ಸಮಾನತೆ ಕಂಪು ಬೀರುವ ಮಂಟಪ

ಹೊಳಲ್ಕೆರೆ: ಸಮಸಮ ಸಮಾಜದ ಆಶಯದ ಸಮಾನತೆ ಕಂಪು ಪಸರಿಸುವ ಅನುಭವ ಮಂಟಪ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಆರ್.ನುಲೇನೂರಿನಲ್ಲಿದೆ. ಈ ಮೂಲಕ ಶರಣ ನುಲಿಯ ಚಂದಯ್ಯ ಅಲ್ಲಿ ನೆಲೆ ನಿಂತಿದ್ದಾರೆ.

ಬಸವಾದಿ ಪ್ರಮಥರು ನುಡಿದಂತೆ ನಡೆದು, ಸತ್ಯಶುದ್ಧ ಕಾಯಕದ ಮೂಲಕ ನಿತ್ಯ ದಾಸೋಹ ನಡೆಸಿದರು.

ವೈಚಾರಿಕ ಬೆಳಕು ಪಸರಿಸಿ, ಸಮಾನತೆ ನೆಲೆಗಟ್ಟಿನಲ್ಲಿ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಅಡಿಪಾಯ ಹಾಕಿದರು. ಅವರಂತೆ ಕಾಯಕ ತತ್ವ ಅಳವಡಿಸಿ

ಕೊಂಡವರು ಶರಣ ನುಲಿಯ ಚಂದಯ್ಯ. ವಿಶ್ವಗುರು ಬಸವೇಶ್ವರರ ಅನುಭವ ಮಂಟಪದಲ್ಲಿ ಅವರ ಹೆಸರು ಅವಿಸ್ಮರಣೀಯ. ವಚನದಂತೆ ಕಾಯಕ, ದಾಸೋಹದ ಮೂಲಕ ಸಮಾಜಕ್ಕೆ ಕರ್ತವ್ಯಪ್ರಜ್ಞೆ ಸಾರಿದ ಮಹಾಶರಣ ಅವರು.

ವಿಜಯಪುರ ಜಿಲ್ಲೆ ಶಿವಣಗಿ ಗ್ರಾಮದಲ್ಲಿ ಜನಿಸಿದ ಚಂದಯ್ಯ, ಕಲ್ಯಾಣದಲ್ಲಿ ಕಾಯಕವನ್ನೇ ಕೈಲಾಸವಾಗಿಸಿಕೊಂಡವರು. ಅಲ್ಲಿ ಕ್ರಾಂತಿಯಾದಾಗ ಉಳವಿ, ಶಿವಮೊಗ್ಗ, ಎಣ್ಣೆಹೊಳೆ, ನಂದಿಗ್ರಾಮ, ಬೆಂಕಿಕೆರೆ ಮೂಲಕ ಹೊಳಲ್ಕೆರೆ ತಾಲೂಕಿನ ದುಮ್ಮಿ ಗ್ರಾಮಕ್ಕೆ ಬಂದರು.

ಅವರ ವಿಚಾರಧಾರೆಗಳಿಗೆ ಮನಸೋತ ಅಲ್ಲಿನ ಪಾಳೇಗಾರ ದುಮ್ಮಣ್ಣನಾಯಕನ ರಾಣಿ ಪದ್ಮಾವತಿ ಲಿಂಗವಂತ ಧರ್ಮ ದೀಕ್ಷೆ ಪಡೆಯುತ್ತಾಳೆ. ತನ್ನ ತವರು ಪದ್ಮಾವತಿ ಪಟ್ಟಣದಲ್ಲಿ (ಆರ್.ನುಲೇನೂರು) ಶಿಲಾಮಂಟಪ ನಿರ್ಮಿಸಿ ನಿತ್ಯ ಕಾಯಕ, ದಾಸೋಹಕ್ಕೆ ಅವಕಾಶ ಕಲ್ಪಿಸುತ್ತಾಳೆ. ಜೀವನದ ಕೊನೆವರೆಗೆ ಅಲ್ಲೇ ನೆಲೆಸಿದ್ದ ಚಂದಯ್ಯ, ಚಂದೇಶ್ವರ ಲಿಂಗದಲ್ಲಿ ಲೀನವಾದರು ಎಂಬ ಪ್ರತೀತಿ ಇದೆ.

ಅವರು ಲಿಂಗೈಕ್ಯರಾದ ಸ್ಥಳವನ್ನು 1956 ರಲ್ಲಿ ಜೀರ್ಣೋದ್ಧಾರ ಮಾಡಲಾಗಿದೆ. ಇದು 12 ನೇ ಶತಮಾನದ ಅನುಭವ ಮಂಟಪದ ಪರಿಕಲ್ಪನೆ ನೆನಪಿಸುತ್ತದೆ. ಗ್ರಾಮದಲ್ಲಿ ವಿವಿಧ ಕಾಯಕ ನಿರತ ಎಲ್ಲ ವರ್ಗದ ಜನ ನೆಲೆಸಿದ್ದು ಸಾಮರಸ್ಯದ ಬದುಕು ನಡೆಸುತ್ತಿದ್ದಾರೆ.

ಅನುಭವ ಮಂಟಪವಾಯ್ತು ಅನುಭವ ಮಂಟಪ: ಈ ಸ್ಥಳವನ್ನು ಸ್ಥಾವರಲಿಂಗ ಎಂದು ಭಾವಿಸಿ ಭಕ್ತರು ಪೂಜೆ ಸಲ್ಲಿಸುತ್ತಿದ್ದರು. 2014ರಲ್ಲಿ ಪ್ರಾಚ್ಯವಸ್ತು ಪುರಾತತ್ವ ಇಲಾಖೆ 38ಲಕ್ಷ ವೆಚ್ಚದಲ್ಲಿ ನುಲಿಯ ಚಂದಯ್ಯ ಅನುಭವ ಮಂಟಪ ನಿರ್ಮಿಸಿತು.

ಉದ್ಘಾಟನೆಗೆ ಆಗಮಿಸಿದ ಸಾಣೇಹಳ್ಳಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನದಲ್ಲಿ, ಶರಣರು ಗುಡಿ ಸಂಸ್ಕೃತಿ ಒಪ್ಪಿರಲಿಲ್ಲ. ದೇವಾಲಯದ ಬದಲು ಅನುಭವ ಮಂಟಪವಾಗಲಿ. ಶರಣರ ಚಿಂತನೆಗಳು ನಿರಂತರವಾಗಿ ನಡೆಯಲಿ ಎಂದು ಆಶಿಸಿದ್ದರು.

ಚಂದಯ್ಯನವರ ಸ್ಮರಣೆ 25ಕ್ಕೆ: ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಜೂ.25ರಂದು ಚಂದಯ್ಯನವರ ಸ್ಮರಣೆ, ಜೀರ್ಣೋದ್ಧಾರದ 62ನೇ ಹಾಗೂ ಅನುಭವ ಮಂಟಪದ 6ನೇ ವರ್ಷಾಚರಣೆ ಹಮ್ಮಿಕೊಳ್ಳಲಾಗಿದ್ದು, ಸಿದ್ಧತೆ ಭರದಿಂದ ಸಾಗಿವೆ.

ದೇಗುಲಕ್ಕೆ ಸಾಗುವ ಮಾರ್ಗ: ಹೊಳಲ್ಕೆರೆ ತಾಲೂಕು ಕೇಂದ್ರದಿಂದ ರಾಮಗಿರಿ ಮಾರ್ಗದತ್ತ 10 ಕಿ.ಮೀ. ಸಾಗಿದರೆ ದೇವಸ್ಥಾನ ತಲುಪಬಹುದು.

ಪ್ರತಿ ತಿಂಗಳು 24ಕ್ಕೆ ಶಿವಾನುಭವ ಕಾರ್ಯಕ್ರಮ: ಶ್ರೀಗಳ ಮಾರ್ಗದರ್ಶನದಂತೆ ಗ್ರಾಮಸ್ಥರು ನುಲಿಯ ಚಂದಯ್ಯ ಅನುಭವ ಮಂಟಪ ಸಮಿತಿ ಸ್ಥಾಪಿಸಿದರು. ಬಸವ ವಿಭೂಷಣ ಪ್ರಶಸ್ತಿ ಪುರಸ್ಕೃತ ಜಿ.ಎನ್.ಬಸವರಾಜಪ್ಪ ನೇತೃತ್ವದಲ್ಲಿ ಪ್ರತಿ ತಿಂಗಳ 24ರಂದು ಜಾತಿ, ಲಿಂಗ ಭೇದವಿಲ್ಲದೆ ಅನುಭವ ಮಂಟಪದಲ್ಲಿ ಸೇರುತ್ತಾರೆ. ವಚನ ಗಾಯನ, ಶರಣರ ವಿಚಾರಧಾರೆ, ಚಿಂತನ-ಮಂಥನ ನಡೆಸುತ್ತಾರೆ. ಸಹ ಭೋಜನದಲ್ಲಿ ಪಾಲ್ಗೊಳ್ಳುವ ಸಂಸ್ಕೃತಿ ರೂಢಿಸಿಕೊಂಡಿದ್ದಾರೆ.&
ನುಲೇನೂರು ಬಸವರಾಜು:

Leave a Reply

Your email address will not be published. Required fields are marked *