ಚಿಕ್ಕಮಗಳೂರು: ನಗರದ ಸುಗ್ಗಿಕಲ್ಲು ಬಡಾವಣೆಯ ಶ್ರೀ ಗುರು ರಾಘವೇಂದ್ರ ಯಜ್ಞ ಮಂಟಪದಲ್ಲಿ ಅಧಿಕಮಾಸದ ಪ್ರಯುಕ್ತ ಲೋಕಕಲ್ಯಾಣಕ್ಕಾಗಿ ವಿವಿಧ ಹೋಮ, ಹವನ ಮತ್ತು ಶ್ರೀನಿವಾಸ ಕಲ್ಯಾಣೋತ್ಸವ ಶನಿವಾರ ನೆರವೇರಿತು.
ಮುಂಜಾನೆಯಿಂದ ಪುಣ್ಯಾಹವಾಚನ, ಕಂಕಣ ಬಂಧನ, ಮಹಾ ಸಂಕಲ್ಪ, ದೇವತಾ ಕಲಶ ಸ್ಥಾಪನೆ, ಸುದರ್ಶನ ಹೋಮ, ನೃಸಿಂಹ ಹೋಮ, ನವಗ್ರಹ ಹೋಮ, ರಾಘವೇಂದ್ರ ಅಷ್ಟಾಕ್ಷರ ಮಂತ್ರ ಹೋಮ ನಡೆಯಿತು. 33 ತಿಂಗಳಿಗೊಮ್ಮೆ ಬರುವ ಅಧಿಕ ಮಾಸದ ಸಂಕೇತವಾಗಿ ಪುರೋಹಿತ ಅಶ್ವತ್ಥ ನಾರಾಯಣಾಚಾರ್ಯ ವಸಂತಾಚಾರ್ಯ ಜೋಶಿ ನೇತೃತ್ವದಲ್ಲಿ 33 ದಂಪತಿಗಳು, 33 ಯಜ್ಞ ಕುಂಡಗಳಲ್ಲಿ ಏಕಕಾಲದಲ್ಲಿ ಪವಮಾನ ಹೋಮ ನೆರವೇರಿಸಿದರು.
ಪೂರ್ಣಾಹುತಿ ನಂತರ ಉತ್ತರಾದಿಮಠದ ಆಡಳಿತಾಧಿಕಾರಿ ಮಧುಸೂದನಾಚಾರ್ಯ ಮತ್ತು ಸುಮುಖ್ ಜ್ಯೋಷಿ ಅವರಿಂದ ಅಧಿಕಮಾಸದ ಮತ್ತು ಪವಮಾನ ಹೋಮ ಪ್ರವಚನ ಜರುಗಿತು. ಭಕ್ತರಿಂದ ಸಾಮೂಹಿಕ ಭಜನೆ, ನಾಮ ಸಂಕೀರ್ತನೆ ನಡೆದವು.
ಹುಬ್ಬಳ್ಳಿಯ ವೇದಬ್ರಹ್ಮ ಆನಂದಾಚಾರ್ಯ ನೇತೃತ್ವದ ಋತ್ವಿಕರ ತಂಡದಿಂದ ಪೂಜಾ ಕೈಂಕರ್ಯಗಳು ನಡೆಯಿತು.