ಹೋಮ, ಪೂಜೆ ಮಾಡಿದ್ರೆ ಫಲಿತಾಂಶ ಬದಲಾಗಲ್ಲ ಎಂದು ಟಾಂಗ್‌ ಕೊಟ್ಟ ಸುಮಲತಾ ಪುತ್ರ ಅಭಿಷೇಕ್‌

ಮಂಡ್ಯ: ಹೋಮ, ಪೂಜೆ ಮಾಡಿದರೆ ಯಾವುದೂ ಬದಲಾಗುವುದಿಲ್ಲ. ಜನ ಈಗಾಗಲೇ ತೀರ್ಮಾನ ಮಾಡಾಗಿದೆ. ಎಷ್ಟೇ ಸರ್ವೇ ಮಾಡಿದ್ದರೂ ಕೂಡ ಫಲಿತಾಂಶ ಬದಲಾಗುವುದಿಲ್ಲ ಎಂದು ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಪುತ್ರ ಅಭಿಷೇಕ್‌ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಕುಟುಂಬಕ್ಕೆ ಪರೋಕ್ಷವಾಗಿ ಟಾಂಗ್‌ ನೀಡಿದ್ದಾರೆ.

ಮಂಡ್ಯ ತಾಲೂಕು ಹನಿಯಂಬಾಡಿಯಲ್ಲಿ ಗೃಹಪ್ರವೇಶ ಕಾರ್ಯದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಾವು ಯಾವುದೇ ಸರ್ವೇ ಮಾಡಿಲ್ಲ. ಅದರ ಅವಶ್ಯಕತೆ ಇಲ್ಲ. ಅವತ್ತೇ ನಮಗೇ ಫಲಿತಾಂಶ ಗೊತ್ತಾಗಿದೆ. ಸಿನಿಮಾ ಕೆಲಸದಲ್ಲಿ ಬ್ಯುಸಿ ಇದ್ದೆ. 10 ದಿನದಿಂದ ಬಂದಿರಲಿಲ್ಲ. ಜನ ಕಾರ್ಯಕ್ರಮಗಳಿಗೆ ಪ್ರೀತಿಯಿಂದ ಕರೆಯುತ್ತಾರೆ. ಅದಕ್ಕಾಗಿ ಪ್ರೀತಿಯಿಂದ ಬಂದಿದ್ದೇನೆ ಎಂದರು.

ಈ ತಿಂಗಳು ಅಂಬಿ ಕುಟುಂಬಕ್ಕೆ ವಿಶೇಷ ತಿಂಗಳಾಗಿದ್ದು, 23ರಂದು ಅಮ್ಮನ ಫಲಿತಾಂಶ ಬರುತ್ತದೆ. 24ರಂದು ಅಮ್ಮನ ಚಿತ್ರ ಬಿಡುಗಡೆಯಾಗಲಿದೆ. 29ಕ್ಕೆ ಅಂತ ಚಿತ್ರ ಮರು ಬಿಡುಗಡೆಯಾಗಲಿದೆ. 29ಕ್ಕೆ ಅಂಬರೀಷ್ ಅಪ್ಪನ ಹುಟ್ಟು ಹಬ್ಬ. 31ಕ್ಕೆ ಅಮರ್ ಚಿತ್ರ ಬಿಡುಗಡೆಯಾಗಲಿದೆ. ಹೀಗಾಗಿ ನಮಗೆ ಇದು ವಿಶೇಷ ತಿಂಗಳಾಗಿದೆ. ಮಂಡ್ಯದಲ್ಲೇ ಅಂಬಿ ಹುಟ್ಟುಹಬ್ಬ ಆಚರಣೆಗೆ ಚಿಂತನೆ ಇದೆ. ಆ ಬಗ್ಗೆ ಇನ್ನು ನಿರ್ಧಾರ ಆಗಿಲ್ಲ. 23ರ ಬಳಿಕ ನಿರ್ಧಾರ ಪ್ರಕಟಿಸಲಾಗುತ್ತದೆ. ದೆಹಲಿಗೆ ಹೋಗುವ ಸಂದರ್ಭ ಬಂದರೆ ಬದಲಾವಣೆ ಮಾಡಲಾಗುತ್ತದೆ ಎಂದರು.

ಟೀ, ಕಾಫಿ ಕುಡಿಯೋಕೆ ಮಂಡ್ಯಕ್ಕೆ ಬರಬೇಕಾ ಎಂದು ನಿಖಿಲ್‌ ಟೀಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ನಮ್ಮನ್ನ ಪ್ರೀತಿಯಿಂದ ಕರೆಯುತ್ತಾರೆ. ಅವರ ಪ್ರೀತಿಗಾಗಿ ಬರುತ್ತೇವೆ. ಪಾಪ ಕೆಲವರನ್ನು ಕರೆಯುವುದಿಲ್ಲವೇನೋ,. ಅದಕ್ಕೆ ಅವರು ಬರುವುದಿಲ್ಲ ಎಂದ ಅವರು, ಸ್ನೇಹ ಅಳಸಿದ ವಿಚಾರವಾಗಿ ಮಾತನಾಡಿ ಅದೇನು ಟ್ರ್ಯಾಜಿಡಿನ ಬಿಡ್ರಿ ಎಂದು ನಿಖಿಲ್ ಸಿನಿಮಾಗೆ ಶುಭಾಶಯ ಕೋರಿದರು.

ನಿಖಿಲ್ ಎಲ್ಲಿದ್ದೀಯಪ್ಪಾ… ಸಿನಿಮಾ ಮಾಡುವ ವಿಚಾರವಾಗಿ ಹೊಸ ಸಿನಿಮಾ ಮಾಡ್ತಿದ್ದಾರೆಂದು ಕೇಳಲ್ಪಟ್ಟೆ. ಆ ಸಿನಿಮಾಗೆ ಗುಡ್ ಲಕ್. 23ಕ್ಕೆ ಫಲಿತಾಂಶ ಗೊತ್ತಾಗುತ್ತೆ. ನಾವು ನಮ್ಮ ಗೆಲುವು ಎಂದರೆ ಅವರು ಅವರದ್ದೇ ಗೆಲುವು ಅಂತಾರೆ. ಈಗಾಗಲೇ ಮತ ಯಂತ್ರದಲ್ಲಿ ಭವಿಷ್ಯ ಸೇರಿದೆ. ಖಂಡಿತ ಮಂಡ್ಯದಲ್ಲೇ ಇರುತ್ತೇವೆ. ಸೋಲು-ಗೆಲುವು ಮುಖ್ಯವಲ್ಲ. ಮಂಡ್ಯ ಜನ ನಮ್ಮ ಕೈ ಹಿಡಿದಿದ್ದಾರೆ. ಅವರ ಕೈ ಬಿಡುವ ಪ್ರಶ್ನೆಯೇ ಅಲ್ಲ. ನಾನು ಮದ್ದೂರು ಹೀರೋ ಅಲ್ಲ. ಸದ್ಯಕ್ಕೆ ಸಿನಿಮಾ ಹೀರೋ ಆಗಿದ್ದೀನಿ. ಹಾಗೇ ಇರ್ತೀನಿ. ರಾಜಕೀಯದಲ್ಲಿ ಯಾರೂ ಹೀರೋ ಅಲ್ಲ. ಜನಗಳೇ ಹೀರೋ ಎಂದು ಹೇಳಿದರು. (ದಿಗ್ವಿಜಯ ನ್ಯೂಸ್)