ಹೊಳಲ್ಕೆರೆ: ವಸತಿ ರಹಿತ ಹಾಗೂ ಗುಡಿಸಲಿನಲ್ಲಿ ವಾಸಿಸುವ ಬಡವರಿಗೆ 5 ಲಕ್ಷ ರೂ. ಅನುದಾನದಲ್ಲಿ ಮನೆ ಕಟ್ಟಿಸಿಕೊಡುವ ವಸತಿ ಯೋಜನೆ ಜಾರಿಗೆ ಕೇಂದ್ರ ಸರ್ಕಾರ ಮುಂದಾಗಿದ್ದು, ಕ್ಷೇತ್ರದಲ್ಲಿರುವ ಪ್ರತಿ ವಸತಿ ರಹಿತರಿಗೂ ಸೂರು ದೊರೆಯಲಿದೆ ಎಂದು ಶಾಸಕ ಎಂ.ಚಂದ್ರಪ್ಪ ತಿಳಿಸಿದರು.
ತಾಲೂಕಿನ ಗುಂಡೇರಿ ಗ್ರಾಮದಲ್ಲಿ ಶನಿವಾರ ಸಿಸಿ ರಸ್ತೆ, ಸರ್ಕಾರಿ ಶಾಲಾ ಕೊಠಡಿ ನಿರ್ಮಾಣಕ್ಕೆ ಭೂಮಿಪೂಜೆ ಸಲ್ಲಿಸಿ ಮಾತನಾಡಿದರು.
ಲಾಕ್‌ಡೌನ್‌ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ ಕಾರ್ಮಿಕರಿಗೆ ಧನಸಹಾಯ ನೀಡಲು 2 ಲಕ್ಷ ಕೋಟಿ ರೂ. ನೀಡಿದೆ. ಸರ್ಕಾರಕ್ಕೆ ಆರ್ಥಿಕ ಮೂಲಗಳಿಗೆ ಕೊರತೆ ಉಂಟಾಗಿದ್ದರೂ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಕೊಡಲು ಒತ್ತು ನೀಡಿದೆ. ಚಿಕ್ಕಜಾಜೂರಿನಿಂದ ಎಮ್ಮಿಗನೂರು ಕೆರೆಗೆ ನೀರು ತುಂಬಿಸಲು ಸರ್ಕಾರದ ಒತ್ತಡ ಹಾಕಿ 50 ಲಕ್ಷ ರೂ. ಅನುದಾನ ತರಲಾಗಿದೆ ಎಂದು ಹೇಳಿದರು.
ಬಿಜೆಪಿ ಮುಖಂಡ ಜಿ.ಎಂ.ಸುರೇಶ್, ಗ್ರಾಪಂ ಅಧ್ಯಕ್ಷೆ ವನಜಾಕ್ಷಮ್ಮ, ಮಾಜಿ ಅಧ್ಯಕ್ಷ ಗಿರೀಶ್, ಇಂಜಿನಿಯರ್ ಮಹಾಬಲೇಶ್, ತಿಪ್ಪೇಸ್ವಾಮಿ, ಗುತ್ತಿಗೆದಾರ ಮಾರುತೇಶ್, ಕೆ.ಸಿ.ರಮೇಶ್ ಇತರರಿದ್ದರು.