ಹೋಳಿ ಹಬ್ಬದಲ್ಲಿ ಸೌಹಾರ್ದ ಕಾಪಾಡಿ

ದಾವಣಗೆರೆ: ಜಿಲ್ಲೆಯಲ್ಲಿ ಮಾ.20ರಂದು ಕಾಮದಹನ, 21ರಂದು ಹೋಳಿ ಹಬ್ಬವನ್ನು ಸೌಹಾರ್ದವಾಗಿ ಆಚರಿಸಬೇಕು. ಎಲ್ಲೆ ಮೀರಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ಆರ್.ಚೇತನ್ ಎಚ್ಚರಿಸಿದ್ದಾರೆ.

ಹೋಳಿ ಹಬ್ಬದ ನಿಮಿತ್ತ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಭಾನುವಾರ ಕರೆದಿದ್ದ ನಾಗರಿಕ ಸೌಹಾರ್ದ ಸಭೆಯಲ್ಲಿ ಮಾತನಾಡಿ, ಪರೀಕ್ಷೆ ಬರೆಯಲು ತೆರಳುವ ವಿದ್ಯಾರ್ಥಿಗಳ ಮೇಲೆ, ಅಪರಿಚಿತರ ಮೇಲೆ ಬಣ್ಣ ಎರಚಕೂಡದು ಎಂದು ತಿಳಿಸಿದರು.

ಬೈಕ್ ವ್ಹೀಲಿಂಗ್ ಮಾಡುವುದು, ಸೈಲೆನ್ಸರ್ ತೆಗೆದು ಮತ್ತು ಅರೆಬೆತ್ತಲೆಯಾಗಿ ವಾಹನ ಚಲಾಯಿಸುವುದು ಮತ್ತಿತರೆ ವಿಕೃತಿ ಮೆರೆದಲ್ಲಿ ಕ್ರಮ ಜರುಗಿಸಲಾಗುತ್ತಿದೆ ಎಂದು ಎಚ್ಚರಿಸಿದರು.

ಎಸ್ಸೆಸ್ಸೆಲ್ಸಿ ಪರೀಕ್ಷೆ ದಿನವೇ ನಿಗದಿಯಾದ ಹಬ್ಬವನ್ನು ಒಂದು ದಿನ ಮುಂದೂಡಬೇಕೆಂದು ಸಲಹೆ ಕೇಳಿ ಬಂತು. ನೀತಿ ಸಂಹಿತೆ ಜಾರಿಯಲ್ಲಿದೆ. ಇದಕ್ಕೆ ಚುನಾವಣಾಧಿಕಾರಿಗಳ ಅನುಮತಿ ಪಡೆಯಬೇಕು. ಅಲ್ಲದೆ ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ, ಜಗಳೂರಿನ ಚೌಡಮ್ಮ ಹಾಗೂ ಕೊಡದಗುಡ್ಡ ವೀರಭದ್ರೇಶ್ವರ ಜಾತ್ರೆಗೆ ಮುಂಜಾಗ್ರತಾ ಕ್ರಮವಾಗಿ ಸಿಬ್ಬಂದಿ ನಿಯೋಜಿಸಲಾಗುತ್ತಿದೆ. ಹಾಗಾಗಿ ನಿಗದಿತ ದಿನವೇ ಹಬ್ಬ ಆಚರಿಸೋಣ ಎಂದು ಎಸ್ಪಿ ತಿಳಿಸಿದರು.

ಹಬ್ಬದ ಹಿನ್ನೆಲೆಯಲ್ಲಿ ವಿದ್ಯುತ್ ಮಾರ್ಗದ ಎಚ್ಚರಿಕೆ ಕ್ರಮ, ನೀರಿನ ಸಂಪನ್ಮೂಲ ರಕ್ಷಣೆಗಾಗಿ ಸಂಬಂಧಿತ ಅಧಿಕಾರಿಗಳಿಗೆ ತಿಳಿಸಲಾಗುವುದು ಎಂದು ಹೇಳಿದರು.

ಮುಖಂಡ ಕೆ.ಬಿ.ಶಂಕರನಾರಾಯಣ ಮಾತನಾಡಿ, ರಾಸಾಯನಿಕ ಬಣ್ಣ ಬಳಸಿ ಪರಿಸರ ಹಾಗೂ ಆರೋಗ್ಯಕ್ಕೆ ಹಾನಿ ತರುವ, ತಲೆಗೆ ಮೊಟ್ಟೆ ಒಡೆಯುವ ವಿಚಿತ್ರ ವರ್ತನೆಗಳನ್ನು ತಡೆಯಬೇಕು. ಪರೀಕ್ಷೆ ಕಾರಣಕ್ಕೆ ಒಂದು ದಿನ ಆಚರಣೆ ಮುಂದೂಡಬೇಕು ಎಂದು ಮನವಿ ಮಾಡಿದರು.

ಜೆ.ಅಮಾನುಲ್ಲಾಖಾನ್ ಮಾತನಾಡಿ, ಕೆಲವು ಹಬ್ಬಗಳು ಭಯದ ವಾತಾವರಣ ಸೃಷ್ಟಿಸುತ್ತಿವೆ. ಮಾನವೀಯತೆ ಇರಬೇಕು. ಸಭೆಗೆ ಪರಿಸರ ಮಾಲಿನ್ಯ ನಿಯಂತ್ರಣೆ ಹಾಗೂ ಪಾಲಿಕೆ ಅಧಿಕಾರಿಗಳನ್ನು ಕರೆಸಬೇಕಿತ್ತು ಎಂದು ಅನಿಸಿಕೆ ವ್ಯಕ್ತಪಡಿಸಿದರು.

ಎ.ನಾಗರಾಜ್ ಮಾತನಾಡಿ, ರಾಜಕೀಯ ಬೆರೆಸದೆ ಶಾಂತಿಯುತ ಹಬ್ಬ ಆಚರಿಸಬೇಕು ಎಂದರು. ಕೆಲವೆಡೆ ಅಪಾಯಕಾರಿ ಬೈಕ್ ವ್ಹೀಲಿಂಗ್‌ನಿಂದ ಜೀವ ಕಳೆದುಕೊಂಡಿದ್ದು, ಇದನ್ನು ತಡೆಯಬೇಕು ಎಂದು ಆವರಗೆರೆ ಚಂದ್ರು ಸಲಹೆ ನೀಡಿದರು.

ಎಎಸ್ಪಿ ಟಿ.ಜೆ.ಉದೇಶ್, ಸನಗರ ಡಿವೈಎಸ್ಪಿ ನಾಗರಾಜ್ ಹಾಗೂ ಮುಖಂಡರಿದ್ದರು.