ಹೊಳಲ್ಕೆರೆ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸುವ ನೆಪದಲ್ಲಿ ಪ್ರತಿಪಕ್ಷಗಳು ದೇಶದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿವೆ ಎಂದು ಸಚಿವೆ ಶಶಿಕಲಾ ಜೊಲ್ಲೆ ಆಕ್ರೋಶ ವ್ಯಕ್ತಪಡಿಸಿದರು.
ಹೊಳಲ್ಕೆರೆ ಕೊಟ್ರೆನಂಜಪ್ಪ ಕಾಲೇಜು ಆವರಣದಲ್ಲಿ ಭಾನುವಾರ ಬಿಜೆಪಿ ಆಯೋಜಿಸಿದ್ಧ ಪೌರತ್ವ ತಿದ್ದುಪಡಿ ವಿಧೇಯಕ ಕುರಿತು ಜನಜಾಗೃತಿ, ಮಂಡಲ ಅಧ್ಯಕ್ಷರ ಪದಗ್ರಹಣ ಹಾಗೂ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದರು.
2014ಕ್ಕಿಂತ ಹಿಂದೆ ಭಾರತದಲ್ಲಿ ವಾಸವಿರುವ ವಿದೇಶಿ ಹಿಂದುಗಳಿಗೆ ಪೌರತ್ವ ನೀಡಲು ಕಾಯ್ದೆಗೆ ತಿದ್ದುಪಡಿ ತರಲಾಗಿದೆ ಹೊರತು ಯಾರ ವಿರುದ್ಧವಲ್ಲ. ಆದರೆ, ಪ್ರತಿಪಕ್ಷಗಳು ತಮ್ಮ ಸ್ವಾರ್ಥಕ್ಕಾಗಿ ಸಿಎಎ ಕುರಿತು ಗೊಂದಲ ಹುಟ್ಟಿ ಹಾಕುತ್ತಿವೆ ಎಂದರು.
ಕಾಂಗ್ರೆಸ್ ಆಡಳಿತವಿದ್ದಾಗ ಬಡತನ, ಅನಕ್ಷರತೆ, ಭಿಕ್ಷಾಟನೆಯಂಥ ವಿಚಾರಗಳಿಗಾಗಿ ವಿಶ್ವದ ಗಮನ ಸೆಳೆಯುತ್ತಿತ್ತು. ಅದರೆ, ಮೋದಿ ಸರ್ಕಾರ ಆಧಿಕಾರಕ್ಕೆ ಬಂದ ಮೇಲೆ ದೇಶದ ಸಂಸ್ಕೃತಿ, ಸಂಸ್ಕಾರ, ಆಚಾರ, ವಿಚಾರ, ತಂತ್ರಜ್ಞಾನ, ರಾಜನೀತಿ ಮತ್ತಿತರ ಅಭಿವೃದ್ಧಿ ಪರ ಚಿಂತನೆಗಳಿಂದಾಗಿ ಭಾರತವಿಂದು ವಿಶ್ವ ಗುರು ಸ್ಥಾನಕ್ಕೆ ಬಂದು ನಿಂತಿದೆ ಎಂದು ತಿಳಿಸಿದರು.
ಪಕ್ಷದ ರಾಜ್ಯ ಉಪಾಧ್ಯಕ್ಷ ನಿರ್ಮಲ ಕುಮಾರ್ ಸುರಾನ ಮಾತನಾಡಿ, ಪೌರತ್ವ ಕಾಯ್ದೆ ಜಾರಿಗೆ ಸಂಸತ್‌ನಲ್ಲಿ ಮಾತನಾಡಿದ್ದ ಪ್ರತಿ ಪಕ್ಷಗಳು ಈಗ ವಿರೋಧಿಸುತ್ತಿವೆ ಎಂದು ದೂರಿದರು.
ಮಂಡಲ ಅಧ್ಯಕ್ಷರಿಗೆ ಪಕ್ಷದ ಬಾವುಟ ನೀಡಿ ಮಾತನಾಡಿದ ಶಾಸಕ ಎಂ.ಚಂದ್ರಪ್ಪ, ದೇಶದ ರಕ್ಷಣೆಗಾಗಿ ಹಲವು ಕಾಯ್ದೆಗಳನ್ನು ಜಾರಿಗೆ ತರಲಾಗಿದೆ. ದೇಶ ನಾಶ ಮಾಡಿದ್ದ ಕಾಂಗ್ರೆಸ್ಸಿಗೆ ಕಾಯ್ದೆ ವಿರುದ್ಧ ಮಾತನಾಡಲು ಯಾವುದೇ ಹಕ್ಕಿಲ್ಲ ಎಂದರು.
ಶಾಸಕ ಎಂ.ಚಂದ್ರಪ್ಪರನ್ನು ಮಂತ್ರಿ ಮಾಡಬೇಕೆಂದು ಮುಖ್ಯಮಂತ್ರಿಗೆ ಮನವಿ ಮಾಡುವುದಾಗಿ ಹೇಳಿದ ಸಂಸದ ಎ.ನಾರಾಯಣಸ್ವಾಮಿ, 6 ದಶಕ ಕಳೆದರೂ ಜಮ್ಮು ಕಾಶ್ಮೀರದಲ್ಲಿ ತ್ರಿವರ್ಣ ಧ್ವಜಾರೋಹಣ ನೆರೆವರಿಸಲು ಸಾಧ್ಯವಾಗದ ಕಾಂಗ್ರೆಸ್ಸಿಗೆ, ಸಿಎಎ ವಿರುದ್ಧ ಮಾತನಾಡಲು ನೈತಿಕ ಹಕ್ಕಿಲ್ಲ ಎಂದು ಹೇಳಿದರು.
ಅಧಿಕಾರ ಸ್ವೀಕರಿಸಿದ ನೂತನ ಮಂಡಲ ಅಧ್ಯಕ್ಷ ಎಂ.ಬಿ.ಸಿದ್ದೇಶ್ ಮಾತನಾಡಿ, ಪರಿಣಾಮಕಾರಿಯಾಗಿ ಸಂಘಟನೆ ಮೂಲಕ ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸುವುದಾಗಿ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ನಿಕಟ ಪೂರ್ವ ಅಧ್ಯಕ್ಷ ಮಹೇಶ್ ಮಾತನಾಡಿದರು. ಜಿ.ಎಂ.ಅನಿತ್ ಕುಮಾರ್, ಜಿಲ್ಲಾಧ್ಯಕ್ಷ ಕೆ.ಎಸ್.ನವೀನ್, ಕಾರ್ಯದರ್ಶಿ ಮಲ್ಲಿಕಾರ್ಜುನ್, ಜಿಪಂ ಮಾಜಿ ಅಧ್ಯಕ್ಷ ಎಲ್.ಬಿ.ರಾಜಶೇಖರ್, ಸದಸ್ಯರಾದ ಸುಮಾ ಲಿಂಗರಾಜ್, ಎಂ.ಬಿ.ತಿಪ್ಪೇಸ್ವಾಮಿ, ತಾಪಂ ಸದಸ್ಯರಾದ ಪರಮೇಶ್ವರಪ್ಪ, ಗಿರಿಜಾ ಅಜ್ಜಯ್, ಪಪಂ ಸದಸ್ಯರಾದ ಕೆ.ಸಿ.ರಮೇಶ್, ಎಚ್.ಆರ್.ನಾಗರತ್ನ ವೇದಮೂರ್ತಿ, ಪಿ.ಆರ್.ಮಲ್ಲಿಕಾರ್ಜುನ್, ವಿಜಯ್, ಆಶೋಕ್, ಸುಧಾ ಬಸವರಾಜ್, ಮುಖಂಡರಾದ ಶ್ಯಾಮಲಾ ಶಿವಪ್ರಕಾಶ್, ರತ್ನಮ್ಮ, ರಾಮಗಿರಿ ರಾಮಣ್ಣ, ಈಶ್ವರಪ್ಪ, ಇಂದ್ರಪ್ಪ, ರಾಮಣ್ಣ, ಡಿ.ಸಿ.ಮೋಹನ್, ಬಸವರಾಜ್, ಪ್ರವೀಣ್, ರುದ್ರೇಶ್ ಮತ್ತಿತರರು ಇದ್ದರು. ರೂಪಾ ಸುರೇಶ್ ಕಾರ್ಯಕ್ರಮ ನಿರೂಪಿಸಿದರು.