ಹೊಳಲ್ಕೆರೆ: ದಯವಿಟ್ಟು ಮಾಸ್ಕ್ ಹಾಕಿಕೊಳ್ಳಿ, ಮನೆಯಿಂದ ಅನಗತ್ಯ ಹೊರಗೆ ಬರದೀರಿ ಎಂದು ಕೈಮುಗಿದು ಕೇಳಿದ್ದಾಯ್ತು, ಪೊಲೀಸರು ಲಾಠಿ ಬೀಸಿದ್ದಾಯ್ತು, ಭಸ್ಕಿ ಹೊಡೆಸಲಾಯ್ತು, ಕೊನೆಗೆ ದಂಡ ವಿಧಿಸಿದ್ದೂ ಆಯ್ತು…
ಇದಾವುದಕ್ಕೂ ಮಾತು ಕೇಳದ ಜನರ ವರ್ತನೆ ಕಂಡು ಬೇಸತ್ತ ತಾಲೂಕು ಆಡಳಿತ, ಅಂತಹ ವ್ಯಕ್ತಿಗಳಿಗೆ ರಸ್ತೆ ಮಧ್ಯೆ ನಿಲ್ಲಿಸಿ ಹೂ ಮಾಲೆ ಹಾಕಿ ನೀವು ದೊಡ್ಡವರು ಸ್ವಾಮಿ, ದೇಶ ಸಂಕಷ್ಟಕ್ಕೆ ಸಿಲುಕಿದೆ, ಇಂತಹ ಸಂದರ್ಭ ಮಾರ್ಗಸೂಚಿ ಪಾಲಿಸಿ ನಮಗೆ ಸಹಕರಿಸಿ ಎಂದು ಕೈಮುಗಿದು ಕೇಳಿಕೊಂಡರು.
ಇದರಿಂದ ಒಂದು ರೀತಿ ಮುಜುಗರಕ್ಕೆ ಒಳಗಾದ ಅವರು, ಇನ್ಮುಂದೆ ಇಂತಹ ತಪ್ಪು ಮಾಡೋದಿಲ್ಲ ಎಂದು ಭಾಷೆ ಕೊಟ್ಟು ಕಾಲ್ಕಿತ್ತರು.
ಹೊಳಲ್ಕೆರೆ ಪಟ್ಟಣದಲ್ಲಿ ಗುರುವಾರ, ಶುಕ್ರವಾರ ಕಾರ್ಯಾಚರಣೆಗೆ ಇಳಿದ ತಹಸೀಲ್ದಾರ್ ಕೆ.ನಾಗರಾಜ್ ತಂಡ ಇಂತಹ ವಿಶೇಷ ರೀತಿ ದೃಶ್ಯಕ್ಕೆ ಕಾರಣವಾಯಿತು.
ವಾಹನದಲ್ಲಿ ಹೂ ಮಾಲೆಗಳನ್ನು ಇಟ್ಟುಕೊಂಡಿದ್ದ ತಂಡದ ಸದಸ್ಯರು, ಮಾಸ್ಕ್ ಧರಿಸದೇ ಓಡಾಡುತ್ತಿದ್ದ ವ್ಯಕ್ತಿಗಳನ್ನು ರಸ್ತೆ ಮಧ್ಯೆ ನಿಲ್ಲಿಸಿ ಹೂ ಮಾಲೆ ಹಾಕಿ ಸನ್ಮಾನಿಸಿ, ಇನ್ಮುಂದೆ ಇಂತಹ ತಪ್ಪು ಮಾಡಬೇಡಿ, ಮಾಸ್ಕ್ ಧರಿಸದೇ ಹೊರಗೆ ಬರಬೇಡಿ. ಜತೆಗೆ ಅನಗತ್ಯ ಓಡಾಟಕ್ಕೆ ಸ್ವಯಂ ನಿಯಂತ್ರಣ ಹಾಕಿಕೊಳ್ಳಿ. ದೇಶಕ್ಕಾಗಿ ಸಹಕರಿಸಿ ಎಂದು ಕೈಮುಗಿದು ವಿನಂತಿಸಿಕೊಂಡರು.
ವಿಶೇಷ ರೀತಿಯ ಕಾರ್ಯಾಚರಣೆ ಕಂಡು ಇನ್ನಿತರೆ ನಾಗರಿಕರು ಮಾಸ್ಕ್ ಧರಿಸುವ ಮೂಲಕ ಮುಜುಗರದಿಂದ ತಪ್ಪಿಸಿಕೊಳ್ಳುತ್ತಿದ್ದರು. ಪರಿಣಾಮ ಜನತೆ ಮಾಸ್ಕ್ ಧರಿಸಿ ಓಡಾಡುವ ಸಂಖ್ಯೆ ಪಟ್ಟಣದಲ್ಲಿ ಹೆಚ್ಚಾಗಿದೆ. ಅಷ್ಟರಮಟ್ಟಿಗೆ ಹೂ ಮಾಲೆ ಕಾರ್ಯ ಫಲ ನೀಡಿದೆ.
ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ.ವಾಸಿಂ, ಸದಸ್ಯ ಸೈಯದ್ ಸಜೀಲ್, ಆರೋಗ್ಯಾಧಿಕಾರಿ ಪರಮೇಶ್ವರಪ್ಪ, ಕಂದಾಯ ಶಿರಸ್ತೆದಾರ್ ಪ್ರಶಾಂತ್, ಕಾರ್ಯದರ್ಶಿ ಹರೀಶ್ ಮತ್ತಿತರರು ಇದ್ದರು.
ತಹಸೀಲ್ದಾರ್ ಕೆ.ನಾಗರಾಜ್ ಹೇಳಿಕೆ: ಜನರಲ್ಲಿ ಸ್ವಯಂ ಅರಿವು ಮೂಡಬೇಕು. ಈ ಕಾರಣಕ್ಕೆ ಜಾಗೃತಿ ಮೂಡಿಸಿದೇವು, ದಂಡ, ಭಸ್ಕಿ ವಿವಿಧ ರೀತಿ ಕ್ರಮಕೈಗೊಂಡಿದ್ದೇವು. ಆದರೆ, ಕೆಲ ಜನ ಜಾಗೃತರಾಗಲಿಲ್ಲ. ಕೊನೆಗೆ ಹೂ ಮಾಲೆ ಹಾಕಿದ್ದೇವೆ. ಇದರಿಂದ ಮುಜುಗರಕ್ಕೆ ಒಳಗಾಗಿ ಇನ್ಮುಂದೆ ಈ ರೀತಿ ಮಾಡುವುದಿಲ್ಲ ಎಂದಿದ್ದಾರೆ. ಕರೊನಾ ಮುಕ್ತ ನಾಡಿಗಾಗಿ ಜನ ಸಹಕರಿಸಬೇಕು. ದೈಹಿಕ ಅಂತರ, ಮಾಸ್ಕ್ ಧರಿಸುವುದು ಕರೊನಾ ತಡೆಗೆ ಸದ್ಯಕ್ಕೆ ಇರುವ ಏಕೈಕ ಮಾರ್ಗ.