ಹೊಳಲ್ಕೆರೆ: ಶರಣರು, ದಾರ್ಶನಿಕರು ಸರ್ವ ಸಮುದಾಯದ ಆಸ್ತಿ ಇದ್ದಂತೆ ಎಂದು ತಹಸೀಲ್ದಾರ್ ಕೆ.ನಾಗರಾಜ್ ಅಭಿಪ್ರಾಯಪಟ್ಟರು.
ತಾಲೂಕು ಆಡಳಿತ ಮತ್ತು ರೆಡ್ಡಿ ಸಮಾಜದಿಂದ ತಾಲೂಕು ಕಚೇರಿಯಲ್ಲಿ ಭಾನುವಾರ ಆಯೋಜಿಸಿದ್ದ ವೇಮನ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕ್ರಾಂತಿಕಾರಿ, ಜಗಜ್ಯೋತಿ ಬಸವಣ್ಣ ಹಾಗೂ ಅವರ ಕಾಲಘಟ್ಟದ ಎಲ್ಲ ಶರಣರು, ಸಮಾಜದಲ್ಲಿನ ಮೇಲು ಕೀಳು ಹಾಗೂ ಜಾತಿ ತಾರತಮ್ಯವನ್ನು ಬುಡ ಸಮೇತ ಕಿತ್ತೊಗೆಯುವ ಮಹತ್ತರ ಕಾರ್ಯಕ್ಕೆ ತಮ್ಮನ್ನು ಅರ್ಪಿಸಿಕೊಂಡಿದ್ದಾರೆ. ಆದರೆ, ಇಂದು ಅವರ ಮೌಲ್ಯಗಳನ್ನು ಬದಿಗಿಟ್ಟು ಅವರನ್ನು ಕೇವಲ ಒಂದು ಜಾತಿ, ಧರ್ಮಕ್ಕೆ ಸೀಮಿತಗೊಳಿಸುತ್ತಿರುವುದು ಖೇದದ ಸಂಗತಿ ಎಂದು ಬೇಸರಿಸಿದರು.
ಪಪಂ ಮುಖ್ಯಾಧಿಕಾರಿ ಎ.ವಾಸೀಂ ಮಾತನಾಡಿ, ಬಸವಾದಿ ಶರಣರು 12ನೇ ಶತಮಾನದಲ್ಲಿಯೇ ನಮಗೆ ಭಕ್ತಿ ಹಾಗೂ ಮುಕ್ತಿ ಮಾರ್ಗ ತಿಳಿಸಿದ್ದಾರೆ. ಆದರೆ, ಅವರು ಜಗತ್ತಿಗೆ ನೀಡಿರುವ ಜೀವನ ಮೌಲ್ಯ ಮತ್ತು ಆದರ್ಶಗಳನ್ನು ನಾವುಗಳು ಪಾಲಿಸಲು ಪ್ರಯತ್ನ ಮಾಡುತ್ತಿಲ್ಲ ಎಂದು ತಿಳಿಸಿದರು.
ಅರಣ್ಯಾಧಿಕಾರಿ ಬಹುಗುಣ, ಸಮುದಾಯದ ಮುಖಂಡರಾದ ಗಿರೀಶ್, ಕಿರಣ್, ಲಿಂಗರಾಜ್, ಹುಚ್ಚಪ್ಪಶೆಟ್ಟಿ, ಪಟ್ಟಣ್ಣಶೆಟ್ಟಿ, ಮಂಜುನಾಥ ಶೆಟ್ಟಿ, ವಿನಯ್, ತಾಲೂಕು ಕಚೇರಿ ಸಿಬ್ಬಂದಿ ಗೋಪಿ, ಪ್ರಶಾಂತ್ ಕುಮಾರ್, ಹರೀಶ್, ರಂಗಸ್ವಾಮಿ ಮತ್ತಿತರರಿದ್ದರು.