ಮನೆಗೆ ಬೆಂಕಿ ಹೊತ್ತಿಕೊಂಡು ಬಾಲಕಿ ಸಾವು

ಬೆಳಗಾವಿ: ಇಲ್ಲಿಯ ಅನಗೋಳ ರಘುನಾಥಪೇಠ ಪ್ರದೇಶದಲ್ಲಿ ಸೋಮವಾರ ತಡರಾತ್ರಿ ಸಂಭವಿಸಿದ ಶಾರ್ಟ್ ಸರ್ಕ್ಯೂಟ್‌ನಿಂದ ಸಂಭವಿಸಿದ ಅಗ್ನಿ ದುರಂತದಲ್ಲಿ 8 ವರ್ಷದ ಬಾಲಕಿ ಜೀವಂತ ದಹನವಾಗಿದ್ದಾಳೆ. ಬೆಂಕಿಗೆ ಇಡೀ ಮನೆ ಸುಟ್ಟು ಕರಕಲಾಗಿದ್ದು, ಸಂಗ್ರಹಿಸಿದ್ದ ಲಕ್ಷಾಂತರ ರೂ.ಮೌಲ್ಯದ ದವಸ ಧಾನ್ಯಗಳು ಭಸ್ಮವಾಗಿವೆ.
ರಾಮು ಮಲತವಾಡಿ ಎಂಬುವರ ಮಗಳು ಕಸ್ತೂರಿ(8) ಮೃತ ಬಾಲಕಿ.

ರಾತ್ರಿ ಊಟ ಮುಗಿಸಿ ತಾಯಿ ಹಾಗೂ ಮೂವರು ಮಕ್ಕಳು ಮನೆಯಲ್ಲಿ ನಿದ್ದೆಗೆ ಜಾರಿದ್ದರು.ರಾತ್ರಿ 11.45ರ ಸುಮಾರಿಗೆ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಹೊತ್ತಿಕೊಂಡ ಬೆಂಕಿ ಇಡೀ ಮನೆಗೆ ವ್ಯಾಪಿಸಿಕೊಂಡಿದೆ. ಆಗ ತಾಯಿಗೆ ಎಚ್ಚರವಾಗಿದೆ. ಗಾಬರಿಗೊಂಡ ತಾಯಿ ಇಬ್ಬರು ಮಕ್ಕಳನ್ನು ಎತ್ತಿಕೊಂಡು ಮನೆಯಿಂದ ಹೊರಗೆ ಓಡಿ ಬಂದಿದ್ದಾಳೆ. ಮತ್ತೊಂದು ಮಗುವನ್ನು ತರಲು ಹೋಗುವುದರೊಳಗೆ ಬೆಂಕಿ ಕೆನ್ನಾಲಿಗೆ ಚಾಚಿದೆ.

ಒಳಗಡೆ ಇದ್ದ ಬಾಲಕಿಯ ನರಳಾಟ ಸಹಿಸಲಾಗದ ತಾಯಿ ಜೀವದ ಹಂಗು ತೊರೆದು ಮಗಳ ರಕ್ಷಣೆಗೆ ಮುಂದಾಗಿದ್ದಾಳೆ. ಆದರೆ, ಬೆಂಕಿಯ ತೀವ್ರತೆ ಕಂಡು ಸ್ಥಳೀಯರು ಈ ತಾಯಿಯನ್ನು ತಡೆದು ನೀರು ಹಾಕಿ ಬೆಂಕಿ ನಂದಿಸಿಸಲು ಪ್ರಯತ್ನ ಪಟ್ಟಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ, ಬೆಂಕಿ ನಂದಿಸುವಷ್ಟರಲ್ಲಿ ಬಾಲಕಿ ಬೆಂಕಿಯಲ್ಲಿ ಬೆಂದು ಪ್ರಾಣ ಬಿಟ್ಟಿದ್ದಳು.

ಬೆಂಕಿಗಾಹುತಿಯಾಗಿದ್ದ ಮಗಳ ಮೃತ ದೇಹ ನೋಡುತ್ತಿದ್ದಂತೆಯೇ ತಾಯಿ ಹಾಗೂ ಮಕ್ಕಳ ರೋದನ ಮುಗಿಲು ಮುಟ್ಟಿತ್ತು. ಒಟ್ಟು 10 ಲಕ್ಷಕ್ಕೂ ಅಧಿಕ ರೂ.ನಷ್ಟವಾಗಿದೆ ಎಂದು ತಿಳಕವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Leave a Reply

Your email address will not be published. Required fields are marked *