ಗೊಬ್ಬರ ಮಾರಾಟಕ್ಕೆ ಬೇಕು ಪರವಾನಗಿ

ಹೊಳಲ್ಕೆರೆ: ಬಿತ್ತನೆ ಬೀಜ, ಗೊಬ್ಬರ ಮತ್ತು ಕೀಟನಾಶಕ ವಿತರಕರು ಅಧಿಕೃತ ಪರವಾನಗಿ ಹೊಂದುವುದು ಹಾಗೂ ಕಾಲಕಾಲಕ್ಕೆ ನವೀಕರಿಸುವುದು ಕಡ್ಡಾಯ ಎಂದು ಕೃಷಿ ಸಹಾಯಕ ನಿರ್ದೇಶಕಿ ಭಾರತಿ ತಿಳಿಸಿದರು.

ಕೃಷಿ ಇಲಾಖೆ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕೃಷಿ ಪರಿಕರ ಮಾರಾಟಗಾರರಿಗೆ ಜಾಗೃತಿ ಹಾಗೂ ಸುರಕ್ಷಿತ ಕೀಟನಾಶಕ ಬಳಕೆ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಕಳಪೆ ಗೊಬ್ಬರ, ಬಿತ್ತನೆ ಬೀಜ, ಕೀಟನಾಶಕಗಳ ಮಾರಾಟ ಶಿಕ್ಷಾರ್ಹ ಅಪರಾಧ. ಅಂಥ ಉತ್ಪನ್ನಗಳ ಮಾರಾಟಕ್ಕೆ ಯಾರಾದರೂ ಪ್ರಚೋದಿಸಿದರೆ, ಇಲಾಖೆಗೆ ಮಾಹಿತಿ ನೀಡಬೇಕು. ಕೃಷಿ ಪರಿಕರ ಮಾರಾಟಗಾರರೂ ಕಡ್ಡಾಯವಾಗಿ ಪರವಾನಿಗೆ ಪಡೆದು ನಾಮಫಲಕ ಪ್ರದರ್ಶಿಸಬೇಕು. ಖರೀದಿದಾರರಿಗೆ ಅಧಿಕೃತ ಬಿಲ್ ನೀಡಬೇಕು ಎಂದು ಸೂಚಿಸಿದರು.

ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳಾದ ಪ್ರಸನ್ನ, ಮಹಮ್ಮದ್, ಕೃಷಿ ಪರಿಕರ ಮಾರಾಟಗಾರ ಸಂಘದ ಅಧ್ಯಕ್ಷ ವೀರಭದ್ರಪ್ಪ ಮಾತನಾಡಿದರು.