ಕೋರ್ಸ್ ಆಯ್ಕೆ ನಿಮಗಿಷ್ಟದ್ದಾಗಿರಲಿ: ವಿದ್ಯಾರ್ಥಿಗಳಿಗೆ ಜಿಲ್ಲಾ ಶಿಕ್ಷಣ ಸಂಯೋಜಕ ನರಸಿಂಹಪ್ಪ

ಹೊಳಲ್ಕೆರೆ: ಎಸ್ಸೆಸ್ಸೆಲ್ಸಿ ನಂತರ ಸ್ನೇಹಿತರ, ಪಾಲಕರ ಒತ್ತಡಕ್ಕೆ ಮಣಿಯದೆ ನಿಮಗಿಷ್ಟದ ಕೋರ್ಸ್ ಆಯ್ದುಕೊಂಡು ಅಧ್ಯಯನ ಮಾಡಬೇಕು ಎಂದು ಜಿಲ್ಲಾ ಶಿಕ್ಷಣ ಸಂಯೋಜಕ ನರಸಿಂಹಪ್ಪ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಜಿಲ್ಲಾಡಳಿತ ಹಾಗೂ ಶಿಕ್ಷಣ ಇಲಾಖೆ ವತಿಯಿಂದ ಪಟ್ಟಣದ ಎಂ.ಎಂ. ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಎಸ್ಸೆಸ್ಸೆಲ್ಸಿ ನಂತರ ಮುಂದೇನು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕಳೆದ ವರ್ಷ 16ನೇ ಸ್ಥಾನದಲ್ಲಿದ್ದ ಚಿತ್ರದುರ್ಗದ ಫಲಿತಾಂಶ ಈ ಬಾರಿ 6ನೇ ಸ್ಥಾನ ಜಿಗಿದಿದೆ. ಇದಕ್ಕೆ ವಿದ್ಯಾರ್ಥಿಗಳು, ಶಿಕ್ಷಕರ ಪರಿಶ್ರಮ ಹಾಗೂ ಪಾಲಕರ ಸಹಕಾರ ಕಾರಣ ಎಂದರು.

ಸಂಪನ್ಮೂಲ ವ್ಯಕ್ತಿ ಮಂಜುನಾಥ್ ಮಾತನಾಡಿ, ಎಸ್ಸೆಸ್ಸೆಲ್ಸಿ ಮೊದಲನೇ ಹಂತ ಮುಗಿದಿದೆ. ನಂತರದ ಶಿಕ್ಷಣ ವಿಭಿನ್ನ ರೀತಿಯಲ್ಲಿರುತ್ತದೆ. ಇದಕ್ಕೆ ಈಗಿಂದಲೇ ಅಣಿಯಾಗಬೇಕು. ಓದಲು ಹಲವಾರು ವಿಭಾಗಗಳಿವೆ. ಅವುಗಳಲ್ಲಿ ಯಾವುದರಲ್ಲಿ ಆಸಕ್ತಿ ಇದೆ ಎಂಬುದನ್ನು ಆಯ್ದುಕೊಳ್ಳಬೇಕು ಎಂದು ತಿಳಿಸಿದರು.

ಮುಖ್ಯ ಶಿಕ್ಷಕರಾದ ಮಲ್ಲೇಶಪ್ಪ, ನಿರ್ಮಲಾ, ಶಿವಪ್ಪ, ರಾಜಪ್ಪ, ವಿಜ್ಞಾನ ವಿಭಾಗದ ಸಂಯೋಜಕ ಗೋವಿಂದಪ್ಪ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *