More

    ಹೊದಿಗೆರೆಯಲ್ಲಿ ಷಹಾಜಿ ರಾಜೆ ಭೋಸ್ಲೆ ಪುಣ್ಯಾರಾಧನೆ 23ಕ್ಕೆ

    ದಾವಣಗೆರೆ: ಛತ್ರಪತಿ ಶಿವಾಜಿ ಮಹಾರಾಜರ ತಂದೆ ಷಹಾಜಿ ರಾಜೆ ಭೋಸ್ಲೆ ಅವರ 356 ನೇ ಪುಣ್ಯಾರಾಧನೆ ಜ. 23 ರಂದು ಚನ್ನಗಿರಿ ತಾಲೂಕಿನ ಹೊದಿಗೆರೆಯಲ್ಲಿ ನಡೆಯಲಿದೆ.

    ಸಮಾರಂಭದಲ್ಲಿ ಷಹಾಜಿ ರಾಜೆ ಭೋಸ್ಲೆ ಅವರ ವಂಶಸ್ಥ ಶಿವಾಜಿರಾಜ ಟಿ. ಭೋಸ್ಲೆ ಭಾಗವಹಿಸುತ್ತಿರುವುದು ವಿಶೇಷ ಎಂದು ಶ್ರೀ ಷಹಾಜಿ ರಾಜೆ ಭೋಸ್ಲೆಯವರ ಸ್ಮಾರಕ ಮತ್ತು ಅಭಿವೃದ್ಧಿ ಸೇವಾ ಸಮಿತಿ ಅಧ್ಯಕ್ಷ ವೈ. ಮಲ್ಲೇಶ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಅಂದು ಬೆಳಗ್ಗೆ 11ಕ್ಕೆ ನಡೆಯುವ ಸಮಾರಂಭದಲ್ಲಿ ಬೆಂಗಳೂರಿನ ಭವಾನಿ ಪೀಠದ ಶ್ರೀ ಮಂಜುನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಸಂಸದ ಜಿ.ಎಂ. ಸಿದ್ದೇಶ್ವರ, ಮಾಜಿ ಸಚಿವ ಪಿ.ಜಿ. ಆರ್. ಸಿಂಧ್ಯಾ, ಶಾಸಕ ಮಾಡಾಳು ವಿರೂಪಾಕ್ಷಪ್ಪ ಇನ್ನಿತರರು ಭಾಗವಹಿಸುವರು.

    ಷಹಾಜಿ ರಾಜೆ ಭೋಸ್ಲೆ ಅವರ ಸಮಾಧಿ ಇರುವ ಹೊದಿಗೆರೆಯಲ್ಲಿ ಪುರಾತತ್ವ ಇಲಾಖೆ ಮೂಲಕ ಶುದ್ಧ ಕುಡಿವ ನೀರಿನ ವ್ಯವಸ್ಥೆ ಮಾಡಲಾಗಿದೆ. ಸಮಾಧಿಯನ್ನು ಅಭಿವೃದ್ಧಿ ಪಡಿಸುವ ಮೂಲಕ ಪ್ರವಾಸಿ ತಾಣವನ್ನಾಗಿ ಮಾಡುವಂತೆ ಪ್ರವಾಸೋದ್ಯಮ ಇಲಾಖೆ ಸಚಿವ ಸಿ.ಟಿ. ರವಿ ಅವರಿಗೆ ಮನವಿ ಮಾಡಲಾಗಿದೆ. ಜಾಗದ ಕೊರತೆ ಕಾರಣ ವಾಪಸಾಗಿದ್ದ 2.5 ಕೋಟಿ ರೂ. ಅನುದಾನ ಮರಳಿ ಪಡೆಯಲು ಪ್ರಯತ್ನ ನಡೆದಿದೆ ಎಂದು ತಿಳಿಸಿದರು.

    ಪ್ರವರ್ಗ-3 ಬಿಯಲ್ಲಿರುವ ಕ್ಷತ್ರಿಯ ಮರಾಠ ಸಮಾಜವನ್ನು ಪ್ರವರ್ಗ-2 ಎ ಗೆ ಸೇರಿಸಬೇಕೆಂಬುದು ಹಳೆಯ ಬೇಡಿಕೆ. ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಸಮಾಜದ ಬೇಡಿಕೆ ಈಡೇರಿಸುವುದಾಗಿ ಬಿ.ಎಸ್. ಯಡಿಯೂರಪ್ಪ ಭರವಸೆ ನೀಡಿದ್ದರು. ಅನೇಕ ಕಾರಣಗಳಿಂದ ಸಾಧ್ಯವಾಗಿಲ್ಲ. ಶಿವಾಜಿ ಕ್ಷತ್ರಿಯ ಪ್ರಾಧಿಕಾರ ಸ್ಥಾಪಿಸಬೇಕೆಂದು ಸಮಾರಂಭದಲ್ಲಿ ಸರ್ಕಾರಕ್ಕೆ ಒತ್ತಾಯ ಮಾಡಲಾಗುವುದು ಎಂದರು.

    ಮುಖಂಡ ಅಜ್ಜಪ್ಪ ಪವಾರ್ ಮಾತನಾಡಿ, ದಾವಣಗೆರೆ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಸ್ಥಾನ ಸಮೀಪದ ಶಿವಾಜಿ ವೃತ್ತದಲ್ಲಿ ಶಿವಾಜಿ ಪ್ರತಿಮೆ ಸ್ಥಾಪಿಸಿ 9 ವರ್ಷ ಕಳೆದ ಹಿನ್ನೆಲೆಯಲ್ಲಿ ಜ. 21ರಂದು ವಾರ್ಷಿಕೋತ್ಸವ ಹಮ್ಮಿಕೊಳ್ಳಲಾಗಿದೆ. ಶಿವಾಜಿ ಮಹಾರಾಜರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಸಿಹಿ ಹಂಚಲಾಗುವುದು ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts