ಮೀಸಲಾತಿ ಕೇಳುವುದು ಜನರ ಹಕ್ಕು

ಹೊಳಲ್ಕೆರೆ: ಮೀಸಲು ಸೌಲಭ್ಯಕ್ಕಾಗಿ ಸಂಘಟನಾತ್ಮಕ ಹೋರಾಟ ಅನಿವಾರ್ಯ ಎಂದು ಹೊಸದುರ್ಗದ ಕುಂಚಿಟಿಗ ಮಠದ ಶ್ರೀ ಶಾಂತವೀರ ಸ್ವಾಮೀಜಿ ತಿಳಿಸಿದರು.

ಪಟ್ಟಣದ ಸ್ನೇಹ ಸಪ್ತಪದಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ತಮ್ಮ 22ನೇ ಪಟ್ಟಾಭಿಷೇಕ ಮಹೋತ್ಸವ, ಕುಂಚಿಟಿಗರ ಸೇವಾ ಟ್ರಸ್ಟ್ ಉದ್ಘಾಟನೆ, ಪದಗ್ರಹಣ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಮತದಾನ ಸಂವಿಧಾನ ಬದ್ಧ ಹಕ್ಕಾಗಿರುವಂತೆ ಮೀಸಲು ಸೌಲಭ್ಯ ಕೇಳುವುದೂ ನಾಗರಿಕರ ಹಕ್ಕು. ಮೀಸಲಾತಿ ಸರ್ಕಾರದ ಭಿಕ್ಷೆಯಲ್ಲ ಎಂದರು.

ಕುಂಚಿಟಿಗ ಸಮುದಾಯದಲ್ಲಿ ಸಂಘಟನೆ ಕೊರತೆ ಹಿನ್ನೆಲೆಯಲ್ಲಿ ಟ್ರಸ್ಟ್ ಆರಂಭಿಸಲಾಗಿದೆ. ಸಮುದಾಯದ ಸೇವೆಯೇ ಟ್ರಸ್ಟ್‌ನ ಉದ್ದೇಶವಾಗಿದ್ದು, ಪ್ರತಿಯೊಬ್ಬ ಸದಸ್ಯರು ಸೇವಾ ಮನೋಭಾವದಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಕಿವಿಮಾತು ಹೇಳಿದರು.

ಸಮಾಜದ ಉನ್ನತಿಗೆ ಪ್ರತಿಯೊಬ್ಬರೂ ಶಿಕ್ಷಣ ಪಡೆವ ಜತೆ ಆರ್ಥಿಕವಾಗಿ ಸಮರ್ಥರಾಗಬೇಕು. ಮುಖ್ಯವಾಹಿನಿಗೆ ಸೇರಲು ಮೀಸಲು ಅಗತ್ಯವಾಗಿದ್ದು, ಇದಕ್ಕೆ ಸಂಘಟನೆ ಅವಶ್ಯಕ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಎಸ್.ನವೀನ್ ಮಾತನಾಡಿ, ಸಂಘಟನೆ ಅತ್ಯಂತ ಕ್ಲಿಷ್ಟಕರವಾದ ಕಾರ್ಯ. ಶ್ರೀಗಳು ಈ ನಿಟ್ಟಿನಲ್ಲಿ ಸಮರ್ಥರಾಗಿದ್ದು, ಟ್ರಸ್ಟ್ ಸ್ಥಾಪಿಸಿದ್ದಾರೆ. ಅನ್ಯರಿಗೆ ಒಳ್ಳೆಯದು ಮಾಡಲಾಗದಿದ್ದರೂ, ಕೆಟ್ಟದನ್ನು ಬಯಸಬೇಡಿ ಎಂದು ತಿಳಿಸಿದರು.

ಸಮಾಜದ ಪ್ರತಿಭಾವಂತ 50 ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಡಾ.ಹರೀಶ್, ರೈಲ್ವೆ ಅಭಿಯೋಜಕ ಆರ್.ಹನುಮಂತಪ್ಪ, ಶಿಕ್ಷಕ ಪಿ.ಮನೋಹರ್, ಗುತ್ತಿಗೆದಾರ ಬಸವರಾಜ್ ಅವರನ್ನು ಸನ್ಮಾನಿಸಲಾಯಿತು.

ಮಾಜಿ ಸಚಿವ ಎಚ್.ಆಂಜನೇಯ, ಮಾಜಿ ಶಾಸಕ ಪಿ.ರಮೇಶ್, ರಾಷ್ಟ್ರೀಯ ಕುಂಚಿಟಿಗ ಸಮಿತಿ ಟ್ರಸ್ಟ್ ಸಂಘಟನಾ ಕಾರ್ಯದರ್ಶಿ ಬಿ.ಸಿ.ಹನುಮಂತೇಗೌಡ, ಉಪಾಧ್ಯಕ್ಷ ಮಹೇಶ್, ಪ್ರಧಾನ ಕಾರ್ಯದರ್ಶಿ ಆರ್.ಅಶೋಕ್, ಟ್ರಸ್ಟ್ ಅಧ್ಯಕ್ಷ ಟಿ.ಎಸ್.ರಾಜಪ್ಪ, ಗೌರವಾಧ್ಯಕ್ಷ ಜಿ.ಎಚ್.ಶಿವಕುಮಾರ್, ಬಿಜೆಪಿ ಯುವ ಮುಖಂಡ ಎಂ.ಸಿ.ರಘು ಚಂದನ್, ಜಿಪಂ ಮಾಜಿ ಅಧ್ಯಕ್ಷ ಪಿ.ಆರ್.ಶಿವಕುಮಾರ್, ಎಪಿಎಂಸಿ ಅಧ್ಯಕ್ಷ ಅಂಕಳಪ್ಪ, ತಾಪಂ ಸದಸ್ಯ ಮೂಡಲಗಿರಿಯಪ್ಪ ಇತರರಿದ್ದರು.

ಒಗ್ಗೂಡಿ ಹೋರಾಟ ಮಾಡಿ: ತಮಿಳುನಾಡಿನಲ್ಲಿ ಕುಂಚಿಟಿಗ ಸಮುದಾಯ ವರ್ಗ 2ರಲ್ಲಿದೆ. ರಾಜ್ಯದಲ್ಲಿಯೂ ಈ ಸೌಲಭ್ಯ ಪಡೆಯಲು ಒಗ್ಗೂಡಿ ಹೋರಾಡಬೇಕು. ಸಮುದಾಯ ರಾಜಕೀಯ, ಶೈಕ್ಷಣಿಕ, ಸಾಮಾಜಿಕವಾಗಿ ಮುಖ್ಯವಾಹಿಗೆ ಬರಬೇಕು. ಮಕ್ಕಳಿಗೆ ಶಿಕ್ಷಣ ಕೊಡಿಸಲು ಮೊದಲ ಆದ್ಯತೆ ನೀಡಬೇಕು ಎಂದು ಮಾಜಿ ಸಚಿವ ಎಚ್.ಆಂಜನೇಯ ತಿಳಿಸಿದರು.

Leave a Reply

Your email address will not be published. Required fields are marked *