ಶಿಕ್ಷಣ ಉದ್ಯೋಗ ಭರವಸೆ ನೀಡುವಂತಿರಬೇಕು

ಹೊಳಲ್ಕೆರೆ: ಶಿಕ್ಷಣ ಉದ್ಯೋಗ ಭರವಸೆ ನೀಡುವಂತಿರಬೇಕು ಎಂದು ಎಸ್‌ಜೆಎಂ ವಿದ್ಯಾಪೀಠದ ಕಾರ್ಯನಿರ್ವಹಣಾ ನಿರ್ದೇಶಕ ಡಾ.ಜಿ.ಎನ್. ಮಲ್ಲಿಕಾರ್ಜುನಪ್ಪ ಹೇಳಿದರು.

ತಾಲೂಕಿನ ಮಲ್ಲಾಡಿಹಳ್ಳಿ ಅನಾಥಸೇವಾಶ್ರಮದ ರಾಘವೇಂದ್ರ ಬಿ.ಇಡಿ ಕಾಲೇಜಿನಲ್ಲಿ ಏರ್ಪಡಿಸಿದ್ದ ವಿದ್ಯಾರ್ಥಿ ಸಾಂಸ್ಕೃತಿಕ ಸಂಘದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಉದ್ಯೋಗ ಭರವಸೆ, ಆರ್ಥಿಕ ಸದೃಢತೆ ಸಾಧ್ಯವಾದರೆ ಮಾತ್ರ ಶಿಕ್ಷಣದ ಮೂಲ ಉದ್ದೇಶಗಳು ಕ್ರಿಯಾಶೀಲಗೊಳ್ಳುತ್ತವೆ. ಬಿ.ಇಡಿಯ 2 ವರ್ಷ ವಿಸ್ತರಣೆಯಿಂದ ಉದ್ಯೋಗ ಭರವಸೆ ಕಡಿಮೆಯಾಗುತ್ತಿರುವುದು ವಿಷಾದನೀಯ. ವಿಷಾದವೇ ಬದುಕಾಗಬಾರದು. ಜ್ಞಾನವನ್ನು ಬದುಕನ್ನಾಗಿ ಕಲಿಸುವ ಶಿಕ್ಷಣ ಕೊಡಬೇಕು. ಬೋಧಕ ವಿದ್ಯಾರ್ಥಿಗಳ ಮನದಾಸೆ ಅರಿತು, ಅರ್ಥೈಸಿಕೊಂಡು ಬೋಧಿಸುವುದು ಸೂಕ್ತ ಎಂದರು.

ಶಿವಮೊಗ್ಗ ಡಯೆಟ್‌ನ ಹಿರಿಯ ಉಪನ್ಯಾಸಕ ಹರಿಪ್ರಸಾದ್, ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು, ಆದರ್ಶ ವ್ಯಕ್ತಿಗಳ ಜೀವನ ಚರಿತ್ರೆ ಉಪಯುಕ್ತತೆ ಕುರಿತು ಮಾತನಾಡಿದರು. ನಿರಾಶವಾದಿಗಳಾಗದೆ ಆಶಾವಾದಿಗಳಾಗಿ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು.

ದಾವಣಗೆರೆ ವಿವಿ ಶಿಕ್ಷಣ ನಿಲಯದ ಡೀನ್ ಡಾ.ಬಿ.ಸಿ. ಅನಂತರಾಮು ಮಾತನಾಡಿ, ಶಿಕ್ಷಣದ ಮೂಲಕ ಭಾಷಾ ಸ್ಪಷ್ಟತೆ, ನಿರರ್ಗಳತೆ ಹೇಗೆ ಉತ್ತಮಪಡಿಸಿಕೊಳ್ಳಬೇಕೆಂಬ ಬಗ್ಗೆ ತಿಳಿಸಿದರು. ಸ್ಥಾನಿಕಾಧಿಕಾರಿ ಕೆ.ಎಂ. ತಿಮ್ಮರಾಜು ಮಾತನಾಡಿ, ಶಿಕ್ಷಕರಾಗುವವರು ಜಗತ್ತಿನ ನಿರ್ಮಾತೃಗಳು. ಈ ವೃತ್ತಿಯ ಗೌರವ ಸದಾ ಕಾಪಾಡಬೇಕು ಎಂದು ಪ್ರಶಿಕ್ಷಣಾರ್ಥಿಗಳಿಗೆ ಸಲಹೆ ನೀಡಿದರು.

ಅನಾಥಸೇವಾಶ್ರಮದ ವಿಶೇಷಾಧಿಕಾರಿ ಪ್ರೊ.ಟಿ.ಎಚ್.ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಅತೀ ಹೆಚ್ಚು ಅಂಕಗಳ ಗಳಿಸಿ ಸಂಸ್ಥೆಗೆ ಕೀರ್ತಿ ತಂದ ರೇಷ್ಮಾಬಾನು, ಗಣೇಶ್ ಹಾಗೂ ಉಮ್ಮೆಸಲ್ಮಾ ಇವರನ್ನು ಸನ್ಮಾನಿಸಲಾಯಿತು. ಪ್ರಾಚಾರ್ಯ ಡಾ.ಜಿ.ಯು. ನಾಗರಾಜ್, ಉಪನ್ಯಾಸಕರಿದ್ದರು.