ಹೊಳಲ್ಕೆರೆಯಲ್ಲಿ ನಾಯಕ ಸಮುದಾಯ ಪ್ರತಿಭಟನೆ

ಹೊಳಲ್ಕೆರೆ: ಪರಿಶಿಷ್ಟ ಪಂಗಡದ ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ಆಗ್ರಹಿಸಿ ತಾಲೂಕು ವಾಲ್ಮೀಕಿ ನಾಯಕ ಸಮಾಜದಿಂದ ಸೋಮವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಯಿತು.

ವಾಲ್ಮೀಕಿ ಭವನದ ಬಳಿ ಆರಂಭಗೊಂಡ ಪ್ರತಿಭಟನೆ ಮೆರವಣಿಗೆ ಪ್ರಮುಖ ರಸ್ತೆಗಳ ಮೂಲಕ ತಹಸೀಲ್ದಾರ್ ಕಚೇರಿ ಆವರಣ ತಲುಪಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.

ಸಮಾಜದ ತಾಲೂಕು ಅಧ್ಯಕ್ಷ ಜಿ.ಎಸ್. ಸೂರೇಗೌಡ ಮಾತನಾಡಿ, 2011ರ ಜನಗಣತಿ ಪ್ರಕಾರ ರಾಜ್ಯದಲ್ಲಿ 42.48 ಲಕ್ಷ ಪರಿಶಿಷ್ಟ ಪಂಗಡದ ಜನಸಂಖ್ಯೆ ಇದೆ. ಜನಸಂಖ್ಯೆಗೆ ಅನುಗುಣವಾಗಿ ಮೀಸಲು ಪ್ರಮಾಣ ಹೆಚ್ಚಳವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಿಕ್ಷಣ ಹಾಗೂ ಸರ್ಕಾರಿ ಹುದ್ದೆ ನೇಮಕಾತಿಯಲ್ಲಿ ಸಮುದಾಯಕ್ಕೆ ಕೇವಲ ಶೇ.3ರಷ್ಟು ಮೀಸಲಾತಿ ನಿಗದಿ ಪಡಿಸಿದ್ದಾರೆ. ಈ ಪ್ರಮಾಣವನ್ನು ಶೇ.7ಕ್ಕೆ ಹೆಚ್ಚಿಸಬೇಕು. ಸುಳ್ಳು ಜಾತಿ ಪ್ರಮಾಣ ಪತ್ರ ಪಡೆಯುವರ ವಿರುದ್ಧ ಕಠಿಣ ಕಾನೂನುಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ವಾಲ್ಮೀಕಿ ನಾಯಕ ಸಮಾಜದ ತಾಲೂಕು ಪ್ರಧಾನ ಕಾರ್ಯದರ್ಶಿ ಪಿ.ಹನುಮಂತಪ್ಪ, ಜಿಪಂ ಮಾಜಿ ಸದಸ್ಯರಾದ ಎಸ್.ಜೆ.ರಂಗಸ್ವಾಮಿ, ಲೋಹಿತ್‌ಕುಮಾರ್, ಮುಖಂಡರಾದ ಪೈಲ್ವಾನ್ ರಾಮಣ್ಣ, ಪಿ.ಕಲ್ಲಪ್ಪ ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *