ಹೊಳಲ್ಕೆರೆ: ಮಾದಿಗ ಸಮುದಾಯದ ವಿದ್ಯಾರ್ಥಿಗಳು ಶೈಕ್ಷಣಿಕ ಸಾಧನೆ ಮೂಲಕ ಉನ್ನತ ಹುದ್ದೆ ಅಲಂಕರಿಸಿ ಆರ್ಥಿಕವಾಗಿ ಸ್ವಾವಲಂಬಿಗಳಾದಗ ಸಮಾಜದಲ್ಲಿ ಗೌರವ ಸ್ಥಾನಮಾನ ದೊರೆಯಲಿದೆ ಎಂದು ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಹೇಳಿದರು.
ತಾಲೂಕು ಮಾದಿಗ ನೌಕರರ ಸಾಂಸ್ಕೃತಿಕ ಸಂಘ ಪಟ್ಟಣದ ಹೊರವಲಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಕ್ಕಳು ವಿದ್ಯಾಭ್ಯಾಸದ ಕಡೆ ಹೆಚ್ಚಿನ ಗಮನ ಹರಿಸಬೇಕು. ಶಿಕ್ಷಣ, ಆರ್ಥಿಕ ಸ್ಥಿತಿವಂತರಲ್ಲದಿದ್ದಾಗ ಸಾಮಾಜಿಕವಾಗಿ ಹಿಂದುಳಿಯುತ್ತೇವೆ ಎಂದರು.
ಜಾತಿಮುಕ್ತ ಸಮಾಜ ನಿರ್ಮಾಣವಾಗಲು ಅಸ್ಪಶ್ಯತೆ ತೊಲಗಬೇಕು.
ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಆರಂಭವಾಗಿರುವ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಸಮುದಾಯದ ರಾಜಕಾರಣಿಗಳು ಹಾಗೂ ಅಧಿಕಾರಿಗಳ ಸಹಕಾರದೊಂದಿಗೆ ನಿರಂತರವಾಗಿ ನಡೆಯಬೇಕು ಎಂದು ತಿಳಿಸಿದರು.
ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಮಾತನಾಡಿ, ಶಿಕ್ಷಣ ಸರ್ಕಾರಿ ಉದ್ಯೋಗ ಪಡೆಯುವುದಕ್ಕೆ ಮಾತ್ರ ಸೀಮಿತವಾಗಬಾರದು. ಜ್ಞಾನವಂತರಾದರೆ ಗೌರವ, ಸ್ಥಾನಮಾನ ಸಿಗುತ್ತದೆ.
ಏಕಾಗ್ರತೆ ಇದ್ದಾಗ ಮಾತ್ರ ಕೌಶಲ, ತಾಂತ್ರಿಕತೆ ಲಭ್ಯವಾಗುತ್ತದೆ. ಏಕಾಗ್ರತೆ ಇಲ್ಲದಿದ್ದರೆ ಎಷ್ಟೇ ಓದಿದರೂ ಕೂಡ ಉಪಯೋಗಕ್ಕೆ ಬರುವುದಿಲ್ಲ ಎಂದರು.
ಎಸ್ಸೆಸ್ಸೆಲ್ಸಿ, ಪಿಯುಸಿ, ಬಿ.ಇಡಿನಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
ಸಾನ್ನಿಧ್ಯ ವಹಿಸಿದ್ದ ಶ್ರೀ ಷಡಕ್ಷರಿ ದೇಶಿಕೇಂದ್ರ ಮುನಿ ಸ್ವಾಮೀಜಿ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಇತರರು ಮಾತನಾಡಿದರು.
ಎಇಇ ಕಾಂತರಾಜ್, ಎಸ್.ಶ್ರೀನಿವಾಸ್‌ಮೂರ್ತಿ, ಜೆ.ಸಿದ್ದಲಿಂಗಮ್ಮ, ಕೆ.ಜಿ.ಜಗದೀಶ್, ಎಂ.ರೇವಣಸಿದ್ದಪ್ಪ, ತಾಪಂ ಇಒ ರವಿಕುಮಾರ್,
ಸಿ.ಚಂದ್ರಪ್ಪ, ಪೌರಯುಕ್ತ ಡಿ.ಉಮೇಶ್, ಬಿ.ಪಿ.ತಿಪ್ಪೇಸ್ವಾಮಿ, ಡಿಎಸ್‌ಎಸ್ ರಾಜ್ಯ ಸಂಚಾಲಕ ಡಿ.ಆರ್.ಪಾಂಡುರಂಗಸ್ವಾಮಿ, ಕೆಂಗುಂಟೆ ಜಯಣ್ಣ, ವಸಂತ, ರಾಜಪ್ಪ, ಬೇನಕನಹಳ್ಳಿ ಚಂದ್ರಪ್ಪ ಇತರರಿದ್ದರು.
ಪರೀಕ್ಷೆಗಳಲ್ಲಿ ಹಲವು ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದರೂ ಅವರಿಗೆ ವಿದ್ಯಾಭ್ಯಾಸವನ್ನು ಮುಂದುವರಿಸುವ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುವುದಿಲ್ಲ. ಅಂತಹ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವಾಗಬೇಕಿದೆ.
ಎಚ್.ಆಂಜನೇಯ, ಮಾಜಿ ಸಚಿವ
ವಿದ್ಯಾರ್ಥಿಗಳು ಮೊಬೈಲ್ ಅನ್ನು ತಮ್ಮ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ವಿಚಾರಗಳಿಗೆ ಬಳಸಿಕೊಳ್ಳಬೇಕು. ರೀಲ್ಸ್ ಮಾಡುವುದು, ಜಾಲತಾಣಗಳನ್ನು ನೋಡುವ ಗೀಳು ಬೆಳಸಿಕೊಳ್ಳಬಾರದು.
ಷಡಕ್ಷರಿ ದೇಶಿಕೇಂದ್ರ ಮುನಿ ಸ್ವಾಮೀಜಿ, ಆದಿ ಜಾಂಬವ ಮಠ