ಜನೌಷಧಾಲಯದಲ್ಲಿ ಅಧಿಕ ಬೆಲೆಗೆ ಔಷಧ

ಹೊಳಲ್ಕೆರೆ: ಸಾರ್ವಜನಿಕ ಆಸ್ಪತ್ರೆಯ ಜನೌಷಧಾಲಯದಲ್ಲಿ ಅಗತ್ಯ ಔಷಧಿಗಳನ್ನು ನಿಗದಿಗಿಂತ ಹೆಚ್ಚಿನ ಬೆಲೆಗೆ ಮಾರುತ್ತಿರುವ ಬಗ್ಗೆ ಶಾಸಕ ಎಂ. ಚಂದ್ರಪ್ಪ ಅಸಮಾಧಾನ ವ್ಯಕ್ತಪಡಿಸಿದರು.

ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಡವರಿಗೆ ಕಡಿಮೆ ದರದಲ್ಲಿ ಔಷಧ ಲಭ್ಯವಾಗಬೇಕೆಂಬ ಉದ್ದೇಶದಿಂದ ಜನೌಷಧಿ ಕೇಂದ್ರ ತೆರೆಯಲಾಗಿದೆ. ಇಲ್ಲಿ ಮೂ ಲ ಉದ್ದೇಶವೇ ಮರೆತು ಹೋದರೆ ಹೇಗೆ? ಸಾರ್ವಜನಿಕರ ದೂರುಗಳನ್ನು ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಇನ್ನಾದರೂ ಅಧಿಕಾರಿಗಳು ಗಮನ ಹರಿಸಿ, ಅವ್ಯವಸ್ಥೆಯನ್ನು ಸರಿಪಡಿಸಿ ಎಂದು ಸೂಚಿಸಿದರು.

ತಾಲೂಕಿನಲ್ಲಿ ಅಕ್ರಮ ಮದ್ಯ ಮಾರಾಟ ತಡೆಗಟ್ಟಲು ಕೈಗೊಂಡ ಕಾನೂನುಕ್ರಮ, ಶಾಲೆಗಳಲ್ಲಿ ಶುದ್ಧ ಕುಡಿವ ನೀರಿನ ವ್ಯವಸ್ಥೆ ಬಗ್ಗೆ ಅಧಿಕಾರಿಗಳನ್ನು ಶಾಸಕರು ಪ್ರಶ್ನಿಸಿದರು.

ಮಾರ್ಚ್‌ನಿಂದ ಮೇವರೆಗೆ 127 ದಾಳಿ ನಡೆಸಿ 97 ಪ್ರಕರಣ ದಾಖಲಿಸಿ, 3 ದ್ವಿಚಕ್ರ ವಾಹನ ದಾಖಲಿಸಲಾಗಿದೆ. ಮಾಹಿತಿ ಅಥವ ಲಿಖಿತ ದೂರುಗಳಿಗೆ ತಕ್ಷಣ ಕಾನೂನುಕ್ರಮ ಜರುಗಿಸಲಾಗುತ್ತಿದೆ ಎಂದು ಅಬಕಾರಿ ಅಧಿಕಾರಿ ಲತಾ ಉತ್ತರಿಸಿದರು.

ತಾಲೂಕಿನ 67 ಶಾಲೆಗಳಲ್ಲಿ ನೀರಿನ ವ್ಯವಸ್ಥೆ ಇದ್ದು, 21 ಶಾಲೆಗಳಲ್ಲಿ ನೀರಿನ ಸಮಸ್ಯೆ ಇದೆ ಎಂದು ಬಿಸಿಯೂಟ ಯೋಜನೆ ಅಧಿಕಾರಿ ಹನುಮಂತರಾಯಪ್ಪ ಮಾಹಿತಿ ನೀಡಿದರು.

ಸರ್ಕಾರಿ ಸವಲತ್ತು ಮಕ್ಕಳಿಗೆ ದೊರೆಯಬೇಕು. ವಿದ್ಯಾರ್ಥಿವೇತನ ಬಾಕಿ ಇರುವ ಬಗ್ಗೆ ದೂರುಗಳಿವೆ. ವಿಳಂಬಕ್ಕೆ ಕಾರಣವೇನು ಎಂದು ಕೇಳಿದರು.

ತಾಲೂಕಿನ 424 ವಿದ್ಯಾರ್ಥಿಗಳ ವಿದ್ಯಾರ್ಥಿವೇತನ ಬಾಕಿ ಇದೆ. ಬಿಇಒ ಅವರೊಂದಿಗೆ ಚರ್ಚಿಸಿ ವಿತರಿಸುವುದಾಗಿ ಬಿಸಿಎಂ ಅಧಿಕಾರಿ ಶಿವಮೂರ್ತಿ ತಿಳಿಸಿದರು.

ಕೆರೆಗಳ ಹೂಳೆತ್ತಿದರೆ ಅಪ್ಪರ್ ಭದ್ರಾ ನೀರು ಭರ್ತಿ ಮಾಡಲು ಅನುಕೂಲವಾಗುತ್ತದೆ. ಕೆರೆ ಒತ್ತುವರಿ ಬಗ್ಗೆ ಪಟ್ಟಿ ಸಿದ್ಧಪಡಿಸಿ, ಭೂ ಕಬಳಿಕೆದಾರರ ವಿರುದ್ಧ ಪ್ರಕರಣ ದಾಖಲಿಸಬೇಕು. ಕೆರೆಗಳ ಸರ್ವೆ ಹಾಗೂ ಬೇಲಿ ನಿರ್ಮಾಣಕ್ಕೆ 2 ಕೋಟಿ ರೂ. ಅನುದಾನವಿದೆ. ಅದನ್ನು ಸಮರ್ಪಕವಾಗಿ ಬಳಸಬೇಕು ಎಂದು ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು.

ಕಸಬಾ ಹಾಗೂ ಬಿ.ದುರ್ಗ ಹೋಬಳಿಯಲ್ಲಿ ತಾಡಪಾಲಗಳ ವಿತರಣೆ ಪೂರ್ಣಗೊಂಡಿದೆ. ಎರಡು ದಿನಗಳಲ್ಲಿ ತಾಳ್ಯ ಹೋಬಳಿಯಲ್ಲಿ ವಿತರಣೆ ನಡೆಯಲಿದೆ ಎಂದು ಕೃಷಿ ಅಧಿಕಾರಿ ಭಾರತಮ್ಮ ತಿಳಿಸಿದರು.

ತಾಪಂ ಅಧ್ಯಕ್ಷೆ ಸುಜಾತ ಧನಂಜಯನಾಯ್ಕ, ಜಿಪಂ ಸದಸ್ಯರಾದ ತಿಪ್ಪೇಸ್ವಾಮಿ, ಮಹೇಶ್ವರಪ್ಪ, ಇಒ ಮಹಾಂತೇಶ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *