ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಬೆಂಗಳೂರಿನಲ್ಲಿ ಮೊದಲ ಹಂತದ ಚಿತ್ರೀಕರಣ ಪೂರ್ಣಗೊಳಿಸಿರುವ “ಟಾಕ್ಸಿಕ್’ ಚಿತ್ರತಂಡ ಸೋಮವಾರದಿಂದ (ನ. 4) ಮುಂಬೈನಲ್ಲಿ ಎರಡನೇ ಹಂತದ ಶೂಟಿಂಗ್ ಪ್ರಾರಂಭಿಸಿದೆ. ಮಾಲಿವುಡ್ ನಿರ್ದೇಶಕಿ ಗೀತು ಮೋಹನ್ದಾಸ್ ಆ್ಯಕ್ಷನ್- ಕಟ್ ಹೇಳುತ್ತಿರುವ, ಕನ್ನಡದ ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್ನಲ್ಲಿ ವೆಂಕಟ್ ಕೆ. ನಾರಾಯಣ್ ನಿರ್ಮಿಸುತ್ತಿರುವ ಪ್ಯಾನ್ ವರ್ಲ್ಡ್ ಚಿತ್ರ “ಟಾಕ್ಸಿಕ್’. 1970ರ ದಶಕದ ಅಂಡರ್ವರ್ಲ್ಡ್ ಮಾಫಿಯಾ ಸುತ್ತ ಸಾಗುವ “ಟಾಕ್ಸಿಕ್’ ಚಿತ್ರದಲ್ಲಿ ಸಾಹಸ ಸನ್ನಿವೇಶಗಳಿಗೆ ಹೆಚ್ಚು ಪ್ರಾಮುಖ್ಯ ನೀಡಲಾಗುತ್ತಿದೆ. ಹೀಗಾಗಿಯೇ 100ಕ್ಕೂ ಅಧಿಕ ಹಾಲಿವುಡ್ ಸಿನಿಮಾಗಳಿಗೆ ಸಾಹಸ ಸಂಯೋಜನೆ ಮಾಡಿರುವ ಹೆಸರಾಂತ ಆ್ಯಕ್ಷನ್ ಡೈರೆಕ್ಟರ್ ಜೆ.ಜೆ. ಪೆರ್ರಿ ಇದೀಗ “ಟಾಕ್ಸಿಕ್’ ಟೀಮ್ ಸೇರಿಕೊಂಡಿದ್ದಾರೆ. ಶನಿವಾರ (ನ. 9) ಪೆರ್ರಿ ಮುಂಬೈಗೆ ಬಂದಿಳಿದಿದ್ದು, ನಾಳೆಯಿಂದ ಸಾಹಸ ಸನ್ನಿವೇಶಗಳ ಚಿತ್ರೀಕರಣದಲ್ಲಿ ತೊಡಗಲಿದ್ದಾರೆ ಎನ್ನಲಾಗಿದೆ. ಪೆರ್ರಿ ಇದೇ ಮೊದಲ ಬಾರಿಗೆ ಭಾರತೀಯ ಸಿನಿಮಾದಲ್ಲಿ ಕೆಲಸ ಮಾಡುತ್ತಿರುವ ಖುಷಿಯಲ್ಲಿದ್ದಾರೆ. ಮುಂಬೈನ ಸ್ಟುಡಿಯೋದಲ್ಲಿ ಆ್ಯಕ್ಷನ್ ಸನ್ನಿವೇಶಗಳಿಗೆಂದೇ ಬೃಹತ್ ಸೆಟ್ಗಳನ್ನು ನಿರ್ಮಿಸಲಾಗಿದ್ದು, 25ರಿಂದ 30 ದಿನಗಳ ಕಾಲ ಶೂಟಿಂಗ್ ನಡೆಸಲು ಚಿತ್ರತಂಡ ಪ್ಲಾ$್ಯನ್ ಮಾಡಿಕೊಂಡಿದೆ. ಇನ್ನು ಮೋಹನ್ ಬಿ. ಕೆರೆ ಸ್ಟುಡಿಯೋದಲ್ಲಿ ಸುಮಾರು 20 ಎಕರೆ ಜಾಗದಲ್ಲಿ 40 ಕೋಟಿ ರೂ. ಬಜೆಟ್ನಲ್ಲಿ ಲಂಡನ್ ನಗರದ ಬೃಹತ್ ಸೆಟ್ಗಳನ್ನು ನಿರ್ಮಿಸಲಾಗುತ್ತಿದ್ದು, ಫೆಬ್ರವರಿಯಲ್ಲಿ ಮೂರನೇ ಹಂತದ ಚಿತ್ರೀಕರಣ ನಡೆಸಲು “ಟಾಕ್ಸಿಕ್’ ಟೀಮ್ ಯೋಜನೆ ರೂಪಿಸಿಕೊಂಡಿದೆ.
ಯಾರು ಜೆ.ಜೆ. ಪೆರ್ರಿ?
ಹಾಲಿವುಡ್ ಆ್ಯಕ್ಷನ್ ಸಿನಿಮಾಗಳಲ್ಲಿ ಜೆ.ಜೆ. ಪೆರ್ರಿ ಅತಿ ದೊಡ್ಡ ಹೆಸರು. “ಐರನ್ ಹಾರ್ಟ್’, “ಮೋರ್ಟಲ್ ಕಾಂಬ್ಯಾಟ್ ಅನ್ನಿಹಿಲೇಷನ್’, “ಬ್ಲೇಡ್’, “ಡೇರ್ಡೆವಿಲ್’, “ದ ರನ್ಡೌನ್’, “ಬ್ಯೂವೂಲ್ಫ್’, “ಐರನ್ಮ್ಯಾನ್’, “ಎಕ್ಸ್ಮೆನ್: ಆರಿಜಿನ್ಸ್’, “ವಾರಿಯರ್’, “ಸೇಫ್’, “ದ ಎಕ್ಸ್ಪೆಂಡೆಬಲ್ಸ್ 3′, “ಎಫ್9′, “ಅವತಾರ್ : ದ ವೇ ಆಫ್ ವಾಟರ್’ ಸೇರಿ ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ಸಾಹಸ ನಿರ್ದೇಶಕನಾಗಿ ಕೆಲಸ ಮಾಡಿದ್ದಾರೆ. 20 ಹಾಲಿವುಡ್ ಸಿನಿಮಾಗಳಲ್ಲಿ ನಟಿಸಿರುವ ಅವರು “ಡೇ ಶಿಫ್ಟ್’, “ದ ಕಿಲ್ಲರ್ಸ್ ಗೇಮ್’ ಚಿತ್ರಗಳಿಗೆ ಆ್ಯಕ್ಷನ್- ಕಟ್ ಹೇಳಿದ್ದಾರೆ. ಸಣ್ಣ ವಯಸ್ಸಿನಿಂದಲೂ ಟೆಕ್ವಾಂಡೋ ಕಲಿಯುತ್ತಿದ್ದ ಪೆರ್ರಿ ಹಲವು ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳನ್ನು ಗೆದ್ದಿದ್ದಾರೆ. ಕ್ರಮೇಣ ಹಾಲಿವುಡ್ನತ್ತ ಮುಖ ಮಾಡಿದ ಅವರು, ಸ್ಟೀವ್ ಸೀಗಲ್, ಡ್ವೇಯ್ನ್ ಜಾನ್ಸನ್, ಜೆಟ್ ಲೀ, ವೆಸ್ಲಿ ಸ್ನೈಪ್ಸ್, ಜೇಸನ್ ಸ್ಟಥಾಮ್, ಬೆನ್ ಅಫ್ಲೆಕ್, ಜಾನ್ ಟ್ರವೊಲ್ಟಾ, ಕಿಯಾನು ರೀವ್ಸ್, ರಾರ್ಬಟ್ ಡೌನಿ ಜೂನಿಯರ್, ಮೈಕಲ್ ಜೈ ವೈಟ್, ಸಿಲ್ವೆಸ್ಟರ್ ಸ್ಟಲ್ಲೋನ್, ಅರ್ನಾಲ್ಡ್ ಶ್ವಾರ್ಜನೆಗರ್, ವಿನ್ ಡೀಸಲ್, ವಿಲ್ ಸ್ಮಿತ್ ಸೇರಿ ಹಲವು ಹಾಲಿವುಡ್ ಸ್ಟಾರ್ಗಳ ಜತೆ ಕೆಲಸ ಮಾಡಿದ್ದಾರೆ.
ಎರಡು ವರ್ಷಗಳ ತಯಾರಿ
“ಟಾಕ್ಸಿಕ್’ ಚಿತ್ರಕ್ಕಾಗಿ ನಟ ಯಶ್ ಎರಡು ವರ್ಷಗಳ ತಯಾರಿ ನಡೆಸಿದ್ದಾರೆ. 2022ರಲ್ಲಿ ಯಶ್, ಅಮೆರಿಕದಲ್ಲಿ ಜೆ.ಜೆ.ಪೆರ್ರಿ ಬಳಿ ಶೂಟಿಂಗ್ ತರಬೇತಿ ಪಡೆದಿದ್ದರು. ಅದೇ ವರ್ಷ ಸೆ. 29ರಂದು ಪೆರ್ರಿ ಜತೆ ಶೂಟಿಂಗ್ ಟ್ರೇನಿಂಗ್ ನಡೆಸುತ್ತಿರುವ ವಿಡಿಯೋ ಕೂಡ ಯಶ್ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ನಂತರ 2023ರ ಸೆಪ್ಟೆಂಬರ್ನಲ್ಲಿ ಯಶ್ ಮತ್ತು ಪೆರ್ರಿ ಲಂಡನ್ನಲ್ಲಿ ಭೇಟಿಯಾಗಿದ್ದರು. ಇದೀಗ ಯಶ್ ಮತ್ತು ಪೆರ್ರಿ “ಟಾಕ್ಸಿಕ್’ ಶೂಟಿಂಗ್ನಲ್ಲಿ ಮತ್ತೆ ಒಂದಾಗುತ್ತಿದ್ದಾರೆ.
ಯಶ್ ಒಬ್ಬ ಉತ್ತಮ ನಟ ಮಾತ್ರವಲ್ಲ ಅದ್ಭುತವಾಗಿ ಆ್ಯಕ್ಷನ್ ಕೂಡ ಮಾಡುತ್ತಾರೆ. ಅತ್ಯಂತ ಸರಳ ಮತ್ತು ಉದಾರ ಮನಸ್ಸಿನ ವ್ಯಕ್ತಿ. ಇಬ್ಬರೂ ಸೇರಿ ಅದ್ಭುತ ಆ್ಯಕ್ಷನ್ ಸನ್ನಿವೇಶಗಳನ್ನು ಸೃಷ್ಟಿಸಲು ಪ್ರಯತ್ನಿಸಲಿದ್ದೇವೆ. ಅದ್ಭುತ ಭಾರತೀಯ ಪ್ರತಿಭೆಗಳ ಜತೆ ಕೆಲಸ ಮಾಡುತ್ತಿರುವ ಖುಷಿಯಿದೆ. “ಟಾಕ್ಸಿಕ್’ ಬಗ್ಗೆ ನಾನಂತೂ ತುಂಬ ಎಕ್ಸೈಟ್ ಆಗಿದ್ದೇನೆ.
-ಜೆ.ಜೆ. ಪೆರ್ರಿ, ಸಾಹಸ ನಿರ್ದೇಶಕ