ಹೊಳಲ್ಕೆರೆ: ದೇಶದ ಪ್ರಗತಿಗೆ ಯುವ ಪೀಳಿಗೆ ರಾಜಕೀಯದ ಮೂಲಕ ಸಂಸತ್ ಪ್ರವೇಶಿಸುವ ಅಗತ್ಯವಿದೆ ಎಂದು ವಕೀಲರ ಎಸ್.ವೇದಮೂರ್ತಿ ತಿಳಿಸಿದರು.
ನೆಹರು ಯುವ ಕೇಂದ್ರ ಚಿತ್ರದುರ್ಗ, ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ರಾಜ್ಯ ಯುವ ಸಂಘಗಳ ಒಕ್ಕೂಟ, ಶ್ರೀ ವಿನಾಯಕ ಯುವ ಸಂಘದಿಂದ ತಾಲೂಕಿನ ದೇವರಾಜ ಅರಸು ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಆಯೋಜಿಸಿದ್ದ ನೆರಹೊರೆ ಯುವ ಸಂಸತ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿಶ್ವ ಮಾನ್ಯತೆ ಪಡೆದ ನಮ್ಮ ಸಂವಿಧಾನದಲ್ಲಿ ಸಮಾನತೆ, ಸಹೋದರತೆ, ಮಾನವೀಯ ಮೌಲ್ಯಗಳು ಅಡಕವಾಗಿವೆ. ದೇಶದ ಪ್ರಜೆಗಳಿಗೆ ಸಂವಿಧಾನ ಹಕ್ಕು ಹಾಗೂ ಕರ್ತವ್ಯಗಳನ್ನು ನೀಡುವ ಜತೆ ಜಾತ್ಯತೀತ ಭಾವನೆ ಮಾನ್ಯತೆ ನೀಡುವ ದೃಢ ಸಂಕಲ್ಪ ಹೊಂದಿದೆ ಎಂದು ತಿಳಿಸಿದರು.
ಪ್ರಜಾಪ್ರಭುತ್ವ ಮೌಲ್ಯಗಳನ್ನು ರಕ್ಷಿಸಲು ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಕಾರ್ಯ ನಿರ್ವಹಿಸುತ್ತಿವೆ. ಯುವ ಪೀಳಿಗೆ ದೇಶದ ಶಕ್ತಿಯಾಗಿ ರೂಪುಗೊಳ್ಳಲು ಸಂವಿಧಾನದ ಸಂದೇಶ ದಾರಿದೀಪವಾಗಿದೆ ಎಂದರು.
ದೇಶ ಲೋಕಸಭೆ ಚುನಾವಣೆ ಹೊಸ್ತಿಲಲ್ಲಿದೆ. ಪ್ರತಿಯೊಬ್ಬ ಅರ್ಹ ಮತದಾರರು ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವವನ್ನು ಬಲಗೊಳಿಸಬೇಕು. ಮತದಾನದ ಅವಕಾಶವನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಎ. ಚಿತ್ತಪ್ಪ ಮಾತನಾಡಿ, ಯುವಕರು ದೇಶದ ರಾಜಕೀಯ ವಿದ್ಯಮಾನಗಳ ಚಿಂತನೆ ನಡೆಸಬೇಕು. ಸಾಮಾಜಿಕ ಶೋಷಣೆ ವಿರುದ್ಧ ಹೋರಾಟ ನಡೆಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ವ್ಯಸನಕ್ಕೆ ಬಲಿಯಾಗಿ ಯುವಶಕ್ತಿ ವ್ಯಯವಾಗಬಾರದು. ಸಾಮಾಜಿಕ ಹೊಣೆಗಾರಿಕೆಗಾಗಿ ರಾಜಕೀಯ ಕ್ಷೇತ್ರ ಪ್ರವೇಶಿಸಬೇಕು. ಸೂಕ್ತ ಅಧ್ಯಯನ ನಡೆಸಿ ರಾಜಕೀಯ ಶುದ್ಧೀಕರಣಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಆನಂದ್ ಮಾತನಾಡಿ, ಪ್ರತಿಯೊಬ್ಬರೂ ದೇಶಭಕ್ತಿ ಬೆಳೆಸಿಕೊಳ್ಳಬೇಕು. ಸ್ವಾರ್ಥರಹಿತರಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಉಪನ್ಯಾಸಕ ರಂಗಸ್ವಾಮಿ, ವೆಂಕಟೇಶ್ನಾಯ್ಕ, ಶಿವಕುಮಾರ್, ಶಿಕ್ಷಕ ವೆಂಕಟೇಶ್ ಇದ್ದರು.