ವಿಶೇಷ ದಾಖಲಾತಿ ಆಂದೋಲನ

ಹೊಳಲ್ಕೆರೆ: ಮೇ 20ರಿಂದ 31ರ ವರೆಗೆ ವಿಶೇಷ ದಾಖಲಾತಿ ಆಂದೋಲನ, ಜೂನ್ 1ರಿಂದ 30ರ ವರೆಗೆ ಸಾಮಾನ್ಯ ದಾಖಲಾತಿ ಆಂದೋಲನವನ್ನು ತಾಲೂಕಿನ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಹಮ್ಮಿಕೊಳ್ಳುವುದು ಕಡ್ಡಾಯ ಎಂದು ಕ್ಷೇತ್ರ ಸಮನ್ವಯಾಧಿಕಾರಿ ಟಿ.ದಿನೇಶ ತಿಳಿಸಿದರು.
ಪಟ್ಟಣದ ಬಿಆರ್‌ಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ 2019-20ನೇ ಸಾಲಿನ ವಿಶೇಷ ಹಾಗೂ ಸಾಮಾನ್ಯ ದಾಖಲಾತಿ ಆಂದೋಲನ ಕುರಿತ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಆಂದೋಲನದ ಫ್ಲೆಕ್ಸ್‌ನೊಂದಿಗೆ ಮುಖ್ಯ ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಮಹಿಳಾ ಸಂಘಗಳು, ಗ್ರಾಮಸ್ಥರು, ವಿದ್ಯಾರ್ಥಿಗಳೊಂದಿಗೆ ಜನವಸತಿ ಪ್ರದೇಶದಲ್ಲಿ ಜಾಥಾ ನಡೆಸಬೇಕು. ಸರ್ಕಾರಿ ಶಾಲೆಯಲ್ಲಿ ಶಿಕ್ಷಣ, ಪಠ್ಯಪುಸ್ತಕ, ಸಮವಸ್ತ್ರ, ಬಿಸಿಯೂಟ, ಸೈಕಲ್ ಸೇರಿ ಅನೇಕ ಉಚಿತ ಸೌಲಭ್ಯ ಕುರಿತು ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.

ಬಿಇಒ ಬಿ.ಎಸ್.ಜಗದೀಶ್ವರ ಮಾತನಾಡಿ, ಮೇ 27ರಂದು ತಾಲೂಕು ಮಟ್ಟದಲ್ಲಿ ಆಂದೋಲನ ಆಯೋಜಿಸಿದ್ದು, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಿಡಿಪಿಒ ಇಲಾಖೆ ಸಹಕಾರ ಅಗತ್ಯ ಎಂದರು.

ಪ್ರಸ್ತುತ ಸಾಲಿನಿಂದ ರಾಮಗಿರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಎಚ್.ಡಿ.ಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, 1ನೇ ತರಗತಿಯಿಂದ ಆಂಗ್ಲ ಮಾಧ್ಯಮ ಬೋಧನೆ ಆರಂಭವಾಗಲಿದೆ ಎಂದು ತಿಳಿಸಿದರು.

ಕಾಶಿಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕರ್ನಾಟಕ ಪಬ್ಲಿಕ್ ಶಾಲೆಯಾಗಿ ಮೇಲ್ದರ್ಜೆಗೆ ಏರಿಸಲಾಗಿದೆ. ಅಲ್ಲಿ ಪೂರ್ವ ಪ್ರಾಥಮಿಕ ತರಗತಿ ಆರಂಭಿಸಲಾಗುತ್ತಿದೆ. ಸಿಆರ್‌ಪಿ, ಮುಖ್ಯ ಶಿಕ್ಷಕರು, ಶಿಕ್ಷಕರು ಹೆಚ್ಚು ಪ್ರಚಾರ ಮಾಡುವ ಮೂಲಕ ದಾಖಲಾತಿ ಪ್ರಮಾಣ ಹೆಚ್ಚಿಸಬೇಕು ಎಂದರು.

ಎಲ್ಲ ಕ್ಲಸ್ಟರ್‌ಗಳ ಸಿಆರ್‌ಪಿಗಳು ಸಭೆಯಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *