ಶ್ರವಣಬೆಳಗೊಳ: ಬಾಲ್ಯದಿಂದಲೇ ಕ್ರೀಡಾ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳಲು ಶಾಲಾ ಹಂತದ ಕ್ರೀಡಾಕೂಟ ಸಹಕಾರಿಯಾಗಿದ್ದು, ಗ್ರಾಮೀಣ ಕ್ರೀಡಾ ಪ್ರತಿಭೆಗಳನ್ನು ಪತ್ತೆಹಚ್ಚಿ ಮುನ್ನೆಲೆಗೆ ತರುವಲ್ಲಿ ಹೋಬಳಿ ಮಟ್ಟದ ಕ್ರೀಡೆಗಳು ಸಹಕಾರಿ ಎಂದು ಕನ್ನಡ ಸಾಹಿತ್ಯಪರಿಷತ್ ತಾಲೂಕು ಅಧ್ಯಕ್ಷ ಹಡೆನಹಳ್ಳಿ ಲೋಕೇಶ್ ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಮತ್ತು ಸಿಂಹಾದ್ರಿ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಇಲ್ಲಿನ ಶ್ರೀ ಬಾಹುಬಲಿ ಪಾಲಿಟೆಕ್ನಿಕ್ ಕಾಲೇಜು ಆವರಣದಲ್ಲಿ ಆರಂಭವಾದ ಹೋಬಳಿ ಮಟ್ಟದ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಹಂತ-ಹಂತವಾಗಿ ಯಶ್ವಸಿಗೊಳ್ಳಬೇಕೆಂಬ ದೃಷ್ಟಿಯಿಂದ ಶಿಕ್ಷಣ ಇಲಾಖೆ ಇಂತಹ ಕಾರ್ಯಕ್ರಮ ಅಯೋಜನೆ ಮಾಡುತ್ತಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯಬೇಕು. ಕ್ರೀಡೆಯಲ್ಲಿನ ಸೋಲು, ಗೆಲುವನ್ನು ಗಂಭೀರವಾಗಿ ಪರಿಗಣಿಸದೆ ಸ್ಪರ್ಧಾತ್ಮಕವಾಗಿ ಪಾಲ್ಗೊಳ್ಳಬೇಕು ಎಂದರು.
ಕ್ರೀಡಾಕೂಟದ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎಚ್.ಎನ್.ದೀಪಾ, ಪ್ರತಿಭೆ ಎಲ್ಲ ಮಕ್ಕಳಲ್ಲೂ ಇರುತ್ತದೆ. ಅದನ್ನು ಪತ್ತೆ ಹಚ್ಚಿ ಪ್ರೋತ್ಸಾಹಿಸುವ ಕೆಲಸವನ್ನು ಪಾಲಕರು ಮತ್ತು ಶಿಕ್ಷಕರು ಮಾಡಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಟಿಎಪಿಸಿಎಂಎಸ್ ಅಧ್ಯಕ್ಷೆ ಚಂದ್ರಕಲಾ ಮಂಜೇಗೌಡ ಮಾತನಾಡಿ, ಮಕ್ಕಳು ಕ್ರೀಡೆಯಲ್ಲಿ ಹಂತ, ಹಂತವಾಗಿ ಸಾಧನೆ ಮಾಡಬೇಕು. ಇದಕ್ಕೆ ಕಠಿಣ ಅಭ್ಯಾಸ, ನಿಯಮಿತ ವ್ಯಾಯಾಮ ಮುಖ್ಯ ಎಂದು ಸಲಹೆ ನೀಡಿದರು.
ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಕೆ.ಎನ್.ಅನಿಲ್ ಪ್ರಾಸ್ತವಿಕವಾಗಿ ಮಾತನಾಡಿದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಲೇಂದ್ರ, ದೈಹಿಕ ಪರೀವಿಕ್ಷಕ ಮಹಾದೇವ್, ಶ್ರವಣಬೆಳಗೊಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಆಫ್ತಾಭ್ ಪಾಷಾ, ಟಿಎಪಿಸಿಎಂಎಸ್ ನಿರ್ದೇಶಕ ಎನ್.ಕೃಷ್ಣೇಗೌಡ, ಚಿಕ್ತಬಿಳ್ತಿ ಪ್ರವೀಣ್, ಮುಖಂಡ ರಾಮೇಗೌಡ, ಕಾಂತರಾಜಪುರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಮಮತಾರಾಣಿ, ಕ್ರೀಡಾಕೂಟದ ಪದಾಧಿಕಾರಿಗಳಾದ ಸಿ.ಟಿ.ಯಾದವರಾಜ್, ಡಿ.ಕೆ.ರಾಧಾಕೃಷ್ಣ, ಎಸ್.ಜಿ.ದೇವೆಂದ್ರಕುಮಾರ್, ಪಿ.ಟಿ.ಮಂಜೇಶ್ ಹಾಗೂ ಕ್ರೀಡಾಕೂಟದ ಅಧ್ಯಕ್ಷರು, ಸಿಂಹಾದ್ರಿ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಯು.ಕೆ.ಮಂಜೇಗೌಡ ಇತರರು ಇದ್ದರು.