ಕಳಸಾಪುರದಲ್ಲಿ ಹೋಮಕ್ಕೆ ಬಂದ ಹನುಮ

ಚಿಕ್ಕಮಗಳೂರು: ಕಾಶಿ ಸಮಾರಾಧನೆ ನಡೆಯುತ್ತಿದ್ದ ವೇಳೆ ದಿಢೀರ್ ಪ್ರತ್ಯಕ್ಷವಾದ ವಾನರವೊಂದು ಹಾಜರಾಗಿ ಪ್ರಸಾದ ಸೇವಿಸಿ ಸದ್ದಿಲ್ಲದೆ ನಿರ್ಗಮಿಸಿದ ಅಚ್ಚರಿಯ ಪ್ರಸಂಗಕ್ಕೆ ಕಳಸಾಪುರ ಸಾಕ್ಷಿಯಾಗಿದೆ.

ಗ್ರಾಮದ ಶಿವಕುಮಾರ್​ಎಂಬವರ ಮನೆಯಲ್ಲಿ ಹಿರಿಯರು ಕಾಶಿಯಾತ್ರೆ ಮುಗಿಸಿ ಬಂದಿದ್ದಾರೆ. ವಾಡಿಕೆಯಂತೆ ಕಾಶಿ ಸಮಾರಾಧನೆ ಹಾಗೂ ಪವಮಾನ ಹೋಮ ಸೇರಿದಂತೆ ವಿವಿಧ ಧಾರ್ವಿುಕ ಕಾರ್ಯಕ್ರಮಗಳನ್ನು ನಡೆಸಿ ಪ್ರಸಾದ ವಿನಿಯೋಗ ಆರಂಭಿಸುವ ಮುನ್ನಾ ಯಾರ ಭಯವೂ ಇಲ್ಲದೆ ಗಂಭೀರವಾಗಿ ಹೋಮಕುಂಡದ ಬಳಿ ವಾನರವೊಂದು ನೇರವಾಗಿ ಹೋಮದ ಕುಂಡದ ಬಳಿ ಬಂದು ನೈವೇದ್ಯಮಾಡಲು ಇಟ್ಟಿದ್ದ ಮೊಸರನ್ನ ಮತ್ತು ಪಂಚಾಮೃತವನ್ನು ಹಿಂಜರಿಕೆ ಇಲ್ಲದೆ ಸಮಾಧಾನವಾಗಿ ಸೇವಿಸಿತು.

ಮೊಸರನ್ನ ಸಮೀಪದಲ್ಲಿಯೇ ಬಾಳೆಹಣ್ಣು, ಸೇಬು ಮತ್ತಿತರ ಫಲಗಳನ್ನು ಇಟ್ಟಿದ್ದರೂ ಈ ವಾನರ ಅದನ್ನು ಮುಟ್ಟದಿರುವುದು ಅಚ್ಚ್ಚಗೆ ಕಾರಣವಾಗಿದೆ. ಇದನ್ನು ಕಂಡ ಸ್ಥಳೀಯರು ದೈವಿಕ ಪ್ರೇರಣೆಯಂತೆ ಸಾಕ್ಷಾತ್ ಮಾರುತಿಯೇ ಹೋಮಕ್ಕೆ ಆಗಮಿಸಿದ್ದಾನೆ ಎಂದು ಮೂಗಿನ ಮೇಲೆ ಬೆರಳಿಟ್ಟರು.

ಮಹಿಳೆಯರು ದಾಸ ಸಾಹಿತ್ಯದ ಗೀತೆಗಳನ್ನು ಹಾಡಿದರು. ಹಿರಿಯರೊಬ್ಬರು ರಾಜ್ಯಕ್ಕೆ ಬಂದಿರುವ ಬರವನ್ನು ನೀಗಿಸಿ ಸಮೃದ್ಧ ಮಳೆಬೆಳೆಯಾಗುವಂತೆ ಪ್ರಾರ್ಥಿಸಿದರು. ಸಾಮಾಜಿಕ ಜಾಲತಾಣದಲ್ಲಿ ಈ ವೀಡಿಯೋ ವೈರಲ್ ಆಗಿದೆ.