ಹೊಳಲ್ಕೆರೆ: ಕೆಪಿಸಿಸಿ ಅಧ್ಯಕ್ಷರ ಅಧಿಕಾರ ಪದಗ್ರಹಣ ವೀಕ್ಷಣೆಗೆ ರಾಜ್ಯಾದ್ಯಂತ ಸಿದ್ಧತೆ ನಡೆಯುತ್ತಿದ್ದು, ಕ್ಷೇತ್ರ ವ್ಯಾಪ್ತಿಯಲ್ಲಿ 39 ಸ್ಥಳಗಳಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ತಿಳಿಸಿದರು.
ತಾಲೂಕಿನ ರಾಮಗಿರಿ, ಬಿದರಕೆರೆ, ತುಪ್ಪದಹಳ್ಳಿ, ಮಲ್ಲಾಡಿಹಳ್ಳಿ, ಗಂಗಸಮುದ್ರ, ಹಿರೆಎಮ್ಮಿಗನೂರು, ಆಡನೂರು, ಅಂದನೂರು, ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಪ್ರವಾಸ ಮಾಡಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
ಜುಲೈ 2ರಂದು ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್, ಕಾರ್ಯಾಧ್ಯಕ್ಷರಾಗಿ ಸಲೀ ಅಹ್ಮದ್, ಸತೀಶ್ ಜಾರಕಿಹೊಳಿ, ಈಶ್ವರ್ ಖಂಡ್ರೆ ಪ್ರತಿಜ್ಞಾ ಸ್ವೀಕಾರ ಮಾಡಲಿದ್ದಾರೆ ಎಂದರು.
ಕೇಂದ್ರ, ರಾಜ್ಯ ಸರ್ಕಾರದ ಜನವಿರೋಧಿ ನೀತಿಗಳಿಂದ ಜನ ಭ್ರಮನಿರಸಗೊಂಡಿದ್ದಾರೆ. ಜನರ ಒಲವು ಕಾಂಗ್ರೆಸ್ ಪಕ್ಷದತ್ತ ಬಂದಿದೆ. ಕಾರ್ಯಕರ್ತರು ಬಿಜೆಪಿ ಸರ್ಕಾರದ ಲೋಪ ಹಾಗೂ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದ ವೇಳೆ ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ಮನೆ ಮನೆಗೆ ಹೋಗಿ ತಿಳಿಸಬೇಕು ಎಂದು ಹೇಳಿದರು.