ಇಂದಿನಿಂದ ಹಾಕಿ ವಿಶ್ವಕಪ್

ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಸುಮಾರು 47 ವರ್ಷಗಳ ಇತಿಹಾಸವಿರುವ ಪುರುಷರ ಪ್ರತಿಷ್ಠಿತ ಹಾಕಿ ವಿಶ್ವಕಪ್ ಟೂರ್ನಿಗೆ ಕಳಿಂಗಾ ಸ್ಟೇಡಿಯಂನಲ್ಲಿ ಬುಧವಾರ ಚಾಲನೆ ಸಿಗಲಿದೆ. 14ನೇ ಆವೃತ್ತಿಯ ಟೂರ್ನಿಗೆ ಆತಿಥ್ಯವಹಿಸಿಕೊಂಡಿರುವ 1 ಬಾರಿಯ ಚಾಂಪಿಯನ್ ಭಾರತ ತವರು ಅಭಿಮಾನಿಗಳ ಬೆಂಬಲದೊಂದಿಗೆ ಕಣಕ್ಕಿಳಿಯಲಿದೆ. ಭಾರತದ ಆತಿಥ್ಯದಲ್ಲಿ 8 ವರ್ಷಗಳ ನಂತರ ಮೊದಲ ಬಾರಿ ಮತ್ತು ಒಟ್ಟಾರೆ 3ನೇ ಸಲ ನಡೆಯಲಿರುವ ಟೂರ್ನಿಯಲ್ಲಿ ಒಟ್ಟು 16 ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿವೆ.

ಭುವನೇಶ್ವರ: ಹಾಲಿ ವರ್ಷದಲ್ಲಿ ಭಾರತ ಇತ್ತೀಚೆಗಷ್ಟೆ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕ್ ಜತೆ ಜಂಟಿ ಚಾಂಪಿಯನ್ ಆಗಿದ್ದು ಬಿಟ್ಟರೆ ಖುಷಿ ಕಂಡಿದ್ದು ಕಡಿಮೆ. 1975ರಲ್ಲಿ ಮಲೇಷ್ಯಾದಲ್ಲಿ ಅಜಿತ್​ಪಾಲ್ ಸಿಂಗ್ ಸಾರಥ್ಯದಲ್ಲಿ ಚೊಚ್ಚಲ ಹಾಗೂ ಕೊನೇ ಬಾರಿ ವಿಶ್ವಕಪ್ ಚಾಂಪಿಯನ್ ಆಗಿದ್ದ ಭಾರತ ಆ ನಂತರ ಕಣಕ್ಕಿಳಿದ ಎಲ್ಲಾ ಆವೃತ್ತಿಗಳಲ್ಲಿ ನಿರಾಸೆ ಕಂಡಿದ್ದೆ ಹೆಚ್ಚು. ಅಲ್ಲದೆ ಇತ್ತೀಚೆಗೆ ಏಷ್ಯನ್ ಗೇಮ್್ಸ ವೈಫಲ್ಯತೆ ಕಂಚು ಪದಕದ ತೃಪ್ತಿ, ನಿರಾಸೆಯ ಪದಕ ರಹಿತ ಕಾಮನ್ವೆಲ್ತ್ ಗೇಮ್್ಸ ಕೂಟ ಇಂಥ ಏಳು-ಬೀಳುಗಳ ನಡುವೆ ಭಾರತ ಇದೀಗ ಮತ್ತೆ ಪ್ರತಿಷ್ಠಿತ ವಿಶ್ವಕಪ್ ಸೆಣಸಾಟಕ್ಕೆ ಸಜ್ಜಾಗಿದೆ. 43 ವರ್ಷಗಳಿಂದ ವಿಶ್ವಕಪ್ ಪದಕವಿಲ್ಲದ ಬರ ನೀಗಿಸುವ ಸುವರ್ಣಾವಕಾಶ, ಗುರಿ ಇದೀಗ ಭಾರತಕ್ಕಿದೆ.

ಬಿ ಗುಂಪಿನಲ್ಲಿ ವಿಶ್ವ ನಂ.5 ಭಾರತ ಮೊದಲ ಪಂದ್ಯದಲ್ಲಿ ಬುಧವಾರ ರ್ಯಾಂಕಿಂಗ್​ನಲ್ಲಿ ತನಗಿಂತ 10 ಸ್ಥಾನ ಕೆಳಗಿರುವ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸುವ ಮೂಲಕ ಅಭಿಯಾನ ಆರಂಭಿಸಲಿದೆ. ದಿನದ ಇನ್ನೊಂದು ಪಂದ್ಯದಲ್ಲಿ ವಿಶ್ವ ನಂ.3 ಬೆಲ್ಜಿಯಂ ತಂಡ ವಿಶ್ವ ನಂ.11 ಕೆನಡಾವನ್ನು ಎದುರಿಸಲಿದೆ. ಹೊಸ ಕೋಚ್ ಹರೇಂದ್ರ ಸಿಂಗ್​ಗೆ ಅನುಭವಿ ಹಾಗೂ ಯುವ ಪಡೆ ಹೊಂದಿರುವ ತಂಡದೊಂದಿಗೆ ಭಾರತವನ್ನು ಯಶಸ್ಸಿನೆಡೆಗೆ ಕೊಂಡೊಯ್ಯುವ ಜವಾಬ್ದಾರಿಯಿದೆ. ಜೂನಿಯರ್ ತಂಡಕ್ಕೆ ವಿಶ್ವಕಪ್ ಸ್ವರ್ಣ ಪದಕ ಗೆಲ್ಲಿಸಿಕೊಟ್ಟಿದ್ದ ಹರೇಂದ್ರ ಸಿಂಗ್ ಈ ವರ್ಷ ಮೇ ತಿಂಗಳಲ್ಲಿ ಸೀನಿಯರ್ ತಂಡಕ್ಕೆ ಕೋಚ್ ಆದ ನಂತರ ಭಾರತ ಆಟದ ಶೈಲಿಯಲ್ಲಿ ಆಕ್ರಮಣಕಾರಿ ನಿರ್ವಹಣೆಯ ಸಾಮರ್ಥ್ಯ ಹೆಚ್ಚಾದರೂ ದೊಡ್ಡ ಮಟ್ಟದಲ್ಲಿ ಸಂಭ್ರಮಿಸುವ ಪದಕ ಸಿಕ್ಕಿಲ್ಲ.

1971, 1973 ಮತ್ತು 1975ರಲ್ಲಿ ಮೊದಲ ಮೂರು ಆವೃತ್ತಿಗಳಲ್ಲಿ ಕ್ರಮವಾಗಿ ಕಂಚು, ಬೆಳ್ಳಿ ಮತ್ತು ಚಿನ್ನ ಗೆದ್ದು ಹಂತ ಹಂತವಾಗಿ ಸುಧಾರಿಸಿದ್ದ ಭಾರತ ‘ಹಾಕಿ ಪ್ರಾಬಲ್ಯ’ ನಂತರ ದಿಢೀರ್ ಕುಸಿಯಿತು. ಆದರೆ ತವರಿನಲ್ಲಿ 1982ರಲ್ಲಿ ನಡೆದಿದ್ದ ಆವೃತ್ತಿಯಲ್ಲಿ 5ನೇ ಸ್ಥಾನ ಪಡೆದಿತ್ತು. ಈ ಬಾರಿ ಹೊಸ ಇತಿಹಾಸ ರಚಿಸುವ ಇರಾದೆಯಲ್ಲಿರುವ ಭಾರತಕ್ಕೆ ಟೂರ್ನಿಯಲ್ಲಿ ವಿಶ್ವದ ಕ್ರಮವಾಗಿ ಅಗ್ರ 5 ತಂಡಗಳಾದ ಕೊನೇ 2 ಆವೃತ್ತಿಯ ಚಾಂಪಿಯನ್ ಆಸ್ಟ್ರೇಲಿಯಾ, ಅರ್ಜೆಂಟೀನಾ, ಬೆಲ್ಜಿಯಂ ಮತ್ತು ನೆದರ್ಲೆಂಡ್ಸ್ ತಂಡಗಳ ಕಠಿಣ ಸವಾಲುಗಳಿವೆ. ಆರ್ಥಿಕ ಸಮಸ್ಯೆಯಿಂದ ಕೊನೇ ಕ್ಷಣದಲ್ಲಿ ಟೂರ್ನಿಯಿಂದ ಹಿಂದೆ ಸರಿಯುವ ಹಂತದಲ್ಲಿದ್ದ 4 ಬಾರಿಯ ಚಾಂಪಿಯನ್ ಪಾಕಿಸ್ತಾನ ಕೂಡ ಕಣದಲ್ಲಿದೆ.-ಏಜೆನ್ಸೀಸ್

ಭಾರತ ಈ ಬಾರಿ ಪ್ರಮುಖ ಆಟಗಾರರ ಗಾಯದ ಹಿನ್ನಡೆಯೊಂದಿಗೆ ಆಡಲಿದೆ. ಕನ್ನಡಿಗ ಎಸ್​ವಿ ಸುನೀಲ್, ಡ್ರಾ್ಯಗ್ ಫ್ಲಿಕರ್ ರೂಪಿಂದರ್ ಪಾಲ್ ಸಿಂಗ್ ಅಲಭ್ಯರಾದರೆ, ವಿಶ್ವಕಪ್ ಆಡಿರುವ 5 ಅನುಭವಿಗಳು ತಂಡದ ಪ್ರಮುಖ ಬಲ. ಗೋಲ್ ಕೀಪರ್ ಪಿಆರ್ ಶ್ರೀಜೇಶ್, ನಾಯಕ ಮನ್​ಪ್ರೀತ್ ಸಿಂಗ್, ಹರ್ವನ್​ಪ್ರೀತ್ ಸಿಂಗ್, ಆಕಾಶ್​ದೀಪ್ ಸಿಂಗ್, ಬಿರೇಂದ್ರ ಲಾಕ್ರಾ ಜವಾಬ್ದಾರಿ ತೋರಬೇಕು. ನಾಕೌಟ್ ಪಂದ್ಯಗಳಲ್ಲಿ ಒತ್ತಡವನ್ನು ಕಡಿಮೆ ಮಾಡಿಕೊಂಡರೆ ತಂಡಕ್ಕೆ ಯಶಸ್ಸು ಸಿಗಲಿದೆ. ಭಾರತ 2ನೇ ಪಂದ್ಯದಲ್ಲಿ ಕಠಿಣ ಎದುರಾಳಿ ಬೆಲ್ಜಿಯಂ ಅನ್ನು ಸೋಲಿಸಿದರೆ ನೇರವಾಗಿ ಕ್ವಾರ್ಟರ್ ಫೈನಲ್​ಗೇರುವ ಅವಕಾಶವಿದ್ದು, ಸೋತರೆ ಕ್ರಾಸ್ ಒವರ್ ಪಂದ್ಯದಲ್ಲಿ ಆಡಬೇಕಾದ ಒತ್ತಡ ಎದುರಾಗಬಹುದು.

ಕಣದಲ್ಲಿರುವ ತಂಡಗಳು

  • ಎ: ಅರ್ಜೆಂಟೀನಾ, ನ್ಯೂಜಿಲೆಂಡ್, ಸ್ಪೇನ್, ಫ್ರಾನ್ಸ್.
  • ಬಿ: ಆಸ್ಟ್ರೇಲಿಯಾ, ಇಂಗ್ಲೆಂಡ್, ಐರ್ಲೆಂಡ್, ಚೀನಾ
  • ಸಿ: ಬೆಲ್ಜಿಯಂ, ಭಾರತ, ಕೆನಡ, ದಕ್ಷಿಣ ಆಫ್ರಿಕಾ
  • ಡಿ: ನೆದರ್ಲೆಂಡ್ಸ್, ಜರ್ಮನಿ, ಮಲೇಷ್ಯಾ, ಪಾಕಿಸ್ತಾನ.

ಟೂರ್ನಿ ಮಾದರಿ

ಎ,ಬಿ,ಸಿ ಮತ್ತು ಡಿ ಎಂಬ 4 ಗುಂಪುಗಳಲ್ಲಿ ತಲಾ 4 ಸೇರಿದಂತೆ ಒಟ್ಟು 16 ತಂಡಗಳು ಕಣಕ್ಕಿಳಿಯಲಿವೆ. ಪ್ರತಿ ತಂಡ ಆಯಾ ಗುಂಪಿನ ಎಲ್ಲಾ ತಂಡಗಳೊಂದಿಗೆ ಸೇರಿದಂತೆ ಲೀಗ್​ನಲ್ಲಿ ತಲಾ 3 ಪಂದ್ಯಗಳನ್ನಾಡಲಿವೆ. 4 ಗುಂಪಿನಲ್ಲಿ ಅಗ್ರ ಸ್ಥಾನ ಬರುವ ತಂಡಗಳು ಕ್ವಾರ್ಟರ್ ಫೈನಲ್​ಗೆ ಲಗ್ಗೆ ಇಡಲಿವೆ. ಇನ್ನು ಎಲ್ಲಾ ಗುಂಪಿನ 2 ಮತ್ತು 3ನೇ ಸ್ಥಾನ ಪಡೆಯುವ ತಂಡಗಳಿಗೆ ಮತ್ತೊಂದು ಅವಕಾಶವಾಗಿರುವ ಕ್ರಾಸ್ ಓವರ್​ನಲ್ಲಿ ತಲಾ ಒಂದು ಪಂದ್ಯ ಆಡಲಿದೆ. ಎ2-ಬಿ3, ಬಿ2-ಎ3, ಸಿ2-ಡಿ3 ಮತ್ತು ಡಿ2-ಸಿ3 ತಂಡಗಳ ನಡುವೆ ಈ ಪಂದ್ಯ ನಡೆಯಲಿದ್ದು, ಇಲ್ಲಿ ಗೆದ್ದವರು ಅಂತಿಮ 8ರ ಘಟ್ಟಕ್ಕೇರಲಿದ್ದಾರೆ.

ಭಾರತ ತಂಡ

ಗೋಲ್ ಕೀಪರ್: ಪಿಆರ್ ಶ್ರೀಜೇಶ್, ಕೃಷ್ಣ ಬಹದ್ದೂರ್ ಪಾಠಕ್. ಡಿಫೆಂಡರ್ಸ್: ಹರ್ವನ್​ಪ್ರೀತ್ ಸಿಂಗ್, ಬೀರೇಂದ್ರ ಲಾಕ್ರಾ, ವರುಣ್ ಕುಮಾರ್, ಕೊಥಜಿತ್ ಸಿಂಗ್, ಸುರೇಂದ್ರ ಕುಮಾರ್, ಅಮಿತ್ ರೋಹಿದಾಸ್. ಮಿಡ್​ಫೀಲ್ಡರ್ಸ್: ಮನ್​ಪ್ರೀತ್ ಸಿಂಗ್(ನಾಯಕ), ಚಿಂಗ್ಲೆನ್ಸನಾ ಸಿಂಗ್(ಉಪ ನಾಯಕ), ನೀಲಕಂಠ ಶರ್ಮ, ಹಾರ್ದಿಕ್ ಸಿಂಗ್, ಸುಮಿತ್.

ಫಾರ್ವರ್ಡ್ಸ್: ಆಕಾಶ್​ದೀಪ್ ಸಿಂಗ್, ಮಂದೀಪ್ ಸಿಂಗ್, ದಿಲ್​ಪ್ರೀತ್ ಸಿಂಗ್, ಲಲಿತ್ ಕುಮಾರ್ ಉಪಾಧ್ಯಾಯ, ಸಿಮ್ರನ್​ಜೀತ್ ಸಿಂಗ್.