ಗಿಡ ಬೆಳೆಸಿದ್ರೆ ಹತ್ತು ಸಾವಿರ ರೂ.

ಹೊಳಲ್ಕೆರೆ: ಋಷಿ ಸಂಸ್ಕೃತಿ ವಿದ್ಯಾಕೇಂದ್ರದ ಆವರಣದಲ್ಲಿ ಗಿಡ ನೆಟ್ಟು ಉತ್ತಮವಾಗಿ ಪೋಷಿಸಿ ಬೆಳೆಸುವಂತಹ ವಿದ್ಯಾರ್ಥಿಗೆ ಮುಂದಿನ ವರ್ಷದ ಪರಿಸರ ದಿನಾಚರಣೆಯಲ್ಲಿ 10,001 ರೂ. ನಗದು ಬಹುಮಾನ ನೀಡಲಾಗುವುದು ಎಂದು ಕೇಂದ್ರದ ಕಾರ್ಯದರ್ಶಿ ಕುನುಗಲಿ ಷಣ್ಮುಖಪ್ಪ ತಿಳಿಸಿದರು.

ಹೊಳಲ್ಕೆರೆ ತಾಲೂಕು ರಂಗಾಪುರ ಗುರುಕುಲ ಆಶ್ರಮದ ಋಷಿ ಸಂಸ್ಕೃತಿ ವಿದ್ಯಾಕೇಂದ್ರದ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಕ್ಕಳಲ್ಲಿ ಪರಿಸರದ ಅರಿವು ಮೂಡಿಸುವ ಉದ್ದೇಶ ಹಾಗೂ ಅವರಲ್ಲಿ ಚಾಲೆಂಜಿಂಗ್ ಮನೋಭಾವ ಬೆಳೆಸುವ ಉದ್ದೇಶದಿಂದ ಬಹುಮಾನ ಘೋಷಿಸಲಾಗಿದೆ. ಇಡೀ ಶಾಲೆಯಲ್ಲಿ ಯಾರು ಉತ್ತಮ ರೀತಿಯಲ್ಲಿ ಗಿಡವನ್ನು ಬೆಳೆಸುವರು ಎಂಬುದನ್ನು ಪರಿಸರ ತಜ್ಞರು, ಶಿಕ್ಷಕರು ನಿರ್ಧಾರ ಮಾಡುತ್ತಾರೆ. ಆಗ ಅವರಿಗೆ 10,001 ರೂ. ಬಹುಮಾನ ನೀಡಲಾಗುವುದು ಎಂದರು.

ಪರಿಸರವನ್ನು ಉಳಿಸಿ ಬೆಳೆಸಬೇಕಾಗಿರುವುದು ಎಲ್ಲರ ಜವಾಬ್ದಾರಿ. ಅದು ಆದ್ಯ ಕರ್ತವ್ಯವಾಗಬೇಕು. ಆದರೆ, ಇಂದು ಎಲ್ಲರಲ್ಲಿಯೂ ಜಾಗೃತಿ ಮೂಡಿಸಿ, ಪ್ರೋತ್ಸಾಹ ನೀಡುವ ಮೂಲಕ ಒತ್ತಾಯ ಪೂರ್ವಕವಾಗಿ ಪರಿಸರ ಸಂರಕ್ಷಣೆಯಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಬೇಕಾಗಿದೆ. ಇದು ಹೀಗೆ ಮುಂದುವರಿದರೆ ಪ್ರಕೃತಿ ಮುನಿದು ಮಾನವ ಸಂಕುಲ ನಾಶವಾಗುವುದರಲ್ಲಿ ಸಂದೇಹವಿಲ್ಲ ಎಂದು ಎಚ್ಚರಿಸಿದರು.

ಗುರುಕುಲ ಆಶ್ರಮದ ಡಾ.ತಿಪ್ಪಾರೆಡ್ಡಿ ಗುರೂಜಿ ಮಾತನಾಡಿ, ಗುರುಕುಲದಲ್ಲಿ ಈಗಾಗಲೇ ವಸತಿಯುತ ಶಾಲೆ ನಡೆಸುತಿದ್ದು, ಬೆಳಗ್ಗೆ ಸೂರ್ಯೋದಯಕ್ಕೆ ಮುನ್ನವೇ ಮಕ್ಕಳಿಗೆ ವ್ಯಾಯಾಮ, ಧ್ಯಾನದ ಪಠ್ಯಕ್ರಮದ ಅಭ್ಯಾಸ ಮಾಡಿಸಲಾಗುತ್ತಿದೆ. ಹಾಗೆಯೇ ಆಹಾರ ಪದ್ಧತಿ ಕುರಿತು ಮಾಹಿತಿ ನೀಡಲಾಗುತ್ತದೆ ಎಂದರು.

ಗುರುಕುಲ ಆಶ್ರಮದ ಅನಿತಾ ಮಾತಾಜೀ, ಋಷಿ ಗುರುಕುಲಂ ವಿದ್ಯಾಕೇಂದ್ರದ ಸದಸ್ಯರಾದ ವಿಶ್ವನಾಥ್, ಮೃತ್ಯುಂಜಯಪ್ಪ, ಎಂ.ಈ.ಹೊನ್ನೇಶಪ್ಪ, ವಿದ್ಯಾಕೇಂದ್ರದ ಪ್ರಾಂಶುಪಾಲೆ ರೂಪಾ ಇತರರಿದ್ದರು.

Leave a Reply

Your email address will not be published. Required fields are marked *