ರಾಸು ಪೋಷಣೆ ಆರ್ಥಿಕ ಸುಧಾರಣೆಗೆ ದಾರಿ

ಹೊಳಲ್ಕೆರೆ: ಹೆಚ್ಚು ಹಾಲು ನೀಡುವ ಮಿಶ್ರತಳಿ ರಾಸು ಪೋಷಣೆಯಿಂದ ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ ಎಂದು ಶಾಸಕ ಎಂ. ಚಂದ್ರಪ್ಪ ಹೇಳಿದರು.
ಹಿರೇಕಂದವಾಡಿ ಬಯಲು ರಂಗಮಂದಿರದಲ್ಲಿ ಪಶು ಪಾಲನೆ ಮತ್ತು ಪಶು ವೈದ್ಯಕೀಯ ಇಲಾಖೆ ಆಯೋಜಿಸಿದ್ದ ಮಿಶ್ರತಳಿ ಆಕಳು, ಕರುಗಳ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.
ತಾಲೂಕಿನ ಬಹುತೇಕ ರೈತರು ಹೈನುಗಾರಿಕೆ ಉಪ ಕಸುಬಾಗಿಸಿಕೊಂಡಿದ್ದಾರೆ. ಬರಗಾಲದಿಂದ ಹಿರೇಕಂದವಾಡಿ ಭಾಗದ ಕೃಷಿಕರು ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ. ಅವರಿಗೆ ಹೈನುಗಾರಿಕೆ ಅರ್ಥಿಕ ಬಲ ನೀಡಲಿದೆ ಎಂದರು.
ಪ್ರದರ್ಶನದಲ್ಲಿ 80ಕ್ಕೂ ಹೆಚ್ಚು ಹಸು, ಕರುಗಳು ಭಾಗವಹಿಸಿದ್ದವು. ಎಚ್‌ಎಫ್ ಹಸು, ಕರು ಹಾಗೂ ಜೆರ್ಸಿ ಹಸು, ಕರು ವಿಭಾಗದಲ್ಲಿ ತಲಾ ಮೂರು ಸೇರಿ ಒಟ್ಟು 12 ರಾಸುಗಳಿಗೆ ಬಹುಮಾನ ವಿತರಿಸಲಾಯಿತು.
ಗ್ರಾಪಂ ಅಧ್ಯಕ್ಷೆ ಗಂಗಮ್ಮ ಚಂದ್ರಶೇಖರಪ್ಪ, ಡಿ.ಸಿ. ಮೋಹನ್, ವೆಂಕಟೇಶ್, ತಾಪಂ ಸದಸ್ಯ ದೇವರಾಜ್, ಪಶುಪಾಲನೆ ಇಲಾಖೆ ಉಪ ನಿರ್ದೇಶಕ ಡಾ. ತಿಪ್ಪೇಸ್ವಾಮಿ, ಶಿಮೂಲ್ ಉಪ ವ್ಯವಸ್ಥಾಪಕ ಡಾ.ಎಂ. ತಿಪ್ಪೇಸ್ವಾಮಿ, ಪಶುಪಾಲನೆ ಅಧಿಕಾರಿ ಪರಮೇಶ್ ನಾಯ್ಕ ಉಪಸ್ಥಿತರಿದ್ದರು.