ಹೊಳಲ್ಕೆರೆ: ಆರ್ಥಿಕ, ಸಾಮಾಜಿಕವಾಗಿ ಹಿಂದುಳಿದಿರುವ ಕೊರಮ, ಕೊರಚ, ಲಂಬಾಣಿ, ಭೋವಿ (ಕೊಲಂಭೋ) ಇನ್ನಿತರ ಸಮುದಾಯಗಳನ್ನು ಎಸ್‌ಸಿ ಪಟ್ಟಿಯಿಂದ ಸರ್ಕಾರ ಕೈಬಿಡಬಾರದು ಎಂದು ಭೋವಿ ಮಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ತಿಳಿಸಿದರು.
ತಾಲೂಕು ಬಂಜಾರ, ಭೋವಿ, ಕೊರಚ, ಕೊರಮ ಸಮುದಾಯಗಳ ಸಹಯೋಗದಲ್ಲಿ ಗುರುವಾರ ಪಟ್ಟಣದ ಅಂಚೆ ಕಚೇರಿ ಎದುರು ಹಮ್ಮಿಕೊಂಡಿದ್ದ ಪತ್ರ ಚಳವಳಿಗೆ ಚಾಲನೆ ನೀಡಿ ಮಾತನಾಡಿದರು.
ಈ ಸಮುದಾಯಗಳನ್ನು ಎಸ್‌ಸಿ ಪಟ್ಟಿಯಿಂದ ಕೈಬಿಡುವಂತೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ರಾಷ್ಟ್ರೀಯ ಎಸ್‌ಸಿ ಆಯೋಗಕ್ಕೆ ಅರ್ಜಿ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಸಂಬಂಧಿತರಿಗೆ ತಿಳಿಸಿತ್ತು ಎಂದರು.
ಜಾತಿಗಳ ಸ್ಥಿತಿಗತಿಗಳ ಬಗ್ಗೆ ಮಾಹಿತಿ ನೀಡುವಂತೆ ಆಯೋಗವು ರಾಜ್ಯ ಸರ್ಕಾರಗಳಿಗೆ ಸೂಚಿಸಿತ್ತು. ಈ ಕಾರಣಕ್ಕೆ ನಮ್ಮ ಸ್ಥಿತಿಗತಿ ತಿಳಿಸಲು ಪತ್ರ ಚಳವಳಿ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಸಂವಿಧಾನಬದ್ಧವಾಗಿ ನೀಡಿರುವ ಮಿಸಲಾತಿ ಹಕ್ಕುಗಳನ್ನು ಘಾಸಿಗೊಳಿಸುವ ಕೆಲಸ ಸರಿಯಲ್ಲ. ಆದ್ದರಿಂದ ಈ ಸಮುದಾಯಗಳಿಗೆ ಇರುವ ಮೀಸಲನ್ನು ಮುಂದುವರಿಸುವಂತೆ ಸರ್ಕಾರಕ್ಕೆ ಪತ್ರ ಚಳವಳಿ ಮೂಲಕ ಆಗ್ರಹಿಸುತ್ತೇವೆ ಎಂದು ತಿಳಿಸಿದರು.
ಭೋವಿ ಸಂಘದ ತಾಲೂಕಾಧ್ಯಕ್ಷ ಡಿ.ಸಿ.ಮೋಹನ್, ಬಂಜಾರ ಸಂಘದ ತಾಲೂಕಾಧ್ಯಕ್ಷ ಕುಮಾರ್‌ನಾಯ್ಕ, ತಾಪಂ ಮಾಜಿ ಸದಸ್ಯ ವೆಂಕಟೇಶ್‌ನಾಯ್ಕ, ಮುಖಂಡರಾದ ಜಯನಾಯ್ಕ, ಬಸವರಾಜ್ ಇತರರಿದ್ದರು.