಾಗಲಿದೆ. ಜತೆಗೆ ಇತರೆ ಸಾಲದ ಕಂತುಗಳನ್ನೂ ಸಮಯಕ್ಕೆ ಸರಿಯಾಗಿ ಕಟ್ಟುತ್ತಾ ಹೋದರೆ, ಕ್ರೆಡಿಟ್ ಅಂಕ ಉತ್ತಮವಾಗಿರಲಿದೆ. ಇದರಿಂದ ಮುಂದಿನ ದಿನಗಳಲ್ಲಿ ಮತ್ತೆ ಸಾಲ ಪಡೆಯಲು ಅನುಕೂಲವಾಗಲಿದೆ.

Leave a Reply

Your email address will not be published. Required fields are marked *

Back To Top