ತಾಳಕಟ್ಟದಲ್ಲಿ ಕರಿಯಮ್ಮ ದೇವಿ ಅದ್ದೂರಿ ಸಿಡಿ ಉತ್ಸವ

ಹೊಳಲ್ಕೆರೆ: ತಾಲೂಕಿನ ತಾಳಕಟ್ಟ ಗ್ರಾಮದಲ್ಲಿ ಕರಿಯಮ್ಮ ದೇವಿ ಸಿಡಿ ಉತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿತು.

2 ಗಂಟೆಗಳ ಕಾಲ ನಿರಂತರವಾಗಿ ಸಿಡಿ ಉತ್ಸವ ಜರುಗಿತು. ಬಿಸಿಲಲ್ಲೂ ಭಕ್ತರ ಉತ್ಸಾಹ ಕುಂದಲಿಲ್ಲ.

ಸಂಪ್ರದಾಯದಂತೆ ದೇವಿ ಸೂಚಿಸುವ ವ್ಯಕ್ತಿಯನ್ನು ಸಿಡಿ ಮರಕ್ಕೆ ಕಟ್ಟಿ ಉತ್ಸವ ನೆರವೇರಿಸಲಾಗುತ್ತಿದೆ. ಇದರಂತೆ ಈ ಬಾರಿ ದೇವಿಯು ಪಾಪಣ್ಣ ಎಂಬುವರನ್ನು ಸೂಚಿಸಿದ್ದು, ಆತನನ್ನೇ ಸಿಡಿ ಮರಕ್ಕೆ ಕಟ್ಟಲಾಗಿತ್ತು. ಸಿಡಿ ನಡೆಯುವ ಸಂದರ್ಭದಲ್ಲಿ ಗ್ರಾಮ ದೇವರುಗಳಾದ ಶ್ರೀ ಕರಿಯಮ್ಮ, ಮಹಾತಂಗೆಮ್ಮ, ಚಿಕ್ಕಮ್ಮ ದೇವಿ ಹಾಗೂ ಆಂಜನೇಯ ಸ್ವಾಮಿ ಪಲ್ಲಕ್ಕಿ ಉತ್ಸವ ಜರುಗಿತು.

ಚಿಕ್ಕ ಚಿಕ್ಕ ಮಕ್ಕಳನ್ನು ಸಿಡಿಗೆ ಕಟ್ಟಲಾಗಿದ್ದ ವ್ಯಕ್ತಿಗೆ ಮುಟ್ಟಿಸುವ ಮೂಲಕ ಭಕ್ತರು ಹರಕೆ ತೀರಿಸಿದರು. ಇನ್ನೂ ಕೆಲವರು ಬಾಳೆಹಣ್ಣುಗಳನ್ನು ಸಿಡಿ ಕಂಬಕ್ಕೆ ತೂರಿ ಭಕ್ತಿ ಸಮರ್ಪಿಸಿದರು. ಭಕ್ತರ ಸಂಖ್ಯೆ ಹೆಚ್ಚಾಗಿದ್ದ ಕಾರಣ ಕೆಲ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು.

ಜಾತ್ರೆಯಲ್ಲಿ ಖಾರ-ಮಂಡಕ್ಕಿ, ಬೆಂಡು-ಬತ್ತಾಸು, ಜಿಲೇಬಿ, ಮೈಸೂರ್ ಪಾಕ್ ಮತ್ತಿತರ ತಿನಿಸುಗಳ ವ್ಯಾಪಾರ ಜೋರಾಗಿತ್ತು. ಮಹಿಳೆಯರು ವಾಲೆ, ಜುಮುಕಿ, ಬಳೆ ಮತ್ತು ಅಲಂಕಾರಿಕ ವಸ್ತುಗಳ ಖರೀದಿಗೆ , ಮಕ್ಕಳು ಬಾಲ್, ಗೊಂಬೆ, ಪೀಪಿ ಇತರ ಆಟಿಕೆಗಳನ್ನು ಕೊಡಿಸಿಕೊಳ್ಳಲು ಮುಗಿಬಿದಿದ್ದರು. ಬಿಸಿಲು ಹೆಚ್ಚಾಗಿದ್ದ ಕಾರಣ ಐಸ್ ಕ್ರೀಮ್, ಕಲ್ಲಂಗಡಿ ಹಣ್ಣಿನ ವ್ಯಾಪಾರ ಜೋರಾಗಿತ್ತು.

ಯುವಕರ ಪಡೆ ಭಕ್ತರಿಗೆ ಅನ್ನ ದಾಸೋಹ ಸೇವೆ ನೀಡಿ ಭಕ್ತಿ ಸಮರ್ಪಿಸಿತು.