ಹುಕ್ಕೇರಿ: ಪಿಕೆಪಿಎಸ್ ಉಳಿಯಲು ರಾಜಕೀಯ ರಹಿತ ಚಿಂತನೆ ಅಗತ್ಯ

ಹುಕ್ಕೇರಿ: ತಾಲೂಕಿನ ಬೆಳವಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಕಟ್ಟಡ ಮತ್ತು ಪ್ರಸಕ್ತ ಸಾಲಿನ ಪತ್ತು ವಿತರಣೆ ಸಮಾರಂಭ ಶುಕ್ರವಾರ ಜರುಗಿತು.

ನೂತನ ಕಟ್ಟಡ ಮತ್ತು ಸಮಾರಂಭ ಉದ್ಘಾಟಿಸಿ ಮಾತನಾಡಿದ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಮಾಜಿ ಸಂಸದ ರಮೇಶ ಕತ್ತಿ, ರಾಜ್ಯ ಸರ್ಕಾರ ಸಾಲಮನ್ನಾ ಸರಳೀಕರಣ ಮಾಡುವ ಮೂಲಕ ರೈತರಿಗೆ ಲಾಭ ದೊರಕಿಸಿಕೊಡುವಂತೆ ಆಗ್ರಹಿಸಿದರು. ಬಿ.ಎಸ್.ಯಡಿಯೂರಪ್ಪ, ಜಗದೀಶ ಶೆಟ್ಟರ್ ಮತ್ತು ಸಿದ್ದರಾಮಯ್ಯ ಅವರು ಯಾವ ಷರತ್ತೂ ವಿಧಿಸದೆ ನೇರವಾಗಿ ಸಾಲಮನ್ನಾ ಘೋಷಣೆ ಮಾಡುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಟ್ಟಿದ್ದರು ಎಂದರು.

ಬೆಳವಿಯ ಪಿಕೆಪಿಎಸ್ ಹಲವಾರು ಏಳು ಬೀಳುಗಳ ಮಧ್ಯೆ 75 ವರ್ಷ ಪೂರೈಸಿದ್ದು, ಕೆಲ ಬಾರಿ ಮುಚ್ಚುವ ಹಂತಕ್ಕೆ ತಲುಪಿದ್ದು ವಿಷಾದಕರ. ಈಗಿನ ಆಡಳಿತ ಮಂಡಳಿ ಪಾರದರ್ಶಕ ಹಾಗೂ ನಿಷ್ಪಕ್ಷಪಾತ ಕಾರ್ಯದಿಂದ ಗ್ರಾಮದ ಸಾಕಷ್ಟು ರೈತರಿಗೆ ಸೌಲಭ್ಯ ನೀಡಿ 36 ಲಕ್ಷ ರೂ. ಲಾಭ ಗಳಿಸಿದೆ. ಸಂಘದ ಹಿತ ಕಾಪಾಡಲು ರಾಜಕೀಯ ರಹಿತ ಚಿಂತನೆ ಅವಶ್ಯ ಎಂದರು.

ನಾಮಫಲಕ ಅನಾವರಣಗೊಳಿಸಿ ಮಾತನಾಡಿದ ಡಿ.ವೈ.ಎಸ್.ಪಿ ಡಿ.ಟಿ.ಪ್ರಭು, ರೈತರ ಜೀವನಾಡಿಯಾಗಿರುವ ಸಹಕಾರಿ ಸಂಸ್ಥೆಗಳನ್ನು ಉಳಿಸಲು ಪಡೆದ ಸಾಲವನ್ನು ಸದುದ್ದೇಶಕ್ಕೆ ಬಳಸಿಕೊಂಡು ಪ್ರಾಮಾಣಿಕ ವ್ಯವಹಾರ ನಡೆಸಬೇಕು ಎಂದರು.

5 ವರ್ಷದಲ್ಲಿ 1100 ರೈತರನ್ನು ಸದಸ್ಯರನ್ನಾಗಿ ಮಾಡಿಕೊಂಡು 2 ಕೋಟಿ 88 ಲಕ್ಷ 25 ಸಾವಿರ ರೂ. ಬೆಳೆಸಾಲ ವಿತರಿಸಲಾಗಿತ್ತು. ಸಾಲಮನ್ನಾದಲ್ಲಿ 791 ಸದಸ್ಯರ 2 ಕೋಟಿ 29 ಲಕ್ಷ 77 ಸಾವಿರ ರೂ. ಕೊಡುಗೆ ದೊರಕಿದೆ.36 ಲಕ್ಷ 18 ಸಾವಿರದಾ 884 ರೂ. ಲಾಭ ಗಳಿಸಿದೆ. ಇದೀಗ 5.20 ಕೋಟಿ ರೂ.ಸಾಲ ವಿತರಿಸುತ್ತಿದ್ದೇವೆ ಎಂದು ಸಂಘದ ಉಪಾಧ್ಯಕ್ಷ ಅಪ್ಪಾಸಾಹೇಬ ಎಂ.ಸಾರಾಪುರೆ ಹೇಳಿದರು.
ಸಿದ್ಧಾರೂಢ ಮಠದ ಮೃತ್ಯುಂಜಯ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಡಾ.ಶಿವಕುಮಾರ ಸ್ವಾಮೀಜಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ನಂತರ ಅತಿಥಿಗಳು, ಆಡಳಿತ ಮಂಡಳಿ ಸದಸ್ಯರು ಹಾಗೂ ಗಣ್ಯರನ್ನು ಸತ್ಕರಿಸಲಾಯಿತು. ಗೋಕಾಕದ ಕಲಾವಿದ ಗಿ.ಕೆ.ಕಾಡೇಶಕುಮಾರ, ಗ್ರಾಮದ ಡಿ.ಆರ್.ನದ್ಾ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

ಸಿ.ಪಿ.ಐ ಸುಂದರೇಶ ಹೊಳೆನ್ನವರ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಂ.ಎಸ್.ಪಟಗುಂದಿ, ಸಂಗಮ ಶುಗರ್ಸ್‌ ನಿರ್ದೇಶಕ ಬಿ.ಬಿ.ಪಾಟೀಲ,ಎ.ಪಿ.ಎಂ.ಸಿ ಅಧ್ಯಕ್ಷ ಕಲಗೌಡ ಪಾಟೀಲ, ಮಲ್ಲಪ್ಪ ನಾಯಿಕ, ರಾಮಣ್ಣ ತೇರದಾಳಿ, ಎಲ್.ಜಿ.ನಾಯಿಕ, ಗ್ರಾ.ಪಂ ಅಧ್ಯಕ್ಷ ಥಳೆಪ್ಪ ದಂಡಿ, ಡಿಸಿಸಿ ಬ್ಯಾಂಕ್ ಟಿಸಿಒ ಎಸ್.ಬಿ.ಸನದಿ, ಸಂಘದ ಆಡಳಿತ ಮಂಡಳಿ ಮತ್ತು ಗ್ರಾಪಂ ಸದಸ್ಯರು, ಅಧಿಕಾರಿಗಳು ಇದ್ದರು. ಭೀಮಣ್ಣ ಖೇಮಾಳಿ ಸ್ವಾಗತಿಸಿ,ವಂದಿಸಿದರು. ಎಸ್.ಬಿ.ಅಂಗಡಿ ನಿರೂಪಿಸಿದರು.

ಬೆಳವಿ ಗ್ರಾಮವನ್ನು ಸಂಪೂರ್ಣ ಸಾರಾಯಿ ಮುಕ್ತವಾಗಿಸಲು ನಿರ್ಧರಿಸಿದ್ದು, ಜ. 30ರವರೆಗೆ ಮದ್ಯ ವ್ಯಸನಿಗಳು ದುಶ್ಚಟ ತ್ಯಜಿಸಿ ಸುಧಾರಿಸಬೇಕು. ಇಲ್ಲವಾದಲ್ಲಿ ಗ್ರಾಮದ ಮಹಿಳೆಯರು, ಕತ್ತಿ ಸಹೋದರರ ಮತ್ತು ಪೊಲೀಸ್ ಇಲಾಖೆಯ ಬೆಂಬಲದೊಂದಿಗೆ ಕ್ರಮ ಕೈಗೊಳ್ಳುತ್ತೇವೆ.
ಬಾಳಾಸಾಹೇಬ ನಿಂ.ನಾಯಿಕ ಅಧ್ಯಕ್ಷ ಪಿಕೆಪಿಎಸ್ ಬೆಳವಿ