ಸಾಮಾಜಿಕ ಸಂವೇದನೆ ಸಾರುವ ಪವಿತ್ರ ಪರ್ವ

ಮುಸಲ್ಮಾನರು ಆಚರಿಸುವ ಎರಡು ಪ್ರಮುಖ ಹಬ್ಬಗಳಲ್ಲಿ ಈದ್-ಅಲ್-ಅಧಾ (ಬಕ್ರೀದ್) ಕೂಡ ಒಂದು. ಇದಕ್ಕೆ ತ್ಯಾಗದ ಹಬ್ಬ ಎಂದೂ ಅರ್ಥೈಸಲಾಗುತ್ತದೆ. ಹಲವು ಧಾರ್ವಿುಕ ವಿಧಿ-ವಿಧಾನಗಳನ್ನು ಒಳಗೊಂಡ ಈ ಹಬ್ಬದಲ್ಲಿ ಸಾಮಾಜಿಕ ಸಂವೇದನೆ ಅಡಗಿರುವುದು ವಿಶೇಷ. ‘ಅಲ್ಲಾಹ್’ನ ಪ್ರೀತಿಗೆ ಪಾತ್ರವಾದವರು ಪ್ರವಾದಿ ಇಬ್ರಾಹಿಂ. ಅವರಿಗೆ ಅಲ್ಲಾಹ್​ನಿಂದ ದೇವವಾಣಿ ಮೂಲಕ ‘ನೀವು ಅತಿಯಾಗಿ ಪ್ರೀತಿಸುವುದನ್ನು ನನಗೆ ಬಲಿದಾನ ಮಾಡಬೇಕು. ನನ್ನ ಆಜ್ಞೆ ಪಾಲಿಸಬೇಕು’ ಎಂದು ಹೇಳಲಾಯಿತು.

ಆಗ, ಇಬ್ರಾಹಿಂ ತಮ್ಮ ಬಳಿ ಇರುವ ಮೌಲ್ಯವುಳ್ಳ ವಸ್ತುವಿಗಿಂತ ಪ್ರಿಯವಾದ ಆಸ್ತಿ ಎಂದರೆ ತನ್ನ ಏಕೈಕ ಪುತ್ರ ಇಸ್ಮಾಯಿಲ್. ಆತನನ್ನೇ ಬಲಿದಾನ ಮಾಡಬೇಕು ಎಂದು ಚಿಂತನೆ ನಡೆಸುತ್ತಾರೆ. ಈ ವಿಚಾರವಾಗಿ ಸಂಕೋಚದಿಂದಲೇ ಮಗನ ಬಳಿ ಮಾತಿಗೆ ಇಳಿದಾಗ, ‘ಅಪ್ಪ ನೀವು ಆಲೋಚಿಸಬೇಡಿ. ದೇವವಾಣಿಯಂತೆ ನನ್ನನ್ನು ಅಲ್ಲಾಹ್​ನಿಗೆ ಅರ್ಪಿಸಿ. ನೀವು ಕೃತಜ್ಞತೆಗೊಳಗಾಗಿರಿ. ಯಾವುದೇ ಕಾರಣಕ್ಕೂ ಹೆದರಬೇಡಿ’ ಎಂದು ಧೈರ್ಯ ತುಂಬುತ್ತಾನೆ.

ಮಗನ ಮಾತಿನಿಂದ ಖುಷಿಯಾದ ಇಬ್ರಾಹಿಂ, ದೇವರ ಆಜ್ಞೆಗೆ ವಿಧೇಯರಾಗಿ ಪ್ರೀತಿಯ ಮಗನನ್ನು ಬಲಿ ನೀಡಲು ಸಿದ್ಧವಾಗುತ್ತಾರೆ. ಈ ವೇಳೆ, ಸೈತಾನ್ (ದೆವ್ವ) ಚುರುಕಾಗುತ್ತಾನೆ. ಇಬ್ರಾಹಿಂ ದೇವರ ಆಜ್ಞೆ ಪಾಲಿಸದಂತೆ ತಡೆಯಲು ಅದು ನಾನಾ ಕಸರತ್ತು ಆರಂಭಿಸುತ್ತದೆ. ಇಬ್ರಾಹಿಂ ಪತ್ನಿ ಮೇಲೆ ನಕಾರಾತ್ಮಕ ಪ್ರಭಾವ ಬೀರುತ್ತದೆ. ಧೃತಿಗೆಡದ ಇಬ್ರಾಹಿಂ ಬೆಣಚು ಕಲ್ಲುಗಳಿಂದ ಸೈತಾನ್​ನನ್ನು ಹೊಡೆದು ಓಡಿಸುತ್ತಾರೆ. ಇದೇ ಕಾರಣಕ್ಕೆ ಹಜ್ ಯಾತ್ರೆ ಕೈಗೊಂಡಾಗ ಮುಸಲ್ಮಾನರು, ಬೆಣಚು ಕಲ್ಲುಗಳಿಂದ ಪವಿತ್ರ ಮಕ್ಕಾದಲ್ಲಿರುವ ಸಾಂಕೇತಿಕ ಸೈತಾನ್ ಕಂಬಗಳ ಮೇಲೆ ಕಲ್ಲು ಎಸೆಯುತ್ತಾರೆ.

ಸಾಮಾಜಿಕ ನಿಂದನೆಗಳಿಗೆ ಕಿವಿಗೊಡದ ಇಬ್ರಾಹಿಂ ‘ನನಗೆ ದೇವರ ಆಜ್ಞೆಯೇ ಮುಖ್ಯ’ ಎಂದು ನಿರ್ಧರಿಸಿ ಪುತ್ರನ ಬಲಿದಾನಕ್ಕೆ ಸನ್ನದ್ಧರಾಗುತ್ತಾರೆ. ತಂದೆಯ ಸಂಕಟ-ತೊಳಲಾಟ ಕಂಡು ಮರುಗಿದ ಪುತ್ರ, ‘ನನ್ನ ಕುತ್ತಿಗೆಗೆ ಚೂರಿ ಹಾಕುವಾಗ ನಿಮ್ಮ ಮನಸ್ಸಿಗೆ ನೋವಾಗುತ್ತದೆ. ನಿಮ್ಮ ಕಣ್ಣುಗಳನ್ನು ಬಟ್ಟೆಯಿಂದ ಕಟ್ಟಿಕೊಳ್ಳಿರಿ’ ಎಂದು ವಿನಂತಿಸಿಕೊಳ್ಳುತ್ತಾನೆ. ಆಗ, ಇಬ್ರಾಹಿಂ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಮಗನ ಕುತ್ತಿಗೆ ಮೇಲೆ ಹರಿತವಾದ ಚೂರಿ ಹಾಕುತ್ತಾರೆ. ಆದರೆ, ಕುತ್ತಿಗೆ ಕೊಯ್ಯುವುದಿಲ್ಲ. ಇಬ್ರಾಹಿಂ ನಿಷ್ಠೆ ಮತ್ತು ಭಕ್ತಿಗೆ ಮೆಚ್ಚಿದ ಅಲ್ಲಾಹ್, ಇಸ್ಮಾಯಿಲ್​ನನ್ನು ಕಾಪಾಡುತ್ತಾನೆ. ಆಗ, ಗೊಂದಲಕ್ಕೆ ಒಳಗಾದ ಇಬ್ರಾಹಿಂ, ‘ದೇವರೇ ನನ್ನಿಂದ ಏನಾದರೂ ತಪ್ಪಾಗಿದ್ದರೆ ಕ್ಷಮಿಸಿ. ಮಗನ ಬಲಿದಾನ ಸ್ವೀಕರಿಸಿ’ ಎಂದು ಅಂಗಲಾಚುತ್ತಾರೆ.

ಆಗ, ಅಲ್ಲಾಹ್​ನಿಂದ, ‘ನಾನು ನಿನ್ನ ಬಲಿದಾನ ಸ್ವೀಕರಿಸಿದ್ದೇನೆ. ನಿನ್ನ ಭಕ್ತಿ ಮತ್ತು ತ್ಯಾಗಕ್ಕೆ ಮೆಚ್ಚಿದ್ದೇನೆ. ದೇವದೂತ ಜಿಬ್ರಾಯಿಲ್ ಮುಖಾಂತರ ಒಂದು ಸಾಕುಪ್ರಾಣಿ ಕಳುಹಿಸಿದ್ದೇನೆ. ಮಗನ ಬದಲಾಗಿ ಅದರ ಬಲಿದಾನ ನೀಡಬೇಕು. ಮಗನ ಬಲಿದಾನ ನಡೆಯುತ್ತಿದ್ದ ಸ್ಥಳದಲ್ಲೇ ಇದಾಗಬೇಕು’ ಎಂದು ಆಜ್ಞೆಯಾಗುತ್ತದೆ. ಆಗ, ಪ್ರಾಣಿಬಲಿ ನೀಡಲಾಗುತ್ತದೆ.

ದೇವರ ಆಜ್ಞೆ ಪಾಲನೆ ವಿಷಯದಲ್ಲಿ ಉತ್ತೀರ್ಣರಾದ ಇಬ್ರಾಹಿಂರ ವೈಯಕ್ತಿಕ ಬದುಕು ಮತ್ತು ತ್ಯಾಗವನ್ನು ಬಕ್ರೀದ್ ಹಬ್ಬದ ವೇಳೆ ಸ್ಮರಿಸಲಾಗುತ್ತದೆ. ಪವಿತ್ರ ‘ಕುರಾನ್’ ಗ್ರಂಥದಲ್ಲಿ ಇದಕ್ಕೆ ‘ಗಂಭೀರ ಹಬ್ಬ’ ಎಂದು ಉಲ್ಲೇಖಿಸಲಾಗಿದೆ.

ಬಕ್ರೀದ್ ವೇಳೆ ಪ್ರಾಣಿಬಲಿ ನೀಡುವ ಪದ್ಧತಿಗೆ ‘ಕುರ್ಬಾನ್’ ಅಥವಾ ‘ಕುರ್ಬಾನಿ’ ಎನ್ನಲಾಗುತ್ತದೆ. ಸಾವಿರಾರು ವರ್ಷಗಳ ಹಿಂದೆ ರೂಢಿಗೆ ಬಂದ ಈ ಪದ್ಧತಿಯನ್ನು ಮುಸಲ್ಮಾನರು ಇಂದಿಗೂ ಪಾಲಿಸುತ್ತ ಬಂದಿದ್ದಾರೆ.

ಈ ಘಟನೆ ನೆನಪಿಸುವುದಕ್ಕಾಗಿ ಹಬ್ಬದ ದಿನ ಸೂರ್ಯೋದಯವಾದ ಕೆಲಹೊತ್ತಿನ ನಂತರ, ಎಲ್ಲ ಈದ್ಗಾ ಮೈದಾನಗಳು ಹಾಗೂ ಮಸೀದಿಗಳಲ್ಲಿ ನಮಾಜ್ (ಸಾಮೂಹಿಕ ಪ್ರಾರ್ಥನೆ) ಮಾಡಲಾಗುತ್ತದೆ. ಧರ್ಮಗುರುಗಳು (ಇಮಾಮಸಾಬ್) ಬಕ್ರೀದ್​ನ ಒಟ್ಟಾರೆ ಸಾರಾಂಶ ಪರಿಚಯಿಸುತ್ತಾರೆ. ಪ್ರಾರ್ಥನೆ ನಂತರ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಾರೆ.

ಬಲಿದಾನ ಮಾಡಿದ ಪ್ರಾಣಿಯ ಮಾಂಸವನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಗುತ್ತದೆ. ಒಂದು ಭಾಗ ಕುಟುಂಬಸ್ಥರಿಗೆ, ಮತ್ತೊಂದು ಸಂಬಂಧಿಗಳು ಮತ್ತು ನೆರೆ-ಹೊರೆಯವರಿಗೆ ಮೀಸಲು. ಉಳಿದ ಭಾಗವನ್ನು ನಿರ್ಗತಿಕರು ಮತ್ತು ಬಡವರಿಗೆ ಹಂಚಲಾಗುತ್ತದೆ. ಇಸ್ಲಾಂ ಧರ್ಮದಲ್ಲಿ ಆರ್ಥಿಕವಾಗಿ ಸದೃಢವಾಗಿರುವ ಮುಸಲ್ಮಾನರು, ಕುರ್ಬಾನಿ ನೀಡುವುದು ಕಡ್ಡಾಯವಾಗಿದೆ. ತಮ್ಮ ಧಾರ್ವಿುಕ ಆಚರಣೆಗಳನ್ನು ಪಾಲಿಸಿದ ಸಂಭ್ರಮದ ಜತೆಗೆ, ಬಡವರು ಮತ್ತು ನಿರ್ಗತಿಕರ ಹಸಿವು ನೀಗಿಸಿದ ಸಂತೃಪ್ತಭಾವ ಇದರಿಂದ ದೊರೆಯುತ್ತದೆ. ‘ಹಸಿದವರಿಗೆ ಅನ್ನ ನೀಡಬೇಕು. ಎಲ್ಲರನ್ನೂ ಪ್ರೀತಿಯಿಂದ ಕಾಣಬೇಕು. ಕಷ್ಟದಲ್ಲಿರುವ ಬದುಕಿಗೆ ನೆರವಾಗಿ ಬದುಕಿನಲ್ಲಿ ಸಂತಸ ಕಾಣಬೇಕು’ ಎಂಬ ಸಂಗತಿ ಮನದಟ್ಟಾಗುತ್ತದೆ.

ಈ ನಂಬಿಕೆ, ಆಚರಣೆಗಳು ಸಾಮಾಜಿಕ ಒಳಿತಿಗಾಗಿ, ಮತ್ತೊಬ್ಬರಿಗೆ ನೆರವಾಗುವುದಕ್ಕಾಗಿ ಇರುತ್ತವೆ. ಯಾವುದೇ ಒಂದು ಧರ್ಮ ಇನ್ನೊಂದು ಧರ್ಮಕ್ಕೆ ಧಕ್ಕೆಯಾಗದಂತೆ ನಡೆದುಕೊಳ್ಳಬೇಕು ಎಂದು ಎಲ್ಲ ಧರ್ಮಗ್ರಂಥಗಳಲ್ಲೂ ತಿಳಿಸಲಾಗಿದೆ. ಪರೋಪಕಾರ, ಮಾನವೀಯತೆ ಮತ್ತು ದಯಾಪರತೆಗಳು ಪ್ರತಿ ಧರ್ಮಕ್ಕೆ ಜೀವಾಳವಿದ್ದಂತೆ. ಇವುಗಳನ್ನು ಅರ್ಥಪೂರ್ಣವಾಗಿ ಅರಿತು ಬದುಕಿನ ಹೆಜ್ಜೆ ಇಟ್ಟರೆ, ಧರ್ಮಸಂಘರ್ಷಗಳು ಉಂಟಾಗುವ ಪ್ರಸಂಗವೇ ಬರುವುದಿಲ್ಲ. ಬಹುಸಂಸ್ಕೃತಿಯ ಭಾರತದ ಹಿರಿಮೆ ಹೆಚ್ಚುತ್ತದೆ. ಸಂಕುಚಿತ ಮನೋಭಾವ, ದ್ವೇಷ, ಅಸೂಯೆ ಬದಿಗೊತ್ತಿ ಭಾರತವನ್ನು ಭಾವೈಕ್ಯತೆಯ ದೇಶವನ್ನಾಗಿ ರೂಪಿಸಬೇಕು. ಇದಕ್ಕಾಗಿ ಪ್ರತಿಜ್ಞೆ ಮಾಡೋಣ. ಎಲ್ಲರಿಗೂ ಈದ್ ಮುಬಾರಕ್.

ಹಜ್ ಯಾತ್ರೆ: ವಿಶ್ವದ ತುಂಬೆಲ್ಲ ಹರಡಿಕೊಂಡಿರುವ ಮುಸಲ್ಮಾನರು ಬಕ್ರೀದ್ ಹಬ್ಬದ ವೇಳೆ, ಹಜ್ ಯಾತ್ರೆ ಕೈಗೊಳ್ಳುತ್ತಾರೆ. ಪ್ರವಾದಿ ಮಹಮ್ಮದ್ ಪೈಗಂಬರರ ಕರ್ಮಭೂಮಿಯಾಗಿದ್ದ ಸೌದಿ ಅರೇಬಿಯಾ ದೇಶಗಳಲ್ಲಿರುವ ಮಕ್ಕಾ ಹಾಗೂ ಮದೀನಾ ದರ್ಶನ ಪಡೆದು, ಧಾರ್ವಿುಕ ವಿಧಿ-ವಿಧಾನ ಪೂರೈಸುತ್ತಾರೆ. ‘ಅಲ್ಲಾಹ್ ವೈಯಕ್ತಿಕ ಬದುಕಿನ ಜಂಜಾಟಗಳ ಮಧ್ಯೆ ನಾವು ಮಾಡಿರುವ ತಪ್ಪುಗಳನ್ನು ಮನ್ನಿಸು. ಯಾರಿಗೂ ಕೇಡು ಬಯಸದ ಹೃದಯ ನಮಗೆ ದಯಪಾಲಿಸು. ಆಸೆ-ಆಕಾಂಕ್ಷೆಗಳನ್ನು ಮಿತಿಗೊಳಿಸು. ನೀನು ಹಾಕಿಕೊಟ್ಟ ಸನ್ಮಾರ್ಗದಲ್ಲಿ ಸಾಗಲು ಮತ್ತೊಂದು ಅವಕಾಶ ನೀಡು’ ಎಂದು ಪ್ರಾರ್ಥಿಸುತ್ತಾರೆ. ತಾಯ್ನಾಡಿಗೆ ಮರಳಿದ ನಂತರ ಮನಃ ಪರಿವರ್ತನೆ ಮಾಡಿಕೊಂಡು, ಬದುಕಿನುದ್ದಕ್ಕೂ ಉತ್ತಮ ಮಾರ್ಗದಲ್ಲೇ ಸಾಗಲು ಪ್ರಯತ್ನಿಸುತ್ತಾರೆ. ಹಜ್ ಯಾತ್ರೆ ಪೂರೈಸಿ ಬಂದ ಮುಸಲ್ಮಾನರನ್ನು ಸರ್ವಧರ್ವಿುಯರು ಸತ್ಕರಿಸಿ ಭಾವೈಕ್ಯತೆಯ ಸಂದೇಶ ಸಾರುತ್ತಾರೆ. ಸಕಲ ಜೀವರಾಶಿಗೆ ಒಳ್ಳೇಯದಾಗಲೆಂದು ಪ್ರಾರ್ಥಿಸುತ್ತಾರೆ.

ಅಲ್ಲಾಹ್​ನಿಗೆ ವಿಧೇಯ

‘ಈದ್-ಅಲ್-ಅಧಾ’ ಹಬ್ಬದ ಒಟ್ಟಾರೆ ಆಶಯವೇ ‘ಅಲ್ಲಾಹ್’ನಿಗೆ ವಿಧೇಯನಾಗಿರಬೇಕು ಎಂಬುದನ್ನು ಸಾರುವುದು. ದೇವರು ನಮಗೆ ದಯಪಾಲಿಸಿದ ಅನ್ನವನ್ನು ಎಲ್ಲರಿಗೂ ಹಂಚಿ ತಿನ್ನುವುದು. ನಕಾರಾತ್ಮಕ ಆಲೋಚನೆಗಳಿಂದ ಹೊರಬಂದು, ಧಾರ್ವಿುಕ ಹಾದಿಯಲ್ಲಿ ಸಾಗುವುದು ಎಂಬುದಾಗಿದೆ. ಇವೆಲ್ಲ ಸಂಗತಿಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ‘ಬಕ್ರೀದ್’ ಆಚರಿಸಿದ್ದು ಸಾರ್ಥಕ.

ಸಂತ್ರಸ್ತರಿಗೆ ನೆರವಾಗೋಣ

ಮಾನವೀಯ ಅನುಕಂಪದ ಮೇರೆಗೆ ನಾವು ಸಹೋದರತ್ವ ಭಾವನೆ ಬೆಳೆಸಿಕೊಳ್ಳಬೇಕು ಎಂದು ಇಸ್ಲಾಂ ಧರ್ಮದಲ್ಲಿ ಹೇಳಲಾಗಿದೆ. ವಿಶ್ವವೇ ನಮ್ಮ ಕುಟುಂಬ ಎಂದು ಬೋಧಿಸಲಾಗಿದೆ. ಈಗ ಇಡೀ ಕರ್ನಾಟಕ ಪ್ರವಾಹಕ್ಕೆ ತತ್ತರಿಸಿದೆ. ನಮ್ಮ ಸಹೋದರರು ಸಾಲು ಸಾಲು ಸಂಕಷ್ಟಗಳಿಂದ ತತ್ತರಿಸಿದ್ದಾರೆ. ಹೀಗಿರುವಾಗ, ಬಕ್ರೀದ್ ಹಬ್ಬಕ್ಕೆ ದುಂದುವೆಚ್ಚ ಮಾಡುವುದು ಶೋಭೆ ತರುವುದಿಲ್ಲ. ಇದರ ಬದಲಾಗಿ, ವಿಧಿವತ್ತಾಗಿ ಎಲ್ಲ ಧಾರ್ವಿುಕ ಆಚರಣೆಗಳನ್ನು ಕೈಗೊಳ್ಳೋಣ. ‘ಅತಿವೃಷ್ಟಿಯಿಂದ ನಮ್ಮನ್ನು ಪಾರು ಮಾಡು. ಸಕಲ ಜೀವರಾಶಿಗೆ ಒಳ್ಳೆಯದನ್ನು ಮಾಡು’ ಎಂದು ಅಲ್ಲಾಹ್​ನಲ್ಲಿ ಭಕ್ತಿಯಿಂದ ಪ್ರಾರ್ಥಿಸೋಣ. ಹಬ್ಬಕ್ಕೆ ವ್ಯಯಿಸುತ್ತಿದ್ದ ಹಣ ಉಳಿತಾಯ ಮಾಡಿ, ಸಂತ್ರಸ್ತರಿಗೆ ನೀಡಿ ಮಾನವೀಯತೆ ಮೆರೆಯೋಣ.

| ಇಬ್ರಾಹಿಂ ಸುತಾರ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಕವಿ ಮತ್ತು ಪ್ರವಚನಕಾರ, ಮಹಾಲಿಂಗಪುರ

ಸಂಬಂಧಗಳ ವೃದ್ಧಿ

ಬದಲಾದ ಕಾಲಘಟ್ಟದಲ್ಲಿ ಸಂಬಂಧಗಳು ಅಧಃಪತನದತ್ತ ಸಾಗುತ್ತಿವೆ. ಹಣದ ಬೆನ್ನು ಹತ್ತುತ್ತಿರುವ ಮನುಷ್ಯ ನೈತಿಕತೆ, ಅನುಕಂಪ ಮತ್ತು ಸಹಾಯಹಸ್ತ ಚಾಚುವ ಗುಣ ಮರೆಯುತ್ತಿದ್ದಾನೆ. ಬದುಕು ವಿಭಿನ್ನ ಸ್ವರೂಪ ಪಡೆದು ಸೊರಗುತ್ತಿದೆ. ‘ಬಕ್ರೀದ್’ ಹಬ್ಬ ಇಂಥ ಸಂಕುಚಿತ ವಾತಾವರಣ ದೂರಗೊಳಿಸಿ ಸಂಬಂಧಗಳನ್ನು ವೃದ್ಧಿಸುತ್ತಿದೆ. ಆರ್ಥಿಕ ಸ್ಥಿತಿವಂತ ಮುಸಲ್ಮಾನರು ಬಕ್ರೀದ್ ವೇಳೆ, ‘ಕುರ್ಬಾನಿ’ ನೀಡುವುದು ಕಡ್ಡಾಯ. ಒಬ್ಬ ವ್ಯಕ್ತಿ ‘ಕುರ್ಬಾನಿ’ಗಾಗಿ ತನ್ನ ಹಣ ಖರ್ಚು ಮಾಡಿ, ಮತ್ತೊಬ್ಬರ ಹಸಿವು ನೀಗಿಸಿದಾಗ ದೊರೆಯುವ ಖುಷಿ ಅಪರಿಮಿತ. ಇದು ಮೇಲು-ಕೀಳು ಎನ್ನುವ ಮನೋಭಾವ ತೊಲಗಿಸುತ್ತದೆ. ಸಮಾಜದಲ್ಲಿರುವ ಪ್ರತಿಯೊಬ್ಬರನ್ನೂ ಗೌರವಿಸಬೇಕು. ಬಡವರ ಸಂಕಷ್ಟಕ್ಕೆ ಮಿಡಿಯಬೇಕು. ದಾನ-ಧರ್ಮಕ್ಕಿಂತ ಮಿಗಿಲಾದದ್ದು ಜಗತ್ತಿನಲ್ಲಿ ಬೇರೊಂದು ಸಂಗತಿಯಿಲ್ಲ ಎಂಬುದು ಮನದಟ್ಟಾಗುತ್ತದೆ. ಹಾಗಾಗಿ, ಧಾರ್ವಿುಕ ಮತ್ತು ಸಾಮಾಜಿಕ ಕಾರಣಗಳಿಂದಲೂ ಈ ಹಬ್ಬ ಮಹತ್ವ ಪಡೆದಿದೆ.

| ಮುಕ್ತಾರ್ ಇನಾಮಿ ಧರ್ಮಗುರುಗಳು, ಮದೀನಾ ಮಸೀದಿ, ಹಿರೇಬಾಗೇವಾಡಿ

ದಾನದ ಮಹತ್ವ

ಈ ಜಗತ್ತಿನಲ್ಲೇ ಎಲ್ಲಕ್ಕಿಂತ ಶ್ರೇಷ್ಠವಾದದ್ದು ಅನ್ನದಾನ. ಬಕ್ರೀದ್ ವೇಳೆ ಬಡವರಿಗೆ ಕುರ್ಬಾನಿ ನೀಡುವುದು ಉತ್ತಮ ಕೆಲಸವೇ. ಅಲ್ಲಾಹ್​ನ ಕೃಪೆಗೆ ಪಾತ್ರರಾಗುವುದಕ್ಕಾಗಿ ಒಂದು ದಿನ ಇಂಥ ಧಾರ್ವಿುಕ ಕೆಲಸ ಕೈಗೊಳ್ಳುವ ಮುಸಲ್ಮಾನರು, ದಾನದ ಮಹತ್ವ ಅರಿಯುತ್ತಾರೆ. ವರ್ಷದುದ್ದಕ್ಕೂ ಬಡವರ ಸಂಕಷ್ಟಕ್ಕೆ ಸಹಾಯಹಸ್ತ ಚಾಚುತ್ತಾರೆ. ಹಸಿವು ನೀಗಿಸುವ ಜತೆಗೆ, ‘ನಾವು ನಿಮ್ಮೊಂದಿಗೆ ಇದ್ದೇವೆ’ ಎಂದು ಬಡಜನರಲ್ಲಿ ಧೈರ್ಯ ತುಂಬುತ್ತಾರೆ. ನಾಡಿನ ಜನತೆಯ ಶ್ರೇಯಸ್ಸಿಗಾಗಿ ತುಂಬು ಮನಸ್ಸಿನಿಂದ ಸಾಮೂಹಿಕ ಪ್ರಾರ್ಥನೆ ಸಲ್ಲಿಸುತ್ತಾರೆ. ಇದೇ ಕಾರಣಕ್ಕೆ ಬಕ್ರೀದ್ ವಿಶಿಷ್ಟ ಹಬ್ಬ.

| ಸೈಯ್ಯದ್ ಅಲ್ಲಾವುದ್ದೀನ್ ಉರ್ಫ್ ಅಶ್ರಫ್ ಪೀರಾ ಖಾದ್ರಿ ಕಿರಿಯ ಪೀಠಾಧಿಪತಿ, ಹಜರತ್ ಗೌಸ್ ಷಾಹ್ ಖಾದ್ರಿ ದರ್ಗಾ, ಹಿರೇಬಾಗೇವಾಡಿ

Leave a Reply

Your email address will not be published. Required fields are marked *