ಪಟ್ಟಣದ ಅಭಿವೃದ್ಧಿಗೆ ಕೈ ಹಿಡಿಯಿರಿ: ಮಾಜಿ ಸಚಿವ ಆಂಜನೇಯ ಮತಯಾಚನೆ

ಹೊಳಲ್ಕೆರೆ: ಮತದಾರರು ಪಕ್ಷದ ಅಭ್ಯರ್ಥಿಗಳಿಗೆ ಬಹುಮತ ನೀಡಿ ಪಟ್ಟಣ ಪಂಚಾಯಿತಿಯ 13 ವಾರ್ಡ್‌ಗಳ ಸಮಗ್ರ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಮಾಜಿ ಸಚಿವ ಎಚ್.ಆಂಜನೇಯ ಮನವಿ ಮಾಡಿದರು.

ಪಟ್ಟಣದ 10ನೇ ವಾರ್ಡ್‌ನಲ್ಲಿ ಪಕ್ಷದ ಅಭ್ಯರ್ಥಿ ಪರ ಶನಿವಾರ ಮತಯಾಚಿಸಿದ ಅವರು, ಹಿಂದೆ ನಾನು ಸಚಿವನಾಗಿದ್ದಾಗ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ತಂದು ಅಭಿವೃದ್ಧಿ ಕೆಲಸ ಮಾಡಿಸಿದ್ದೇನೆ ಎಂದರು.

ರಾಜ್ಯದ ಎಲ್ಲಿಯೂ ಇಲ್ಲದಂತಹ ಹೈಟೆಕ್ ಉರ್ದು ಮತ್ತು ಕನ್ನಡ ಹಿರಿಯ ಪ್ರಾಥಮಿಕ ಶಾಲೆ, ಆಸ್ಪತ್ರೆಗೆ 17 ಕೋಟಿ ರೂ. ಅನುದಾನ, ಪಪಂ ಕಟ್ಟಡ ನಿರ್ಮಾಣಕ್ಕೆ 4 ಕೋಟಿ, ಅಂಬೇಡ್ಕರ್ ಬಯಲು ರಂಗಮಂದಿರ, 9 ಶುದ್ಧ ನೀರಿನ ಘಟಕ ಸ್ಥಾಪನೆ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಕ್ರೀಡಾಂಗಣ, ಸಿಸಿ ರಸ್ತೆ, ಅಪ್ಪರ್ ಭದ್ರಾ ಯೋಜನೆ ಸೇರಿ ಹತ್ತಾರು ಕೆಲಸಗಳಾಗಿವೆ. ಎಲ್ಲ ಸಮಾಜದವರಿಗೂ ಸಮುದಾಯಭವನ ನಿರ್ಮಿಸಿಕೊಡಲಾಗಿದೆ. ಇವುಗಳ ಅನುಷ್ಠಾನಕ್ಕೆ ಹಾಲಿ ಶಾಸಕರು ಅಡ್ಡಿಪಡಿಸುತ್ತಿದ್ದಾರೆ ಎಂದು ದೂರಿದರು.

ಪಪಂ 13 ವಾರ್ಡ್‌ಗೂ ಸೂಕ್ತ ಅಭ್ಯರ್ಥಿಗಳನ್ನೇ ನಿಲ್ಲಿಸಿದ್ದೇವೆ. ಹಿಂದಿನ ಸರ್ಕಾರದ ಸಾಧನೆ ಜ್ಞಾಪಿಸಿಕೊಂಡು ಮತ ನೀಡಬೇಕು ಎಂದು ಕೋರಿದರು.

ಮಾಜಿ ಶಾಸಕ ಎ.ವಿ.ಉಮಾಪತಿ ಮಾತನಾಡಿ, ಸಾಧಕರು ಸೋಲುವುದು, ಅಭಿವೃದ್ಧಿ ಶೂನ್ಯರ ಗೆಲುವು ಇತ್ತೀಚೆಗೆ ಸಾಮಾನ್ಯವಾಗಿದೆ. ನಾನು ಶಾಸಕನಾಗಿದ್ದಾಗ ಎಂಟು ಹಳ್ಳಿ ದಾಟಿಸಿ ಸೂಳೆಕೆರೆ ನೀರು ತರಿಸಿದ್ದೆ. ಅಪ್ಪರ್ ಭದ್ರಾ ಯೋಜನೆ ಸಂಪೂರ್ಣವಾದರೆ ಪಟ್ಟಣದ ಎರಡೂ ಕೆರೆಗಳಿಗೆ ನೀರು ಹರಿಯಲಿದೆ ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಫಾತ್ಯರಾಜನ್, ಮುಖಂಡರಾದ ಹನುಮಂತಪ್ಪ, ಬಿ.ಎಸ್.ರುದ್ರಪ್ಪ, ಅಲೀಮುಲ್ಲಾ ಷರೀಫ್, ದಾವೂದ್ ಉಲ್ಲಾ ಹಾಗೂ ಕಾರ್ಯಕರ್ತರಿದ್ದರು.

Leave a Reply

Your email address will not be published. Required fields are marked *